April 20, 2014
ಮಹಿಳಾ ಅಧ್ಯಯನದ ಕೆಲವು ಮರೆತ ಮುಖಗಳು
ಈಗಿರುವ ಪರಿಸ್ಥಿತಿಯ ಅಧ್ಯಯನ ಹೋರಾಟ ಎರಡೂ ಪೂರಕ ಎಂಬುದು ಸದ್ಯದ ಮಹಿಳಾ ಅಧ್ಯಯನವು ಮತ್ತೆ ನೆನಪಿಸಿಕೊಂಡು ಮುಂದಿನ ವಿಚಾರಗಳನ್ನು ಓದಬೇಕೆಂದು ಮನವಿ.
ಮಹಿಳಾ ಅಧ್ಯಯನ ನಡೆಸುವ ಕೆಲವರು ಪ್ರಾಯೋಗಿಕವಾಗಿ ನೇರ ಹೋರಾಟದಲ್ಲಿ ಭಾಗವಹಿಸಲು ಹಿಂದೇಟು ಹಾಕುವುದು ನಿಜ.ಇಲ್ಲಿ ಹೋರಾಟ ನಡೆಸುವವರ ಬಗ್ಗೆ ತಾತ್ಸಾರಕ್ಕಿಂತಲೂ ತಮ್ಮ ‘ಅಕಡೆಮಿಕ್’ ವ್ಯಕ್ತಿತ್ವಕ್ಕೆ ಇದರಿಂದ ಧಕ್ಕೆಯಾಗಬಹುದು ಎಂಬ ತಪ್ಪು ಕಲ್ಪನೆ ಕೆಲವರಲ್ಲಿ ಇದೆ.
ಮಹಿಳಾ ಅಧ್ಯಯನದ ಒಳನೋಟಕ್ಕೆ, ಹೋರಾಟದ ಅನುಭವ ಅಧ್ಯಯನಕ್ಕೆ ಪರಸ್ಪರ ಬೆಂಬಲವಾಗಿರಬೇಕು.ಇದಕ್ಕೆ ಹಿಂದಿನ ಒಂದು ಉದಾಹರಣೆ ನೀಡುವುದಾದರೆ, ಮಹಾತ್ಮ ಗಾಂಧಿ ಅವರ ಅಸಹಕಾರ ಆಂದೋಲನ ನಡೆಯುತ್ತಿದ್ದಾಗ ಒಂದು ಕಡೆ ಖಾದಿ ನೂಲುವುದು, ಚರಕದ ಬಳಕೆ ಮುಂತಾದ ‘ಕಟ್ಟುವ’ ಕೆಲಸಗಳು, ವಿದೇಶಿ ಬಟ್ಟೆಗಳನ್ನು ಸುಡುವುದು, ಪಿಕೆಟಿಂಗ್, ಮದ್ಯದ ಅಂಗಡಿಗಳಿಗೆ ಮುತ್ತಿಗೆ ಮೊದಲಾದ ‘ಹೋರಾಟದ ’ಕೃತ್ಯಗಳು ಜತೆಯಾಗಿ ನಡೆಯುತ್ತಿದ್ದವು. ಇದರ ಜತೆಗೆ ಹಿಂಸೆ–ಅಹಿಂಸೆಯ ವ್ಯಾಖ್ಯಾನವೂ ನಡೆಯುತ್ತಿತ್ತು. ಈಗಿನ ವಾದ–ವಿವಾದ, ಪ್ರತಿಭಟನೆ, ಸೃಜನಶೀಲತೆ ಎಲ್ಲವೂ ಬೆರೆತ ವಾತಾವರಣವೊಂದು ದಲಿತ ಅಧ್ಯಯನ, ಮಹಿಳಾ ಅಧ್ಯಯನ ಮೊದಲಾದ ಚಳವಳಿ ಆಧಾರಿತ ಶಿಸ್ತುಗಳಿಗೆ ಬೇಕು.ಫುಲೆ, ಸರಸ್ವತಿಬಾಯಿ ಫುಲೆ, ಅಂಬೇಡ್ಕರ್ ಇವರಾರಿಗೂ ಸಂಘರ್ಷ ಮತ್ತು ಓದು ಬೇರೆ ಬೇರೆ ವಿಷಯವಾಗಿರಲಿಲ್ಲ.
ಉದಾಹರಣೆಗೆ ರಾಷ್ಟ್ರೀಯ ಮಹಿಳಾ ಆಯೋಗ ಪ್ರತಿ ವರ್ಷ ವರದಿಗಳನ್ನು ಹೊರತರುತ್ತಿದ್ದು, ಅದನ್ನು ಮಹಿಳಾ ಅಧ್ಯಯನದಲ್ಲಿ ಸೇರಿಸುವುದು ಅತ್ಯಾವಶ್ಯಕ.ಅದು ವರ್ಷದಿಂದ ವರ್ಷಕ್ಕೆ ಬದಲಾಗುತ್ತಿರಬೇಕು. ಈ ವರದಿಗಳನ್ನು ವ್ಯವಸ್ಥಿತವಾಗಿ ವಿಶ್ಲೇಷಿಸಿ ವಿಮರ್ಶೆಗೆ ಒಳಪಡಿಸುವುದು ಸಿಲಬಸ್ ಒಳಗೇ ನಡೆಯಬೇಕು.
ಮಹಿಳಾ ಅಧ್ಯಯನದ ಕ್ಷೇತ್ರ ಸೀಮಿತವಾಗದಂತೆ ಕೆಲಸ ನಡೆಯಬೇಕು. ಅಂದರೆ ಈ ಕ್ಷೇತ್ರ ದಿನದಿಂದ ದಿನಕ್ಕೆ ವಿಸ್ತಾರವಾಗಬೇಕು.
ಇಲ್ಲಿರುವ ವಿಷಯಗಳು ದಂತಗೋಪುರದ ಗಾಂಭೀರ್ಯದ ಮುಖವಾಡ ಹೊತ್ತ ಅಧ್ಯಯನಗಳಾಗ ಬೇಕಿಲ್ಲ. ಸಮಾಜದ ಕೊನೆಯ ಮಹಿಳೆಯ ಸ್ಥಿತಿಗತಿ ಸುಧಾರಿಸುವುದು ಹೇಗೆ? ಅಧಿಕಾರ ಕೇಂದ್ರಗಳ ಜತೆ ಅನುಸಂಧಾನ ನಡೆಸುವುದು ಹೇಗೆ? ಎಂಬುದನ್ನು ನೇರವಾಗಿ ಅನುಭವಿಗಳ ಸಹಾಯದಿಂದ ವಿದ್ಯಾರ್ಥಿಗಳಿಗೆ ತಿಳಿಸಿಕೊಡಬೇಕಾಗುತ್ತದೆ.
ಮಹಿಳಾ ಅಧ್ಯಯನದಲ್ಲಿ ನನ್ನ ಸೀಮಿತ ಓದಿಗೆ ಗೋಚರಿಸಿದ ಹಾಗೆ ದೊಡ್ಡ ಮಟ್ಟದ ದೇಸಿ ಮೂಲದ ತಾತ್ವಿಕ ಆಯಾಮವಿಲ್ಲ. ಮಹಿಳಾ ಅಧ್ಯಯನಕ್ಕೆ ಸೇರಬೇಕಾದ ಆಯಾಮಗಳು: ತಂತ್ರಗಳು ಮತ್ತು ಮಹಿಳಾ ಅಧ್ಯಯನ.ಭಾರತೀಯ ಸಾಹಿತ್ಯದಲ್ಲಿ ವೈದಿಕ, ಜೈನ ,ಬೌದ್ಧ, ಆದಿವಾಸಿ, ಜಾನಪದ ಸಾಹಿತ್ಯದಷ್ಟೆ ಮಹತ್ವದ ಆದರೆ ಇದುವರೆಗೂ ಇಡೀ ಭಾರತೀಯ ಶಿಕ್ಷಣದಲ್ಲಿ ಮರ್ಯಾದೆಯ ಸ್ಥಾನ ದೊರೆತಿಲ್ಲ. ತಂತ್ರ ಎಂದರೆ ಈಗಲೂ ಮಾಟ, ವಶೀಕರಣ ಎಂಬ ಅರ್ಥವೇ ಪ್ರಬಲವಾಗಿದೆ. ಸರ್ ಜಾನ್ ವುಡ್ರೋಫ್ ಮೊದಲಿಗೆ ತಂತ್ರದ ಅನುವಾದ ವ್ಯಾಖ್ಯಾನಕ್ಕೆ ತೊಡಗಿದರು, ಪಿ.ಸಿ.ಬಾಗಚಿ, ಗೋಪಿನಾಥ ಕವಿರಾಜ ಅದನ್ನು ವಿಸ್ತರಿಸಿದರು. ಮಾರ್ಕ್ಸ್ ವಾದಿ, ದೇವಿ ಪ್ರಸಾದ್ ಚಟ್ಟೋಪಾಧ್ಯಾಯರು ತಮ್ಮ ‘ಲೋಕಾಯತ’ ದಲ್ಲಿ ಒಂದು ಅಧ್ಯಾಯವನ್ನೇ ತಂತ್ರಗಳಿಗೆ ಮೀಸಲಿಟ್ಟಿದ್ದಾರೆ. ಆದರೆ ಮಹಿಳಾ ಅಧ್ಯಯನದ ಕೇಂದ್ರ ಭೌತಿಕವಾದ ಸಮಸ್ತ ಆಯಾಮಗಳ ಮಹಿಳೆಯಾಗಿರುವಂತೆ, ತಂತ್ರಗಳ ಫಿಲಾಸಫಿಯೇ ಮಾತೃ ತತ್ವದ ಉಪಾಸನೆಯಾಗಿದೆ.ಈ ಕುರಿತು ಲಿಖಿತ, ಅಲಿಖಿತ ಸಾಹಿತ್ಯವಿರುವಂತೆ ಕಲೆ, ಆರೋಗ್ಯ ವಿಜ್ಞಾನವೂ ಇದೆ. ಮಹಿಳಾ ಅಧ್ಯಯನ ದಶದಿಕ್ಕುಗಳಲ್ಲೂ, ಸಾಧ್ಯವಿರುವ ಎಲ್ಲಾ ಆಯಾಮಗಳಲ್ಲೂ ಹಬ್ಬಬೇಕಿದೆ.ಪಾಶ್ಚಾತ್ಯ ಲೋಕದೃಷ್ಟಿಯಂತೆ ತೃತಿಯ ಜಗತ್ತಿನ ಬೇರೆ ಬೇರೆ ಲೋಕದೃಷ್ಟಿಗಳೂ ಅದರಲ್ಲಿ ಪ್ರವೇಶ ಪಡೆಯಬೇಕಿದೆ.
ಕಳೆದ ಮೂವತ್ತು ವರ್ಷಗಳಲ್ಲಿ ಸಾಂಸ್ಕೃತಿಕ ಓದು ವಿಶೇಷವಾಗಿ ಮಾನವಿಕ ಶಿಕ್ಷಣದ ಭಾಗವಾಗಿ ಒಳಗೆ ಬಂದಿದೆ. ಆದರೆ ಮಹಿಳಾ ಅಧ್ಯಯನವು ಈ ಆಯಾಮದಲ್ಲಿ ಮರೆತ ಪುಟವಾಗಿಬಿಟ್ಟಿದೆ. ವಿಶಾಲವೂ ಸಂಕೀರ್ಣವೂ ಆದ ಸಾಂಸ್ಕೃತಿಕ ಅಧ್ಯಯನದ ಅಖಂಡ ಹಾಸು ಹೊಕ್ಕಾದ ಭಾಗವಾಗಿ ಮಹಿಳಾ ಅಧ್ಯಯನ ಬೆಳೆಯಬೇಕಾಗಿದೆ.
ವೀಣಾ ಮಜುಂದಾರ್,ಶರ್ಮಿಳಾ ರೇಗೆ ಮೊದಲಾದವರ ಬಗ್ಗೆ ಸಾಹಿತ್ಯ ಸೃಷ್ಟಿಯಾಗುತ್ತಿಲ್ಲ.ಮಹಿಳೆಯರ ಸಂಘಟಿತ ಹೋರಾಟದ ಬಗ್ಗೆ ಚಿತ್ರಣ ಕಟ್ಟಿಕೊಡುವ ಆಂದೋಲನದ ಕೃತಿಗಳು ಬರುತ್ತಿಲ್ಲ.It is a special study not a separate study-–ಎಂಬ ಮಾತು ಮತ್ತೆ ಚಲಾವಣೆಗೆ ಬರಬೇಕು.
ಹಿಂದೆ ಡಿ.ಆರ್.ನಾಗರಾಜ ಅವರು ಗಾರ್ಗಿ ಪ್ರತಿಭೆ, ಮೈತ್ರೇಯಿ ಪ್ರತಿಭೆ ಕುರಿತು ಹೊಸ ಕಲ್ಪನೆ ಬರುವ ಮಾತು ಆಡಿದ್ದರು, ಆದರೆ ಅದನ್ನು ಯಾರಾದರೂ ಮುಂದುವರೆಸಿ ಚರ್ಚೆಯನ್ನು ವಿಸ್ತರಿಸಬೇಕಿತ್ತು, ಈಗಲೂ ಆ ಕೆಲಸ ಕೈಗೆತ್ತಿಕೊಳ್ಳಬೇಕಿದೆ.
ಕರ್ನಾಟಕದ ಮಹಿಳಾ ಅಧ್ಯಯನದ ವಿಭಾಗಗಳು ಎದುರಿಸುತ್ತಿರುವ ದೊಡ್ಡ ಕೊರತೆಯೆಂದರೆ ಸೂಕ್ತವಾದ ಆಕರಗಳದ್ದು. ಬಿ.ಎನ್.ಸುಮಿತ್ರಾಬಾಯಿ, ತೇಜಸ್ವಿನಿ ನಿರಂಜನ, ಎನ್.ಗಾಯತ್ರಿ ಇವರು ಸಂಕಲಿಸಿರುವ, ರಚಿಸಿರುವ ಕೆಲವು ಕೃತಿಗಳನ್ನು ಬಿಟ್ಟರೆ ಇವತ್ತಿಗೂ ಮಹಿಳಾ ಅಧ್ಯಯನದ ವಿದ್ಯಾರ್ಥಿಗಳು ಪರಾಮರ್ಶನೆ ಮಾಡಲು ಕನ್ನಡದಲ್ಲಿ ಪುಸ್ತಕಗಳಿಲ್ಲ. ಯುರೋಪಿನ ವಿವಿಧ ಭಾಷೆಗಳಲ್ಲಿ ಇರುವ ಮಹಿಳಾ ಅಧ್ಯಯನದ ಕೃತಿಗಳು ಕನ್ನಡಕ್ಕೆ ಬರಬೇಕು. ಶ್ರೀಮತಿಯವರು ಅನುವಾದಿಸಿದ ಸಿಮ ದಿ ಬೊವಾ ಅವರ ‘ದಿ ಸಿಕೆಂಡ್ ಸೆಕ್ಸ್’ ಮಹಿಳಾ ಅಧ್ಯಯನದ ಅನುವಾದಗಳಲ್ಲಿ ಮಹತ್ವದ ಸ್ಥಾನಗಳಿಸಿದೆ. ಈ ರೀತಿಯ ಕೃತಿಗಳ ಅನುವಾದದ ಸಂಖ್ಯೆ ಹೆಚ್ಚಬೇಕು. ಈ ಅನುವಾದಗಳು ತಯಾರಾಗುವಾಗ ಸೂಕ್ತವಾದ ಟಿಪ್ಪಣಿಗಳು, ನಮ್ಮ ಸಂದರ್ಭಕ್ಕೆ ಈ ಅರಿವನ್ನು ಒಳಗೆ ತೆಗೆದು ಕೊಳ್ಳುವ ಬಗೆಗಳನ್ನೂ ಚರ್ಚಿಸುವಂಥ ಮುನ್ನುಡಿಗಳು ಬೇಕಾಗುತ್ತವೆ.
ಇಲ್ಲಿ ವಹಿಸಬೇಕಾದ ಒಂದು ಎಚ್ಚರವೆಂದರೆ ವಿಚಾರದ ರೈಲು ಗಾಡಿಯಲ್ಲಿ ಪಶ್ಚಿಮದ ಎಂಜಿನ್ನಿಗೆ ನಮ್ಮ ಬೋಗಿಗಳನ್ನು ಕಟ್ಟಿಹಾಕಬಾರದು.
ಮಹಿಳಾ ಪತ್ರಕರ್ತೆಯರು,ಹೋರಾಟಗಾರ್ತಿಯರು, ಸಾಮಾಜಿಕ ನಾಯಕಿಯರು – ಪರಿಸರ ಕಾರ್ಯಕರ್ತೆಯರು, ರಾಜಕಾರಣಿಗಳು, ಉದ್ಯಮಿಗಳು, ಕಾನೂನು ಚಿಂತಕಿಯರು ಮತ್ತು ಯಾವುದೇ ಗುಂಪಿಗೂ ಸೇರದ ಮಹಿಳಾ ನಾಯಕಿಯರು ಇವರೆಲ್ಲರನ್ನೂ ಕುರಿತು 100 ಪುಟಗಳ ಕಿರು ಹೊತ್ತಿಗೆಗಳು ಮಹಿಳಾ ಅಧ್ಯಯನದ ವಿದ್ಯಾರ್ಥಿಗಳ ಕೈಗೆ ತಲುಪಿದರೆ ಎಷ್ಟು ಚೆನ್ನಾಗಿರುತ್ತದೆ?
ಮಹಿಳಾ ಅಧ್ಯಯನದ ಹಣೆಪಟ್ಟಿ ಹೊರದೆ ಇರುವ ಅನೇಕರು ಮಹಿಳೆ ಕುರಿತ ಮಹತ್ವದ ವಿಷಯಗಳನ್ನು ಬರೆದಿದ್ದಾರೆ, ಚರ್ಚಿಸಿದ್ದಾರೆ.ಇದರಲ್ಲಿ ಓಶೋ, ಜಿಡ್ಡು ಕೃಷ್ಣಮೂರ್ತಿ,ಧರಂಪಾಲ್ ಮೊದಲಾದವರಿದ್ದಾರೆ. ಇವರ ಚಿಂತನೆಗಳು ಮಹಿಳಾ ಅಧ್ಯಯನದ ಬಿ.ಎ., ಎಂ.ಎ. ಅಧ್ಯಯನದ ಪಠ್ಯಗಳಾಗುವ ಎಲ್ಲಾ ಅರ್ಹತೆಗಳನ್ನು ಪಡೆದಿವೆ.
ನವೋದಯದ ಸಾಹಿತಿಗಳ ಸಾಲಿನಲ್ಲಿ ಎಂದಿಗೂ ಕಲ್ಯಾಣಮ್ಮ, ನಂಜನಗೂಡು ತಿರುಮಲಾಂಬಾ, ಸೇರುವುದಿಲ್ಲ. ಏಕೆ? ರಂ.ಶ್ರೀ.ಮುಗಳಿ, ಎಲ್.ಎಸ್.ಶೇಷಗಿರಾವ್, ಕೀರ್ತಿನಾಥ ಕುರ್ತಕೋಟಿ ಇವರು ಬರೆದಿರುವ ಹೊಸಗನ್ನಡ ಸಾಹಿತ್ಯ ಚರಿತ್ರೆಗಳಲ್ಲಿ ಕನ್ನಡದಪ್ರಮುಖರಾದ ಲೇಖಕಿಯರಿಗೆಹೇಳಿಕೊಳ್ಳುವ ‘ಸ್ಪೇಸ್’ದೊರೆತಿಲ್ಲ. ದ.ರಾ.ಬೇಂದ್ರೆ, ಕೆ.ಎಸ್.ನರಸಿಂಹಸ್ವಾಮಿ ಇವರು ಖಂಡಿತವಾಗಿ ಸ್ತ್ರೀಸಂವೇದನೆ ಇದ್ದ ಲೇಖಕರು. ಬೇಂದ್ರೆ ಅವರ ಅನೇಕ ಮುಖ್ಯ ಕವನಗಳ ನಿರೂಪಕಿ ಹೆಣ್ಣೇ ಆಗಿದ್ದಾಳೆ. ಸಾಹಿತ್ಯ ಚರಿತ್ರೆಗಳ ನಿರ್ಮಾಣ ಕನ್ನಡದ ಸಂದರ್ಭದಪ್ರಮುಖ ರಾಜಕಾರಣಗಳಲ್ಲೊಂದು.ಅದರಲ್ಲಿ ಮಹಿಳಾ ಅಧ್ಯಯನದ ದೃಷ್ಟಿಯಿಂದ ರಾಜಕೀಯ ಮಾಡಬೇಕಾದ ಆವಶ್ಯಕತೆ ಇದೆ.
ಲಿಂಗ ಅಧ್ಯಯನದ (gender studies) ಒಂದು ಭಾಗವಾಗಿ ಮಹಿಳಾ ಅಧ್ಯಯನ ನಡೆಯಬೇಕು,ಆಗ ಅದನ್ನು ದ್ವೀಪವಾಗಿಸುವ ಪ್ರಯತ್ನ ಸ್ವಲ್ಪವಾದರೂ ಕಮ್ಮಿಯಾಗುತ್ತದೆ.
ಮಹಿಳಾ ಅಧ್ಯಯನ, ಪುರುಷ ಅಧ್ಯಯನ (men studies) ಸಲಿಂಗಿಗಳು, ಟ್ರಾನ್ಸ್ ಜೆಂಡರ್ ನವರ ಅಧ್ಯಯನಗಳು (LGBT studies), ಲೈಂಗಿಕತೆ ಕುರಿತ ಅಧ್ಯಯನಗಳು (sexuality) ಒಂದಕ್ಕೊಂದು ಬೆರೆತ ವಾತಾವರಣದಲ್ಲಿ ಮಹಿಳಾ ಅಧ್ಯಯನ ಮತ್ತೊಮ್ಮೆ ಗರಿಗೆದರಬಹುದು.
ಕನ್ನಡದ ಪ್ರಜ್ಙಾವಂತ ಪುರುಷರ ಗುಂಪು ವಿವಿಧ ಸಂದರ್ಭಗಳಲ್ಲಿ ಹೇಗೆ ಮಹಿಳಾ ವಿಷಯಗಳಿಗೆ ಸ್ಪಂದಿಸಿದೆ ಎಂಬುದು ಮಹಿಳಾ ಅಧ್ಯಯನದ ಒಂದು ಭಾಗವಾಗಬೇಕು. ತಕ್ಷಣಕ್ಕೆ ನೆನಪಾಗುವುದು ಅರವತ್ತು ಎಪ್ಪತ್ತು ವರ್ಷಗಳ ಹಿಂದೆ ಶಂಬಾ ಜೋಶಿ ಅಡುಗೆ ಮನೆ ಕುರಿತು ಬರೆದ ಬರೆಹ, ಪಂಡಿತ ತಾರಾನಾಥರು ಮಹಿಳೆ ಮತ್ತು ಪುರುಷರ ಲೈಂಗಿಕ ಜೀವನದ ವಿಷಯಗಳ ಮೇಲೆ ಬರೆದಿರುವುದು ,ಡಿವಿಜಿಯವರು ಅಬಲಾಶ್ರಮದ ಬಗ್ಗೆ ಬರೆದಿರುವುದು –ಇವುಗಳನ್ನು ಈಗ ಮಹಿಳಾ ಅಧ್ಯಯನ, ಮರುವಿಚಾರದ ದೃಷ್ಟಿಯಿಂದ ನೋಡಬೇಕು.
ಕ್ರಿಸ್ತಶಕದ ಮೂರನೇ ಮಿಲೆನಿಯಂನಲ್ಲಿ ಮಹಿಳೆ, ಪರಿಸರ ಇವು ಮುಂಚೂಣಿಯ ವಿಷಯಗಳಾಗಬೇಕು.ಇಲ್ಲಿ ಯಾರು ಜಾಗ ಬಿಡುವುದಿಲ್ಲ, ನಾವೆ ಜಾಗ ಕಲ್ಪಿಸಿಕೊಳ್ಳಬೇಕು.
Subscribe to:
Post Comments (Atom)
No comments:
Post a Comment