April 20, 2014

ಫೀಲ್ಡ್‌ ಮಾರ್ಷಲ್‌ ಮಾಣಿಕ್ ಷಾ

1971ರ ಡಿಸೆಂಬರ್ ವೇಳೆಯಲ್ಲಿ ಸೈನ್ಯದ ಮುಖ್ಯಸ್ಥ ಮಾಣಿಕ್ ಷಾ ಅವರಿಗೆ ಪ್ರಧಾನಿ ಇಂದಿರಾ ಗಾಂಧಿಯಿಂದ ಬುಲಾವ್ ಹೇಳಿ ಕಳುಹಿಸಿದರು, ಅವರು ಬಂದೊಡನೆ ಆಕೆ ಕೇಳಿದ ಮೊದಲ ಪ್ರಶ್ನೆ: ‘ಈಗ ಯುದ್ಧ ಮಾಡಲು ಸೈನ್ಯ ಸಿದ್ಧವೇ?’ ಗುಂಡಿನಂತೆ ಬಂದ ಉತ್ತರ: “I am always ready, sweetie.” ಅವರು ಇಂದಿರಾ ಅವರನ್ನು ಮೇಡಂ ಎಂದು ಕರೆಯಲು ಒಪ್ಪುತ್ತರಲಿಲ್ಲ. ಹೀಗೆ ನೇರ ನಡೆಯ ಮುಕ್ತ ಮಾತಿನ ವ್ಯಕ್ತಿ ಮಾಣಿಕ್ ಷಾ. ಈ ಸಂಭಾಷಣೆಗೆ ಒಂದು ಕಿರು ಹಿನ್ನೆಲೆ ಇದೆ. ಬಾಂಗ್ಲಾ ದೇಶವು ಪಾಕಿಸ್ತಾನದಿಂದ ಬೇರ್ಪಟ್ಟು ಸ್ವತಂತ್ರ ದೇಶವಾಗಬೇಕು ಎಂದು ಪೂರ್ವ ಪಾಕಿಸ್ತಾನ ಪಶ್ಚಿಮ ಪಾಕಿಸ್ತಾನದ ವಿರುದ್ಧ ಒಂಬತ್ತು ತಿಂಗಳು ಯುದ್ಧ ಮಾಡಿತು, ಇದಕ್ಕೆ ‘ಮುಕ್ತಿಯುದ್ಧ’ ಎಂಬ ಹೆಸರು ಬಂತು. ಈ ಯುದ್ಧ 1971ರ ಮಾರ್ಚ್‌ನಲ್ಲಿ ಮುಜಬುರ್ ರೆಹಮಾನ್ ನೇತೃತ್ವದಲ್ಲಿ ಆರಂಭವಾಗಿ ಒಂಬತ್ತು ತಿಂಗಳು ನಡೆಯಿತು. ಬಂಗಾಳದ ನಾಗರಿಕರು, ವಿದ್ಯಾರ್ಥಿಗಳು, ಸೈನಿಕರು ಸೇರಿ ನಡೆಸಿದ ಈ ಹೋರಾಟವನ್ನು ಪಾಕಿಸ್ತಾನದ ಸೈನ್ಯ ದಮನ ಮಾಡಲು ಕ್ರೂರವಾಗಿ ವರ್ತಿಸಿತು. ಅಸಂಖ್ಯ ಮಹಿಳೆಯರ ಮೇಲೆ ಪಾಕಿಸ್ತಾನ ಮತ್ತು ಮತೀಯ ಕೋಮುವಾದಿಗಳು ಅತ್ಯಚಾರವೆಸಗಿದರು. ಆಗ ಬಾಂಗ್ಲಾಪರ ನಾಗರಿಕರಿಗೆ ಭಾರತ, ಆರ್ಥಿಕ, ರಾಜತಾಂತ್ರಿಕ,ಸೈನಿಕ ಬೆಂಬಲ ನೀಡಿತು.ಭಾರತಕ್ಕೆ ಮನೆ ಮಠ ಕಳೆದುಕೊಂಡ ಲಕ್ಷಾಂತರ ನಿರಾಶ್ರಿತರು ಹರಿದು ಬಂದರು. ಈ ಸಮಯದಲ್ಲಿ ಭಾರತ ಸರ್ಕಾರಕ್ಕೆ ಪಾಕಿಸ್ತಾನದ ಮೇಲೆ ಯುದ್ಧ ಘೋಷಿಸುವುದು ಅನಿವಾರ್ಯವಾಗಿತ್ತು. ಇದು ಮಾಣಿಕ ಷಾ ಎದುರಿಗಿದ್ದ ಸವಾಲು, ವಸ್ತು ಸ್ಥಿತಿ. ಏಪ್ರಿಲ್‌ 1971ರಲ್ಲಿ ಪೂರ್ವ ಪಾಕಿಸ್ತಾನದಿಂದ ಲಕ್ಷಾಂತರ ನಿರಾಶ್ರಿತರು ಗಡಿ ದಾಟಿ ಭಾರತಕ್ಕೆ ಬಂದಿದ್ದರು. ಪ್ರಧಾನಿ ಇಂದಿರಾ ಆಗಲೆ ಪಾಕಿಸ್ತಾನದ ಮೇಲೆ ಯುದ್ಧ ಹೂಡಲು ಕಾತುರರಾಗಿದ್ದರು. ಆಗ ಕ್ಯಾಬಿನೆಟ್ ಸಭೆ ನಡೆದಾಗ ಇಂದಿರಾ ಇದೇ ಮಾತನ್ನು ಮುಂದಿಟ್ಟರು. ಅದನ್ನು ಯಾವುದೇ ಮುಲಾಜಿಲ್ಲದೇ ವಿರೋಧಿಸಿದವರು ಮಾಣಿಕ್‌ ಷಾ. ಮಳೆಗಾಲದಲ್ಲಿ ಯುದ್ಧ ಹೂಡಬೇಕಾಗಿರುವ ಪಶ್ಚಿಮ ಪಾಕಿಸ್ತಾನದಲ್ಲಿ ಪ್ರವಾಹ ಹೆಚ್ಚಿರುತ್ತದೆ, ಅಲ್ಲದೆ ಸೈನ್ಯದ ಎರಡು ಕಾಲಾಳು ಪಡೆಗಳು ಬೇರೆ ಕಡೆ ಕಾರ್ಯ ನಿರತವಾಗಿದ್ದವು. ಸೈನ್ಯದ 189 ಟ್ಯಾಂಕ್‌ಗಳ ಪೈಕಿ 11 ಮಾತ್ರ ಯುದ್ಧಕ್ಕೆ ಸಿದ್ಧವಿದ್ದವು. ಮಾಣಿಕ್ ಈ ವಾಸ್ತವಗಳನ್ನು ಪ್ರಧಾನಿಗೆ ವಿವರಿಸಿ, ಹಾಗೆಂದು ಯುದ್ಧ ಬೇಡವೆಂದಲ್ಲ, ಕಾದು ಅದೇ ವರ್ಷದ ಕೊನೆಗೆ ಯುದ್ಧ ಮಾಡಲು ಪ್ರಧಾನಿ ಆದೇಶ ನೀಡಿದರೆ ಭಾರತಕ್ಕೆ ಗೆಲುವು ಖಂಡಿತ ಎಂದು ಭರವಸೆ ನೀಡಿದರು. ಇನ್ನು ಯುದ್ಧ ಶುರುವಾಗಲು ಆರೆಂಟು ತಿಂಗಳಿರುವಾಗಲೇ ಭವಿಷ್ಯದ ಫಲಿತಾಂಶ ಭಾರತದ ಪರವಿರುತ್ತದೆ ಎಂದು ನುಡಿದು, ಅಂತೆಯೇ ಅದನ್ನು ಸಾಧಿಸಿ ತೋರಿಸಿದ ವೀರ ನಾಯಕ ಮಾಣಿಕ್ ಷಾ. ಈ ಸಂದರ್ಭದಲ್ಲಿ ಮಾತಿನ ಚಕಮಕಿಯಲ್ಲಿ ಷಾ ಹೇಳಿದ ಒಂದು ಮಾತು: ‘ಸೇವೆಯಿಂದ ವಜಾ ಆಗುವುದು ಮತ್ತು ಫೀಲ್ಡ್‌ ಮಾರ್ಷಲ್‌ ಎನಿಸಿಕೊಳ್ಳುವುದರ ನಡುವೆ ಗೆರೆ ಬಲು ತೆಳು’. ಮಾಣಿಕ್ ಷಾ ನಡೆಸಿದ ಮಿಂಚಿನ ದಾಳಿಗೆ ಢಾಕಾ ವಶವಾಗಿ, ಪಾಕಿಸ್ತಾನದ 93,000 ಸೈನಿಕರು ಯುದ್ಧ ಕೈದಿಗಳಾಗಿ ವಶವಾದರು.ಅಮೆರಿಕಾ ಮತ್ತು ವಿಶ್ವಸಂಸ್ಥೆಯ ತೀವ್ರ ಮಧ್ಯಪ್ರವೇಶದಿಂದಷ್ಟೆ ಭಾರತ ಕದನ ವಿರಾಮ ಘೋಷಿಸಿತು. ನೂತನ ಬಾಂಗ್ಲಾ ದೇಶದ ರಾಜಧಾನಿ ಢಾಕಾಗೆ ಹೋಗಿ ಪಾಕ್ ಸೈನಿಕರ ಶರಣಾಗತಿಯನ್ನು ಸ್ವೀಕರಿಸಲು ಮಾಣಿಕ್ ಷಾಗೆ ಭಾರತದ ಸರ್ಕಾರ ಸೂಚಿಸಿತು. ಆದರೆ ಈ ಗೌರವ ಪೂರ್ವ ವಲಯದ ಸೇನಾ ಮುಖ್ಯಸ್ಥರಿಗೆ ಸಲ್ಲಬೇಕು ಎಂದು ನಿರಾಕರಿಸಿದ ಪ್ರಾಮಾಣಿಕ ಮಾಣಿಕ ಷಾ. 1971ರಲ್ಲಿ ಪಶ್ಚಿಮ ಪಾಕಿಸ್ತಾನದ ಮುಕ್ತಿ, ಭಾರತ –ಪಾಕ್‌ ಸಮರ ಮತ್ತು ಬಾಂಗ್ಲಾ ಉದಯ ಈ ಮೂರು ಮುಖ್ಯ ಘಟನೆಗಳ ಹಿಂದೆ ಮಾಣಿಕ್‌ ಷಾ ಅವರ ಪ್ರಚಂಡ ಚಾಣಕ್ಯ ತಲೆ ಕೆಲಸ ಮಾಡಿತ್ತು. ಈ ಯುದ್ಧವನ್ನು ಪ್ರಪಂಚದ ಅತಿ ಕ್ಷಿಪ್ರ ಸಮರ ಎಂದು ಪರಿಣತರು ಪರಿಗಣಿಸಿದ್ದಾರೆ. ಈ ಗೆಲುವಿನಿಂದ ಇಂದಿರಾ ಗಾಂಧಿ ವರ್ಚಸ್ಸು ಹೆಚ್ಚಿದ್ದು ಈಗ ಇತಿಹಾಸ.
ಸ್ವಾತಂತ್ರ್ಯ ಪೂರ್ವ ಭಾರತದ ಅಮೃತಸರದಲ್ಲಿ ಪಾರ್ಸಿ ಕುಟುಂಬದಲ್ಲಿ ಏಪ್ರಿಲ್‌ 3, 1914ರಲ್ಲಿ ಜನಿಸಿದವರು ಮಾಣಿಕ್. ಅವರ ತಂದೆ ಹೊರ್ಮುಸ್ಜಿ ಮಣಿಕ್‌ ಷಾ ವೃತ್ತಿಯಲ್ಲಿ ವೈದ್ಯರು. ತಾಯಿ ಹೀರಾಬಾಯಿ. ಗುಜರಾತಿನಿಂದ ಪಂಜಾಬಿಗೆ ವಲಸೆ ಬಂದ ಕುಟುಂಬ ಇದು. ಬಾಲ್ಯದಿಂದಲೂ ಯಾರಿಗೂ ಮಣಿಯದ ತನ್ನದೇ ಸರಿ ಎಂಬ ಧೋರಣೆ ಇವರಿಗಿತ್ತು. ನೈನಿತಾಲಿನ ಶೆರ್‌ವುಡ್‌ ಕಾಲೇಜಿನಲ್ಲಿ ಓದಿದ ಮೇಲೆ ಮೆಡಿಸಿನ್‌ ಓದಲೆಂದು ತನ್ನನ್ನು ಲಂಡನ್‌ಗೆ ಕಳುಹಿಸು ಎಂದು ತಂದೆಯನ್ನು ಮಾಣಿಕ್ ಕೇಳಿದರು. ತಂದೆ ಮಗ ಕೋರಿಕೆಗೆ ಒಪ್ಪಲಿಲ್ಲ. ಸರಿ ಈ ವೀರಪುತ್ರ ಮನೆಯಲ್ಲಿ ಯಾರಿಗೂ ಹೇಳದೆ ಇಂಡಿಯನ್‌ ಮಿಲಿಟರಿ ಆರ್ಮಿಗೆ ಸೇರಲು ಇದ್ದಂಥ ಪರೀಕ್ಷೆಗೆ ಬರೆದು ಅದರಲ್ಲಿ ಪಾಸಾದರು. ತಂದೆ ಏನಾದರೂ ಕೂಡಲೆ ಒಪ್ಪಿದ್ದರೆ ದೇಶ ಒಬ್ಬ ಫೀಲ್ಡ್‌ ಮಾರ್ಷಲ್‌ನನ್ನು ಕಳೆದುಕೊಳ್ಳುತ್ತಿತ್ತು! 1932ರಲ್ಲಿ ಮಾಣಿಕ್ ಷಾ ಸೈನ್ಯ ಸೇರಿದರು. ಆಗ ಎರಡನೇ ಮಹಾಯುದ್ಧಕ್ಕೆ ಇನ್ನೂ ಕಾಲದ ಕುದಿ ಬಂದಿರಲಿಲ್ಲ. ಆಗ ಭಾರತದಲ್ಲಿದ್ದ ಸೈನ್ಯ ಬ್ರಿಟಿಷ್ ಇಂಡಿಯನ್‌ ಆರ್ಮಿಯಾಗಿತ್ತು. ಅದರಲ್ಲಿ ದುಡಿದು ಮುಂದೆ ಭಾರತ ಸ್ವತಂತ್ರವಾದಾಗ ದೊಡ್ಡ ಹುದ್ದೆಗಳನ್ನು ನಿಭಾಯಿಸಿದವರು ಹಲವರಿದ್ದಾರೆ. ಉದಾಹರಣೆಗೆ ಕನ್ನಡಿಗರೇ ಆದ ಜನರಲ್‌ ತಿಮ್ಮಯ್ಯ, ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ. ಈ ಪಂಕ್ತಿ ಪಾವನರ ಸಾಲಿಗೆ ಸೇರಿದವರು ಮಾಣಿಕ್‌ ಷಾ. ಎರಡು ವರ್ಷಗಳ ನಂತರ ವಿವಿಧ ಕಠಿಣ ಪರೀಕ್ಷೆಗಳಲ್ಲಿ ತೇರ್ಗಡೆಯಾದ ಮೇಲೆ ಮಾಣಿಕ್‌, ಸೆಕಂಡ್‌ ಲೆಫ್ಟಿನೆಂಟ್‌ ಎನಿಸಿಕೊಂಡರು. ಗೆದ್ದವರು ಚರಿತ್ರೆ ಬರೆಯುವರು ಎಂಬ ಮಾತಿದೆ. ಅಂತೆಯೇ ಗೆದ್ದ ದೇಶದ ದಂಡನಾಯಕರು ಕೂಡ ಚರಿತ್ರೆಯಲ್ಲಿ ಪ್ರಮುಖ ಪಾತ್ರ ವಹಿಸುವರು. ಬ್ರಿಟಿಷ್ ಆಡಳಿತಯುಗದಲ್ಲಿ ಅವರು ಬ್ರಿಟಿಷ್ ಬೆಟಾಲಿಯನ್‌ ಆದ ರಾಯಲ್‌ ಸ್ಕಾಟ್ಸ್‌ ಮತ್ತು ನಾಕನೇ ಬೆಟಾಲಿಯನ್‌, 12ನೇ ಫ್ರಾಂಟಿಯರ್‌ ಫೋರ್ಸ್‌ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸಿದರು. ಎರಡನೇ ಮಹಾಯುದ್ಧದಲ್ಲಿ ಬರ್ಮಾ ಯುದ್ಧದಲ್ಲಿ ಮಾಣಿಕ್‌ ಷಾ ಜಪಾನಿ ಸೈನ್ಯದ ಎದುರು ಹೋರಾಡಿ ಪಾಗೋಡಾ ಬೆಟ್ಟವನ್ನು ವಶಪಡಿಸಿಕೊಂಡ ಮೇಲೆ ಅವರ ಮೇಲೆ ಜಪಾನಿ ಸೈನಿಕರು ಗುಂಡಿನ ಮಳೆ ಗರೆದರು. ಅವರ ಎದೆ,ಹೊಟ್ಟೆ, ಯಕೃತ್ತಿಗೆ ಎಲ್‌ಎಂಜಿ ಗುಂಡುಗಳು ತಾಗಿದ್ದವು. ಅವರು ಬದುಕುವುದಿಲ್ಲ, ಆದರೆ ಅವರ ಸೇವೆ ಮರೆತು ಹೋಗಬಾರದು ಎಂದು ಮೇಜರ್‌ ಜನರಲ್‌ ಡಿ.ಟಿ.ಕೋವನ್‌ ತಮ್ಮ ಸ್ವಂತದ ‘ಮಿಲಿಟರಿ ರಿಬ್ಬನ್‌’ಅನ್ನು ಮಾಣಿಕ್‌ ಅವರ ತೋಳಿಗೆ ಬಿಗಿದು ಗೌರವ ಸೂಚಿಸಿದ್ದರು.ಒಬ್ಬ ಯೋಧನ ಪಾಲಿಗೆ ಇದು ದೊಡ್ಡ ಗೌರವ. ಸ್ವಾತಂತ್ರ್ಯದ ನಂತರದ ಭಾರತ –ಪಾಕ್ ಸಮರ, ನಿರಾಶ್ರಿತರಿಗೆ ಆಸರೆ ನೀಡುವುದು ಮೊದಲಾದ ಸವಾಲಿನ ಸಂದರ್ಭಗಳಲ್ಲಿ ಅವರು ಗುರುತರ ಕೆಲಸ ಮಾಡಿದರು. ನಾಗಾಲ್ಯಾಂಡ್‌ನಲ್ಲಿ ಅಕ್ರಮ ಒಳನುಸುಳುಕೋರರನ್ನು ಇವರು ಎದುರಿಸಿದ ಸಂದರ್ಭದಲ್ಲಿ ಭಾರತ ಸರ್ಕಾರ ಮಾಣಿಕ್ ಷಾ ಅವರಿಗೆ 1968ರಲ್ಲಿ ಪದ್ಮ ಭೂಷಣ ನೀಡಿ ಗೌರವಿಸಿತು. ಅವರಿಗೆ ಪದ್ಮ ವಿಭೂಷಣ ಕೂಡ ಬಯಸದೆ ಬಂತು. ಅವರು ಜೀವನದಲ್ಲಿ ಪಡೆದ ದೊಡ್ದ ಗೌರವ 1973ರಲ್ಲಿ ಫೀಲ್ಡ್ ಮಾರ್ಷಲ್‌ ಗೌರವ. ಪ್ರಧಾನ ಮಹಾದಂಡನಾಯಕರೆನಿಸಿದ ಅಪರೂಪದ ಯೋಧ ಮಾಣಿಕ್‌ ಜೀವನ ಕೂಡ ವಿವಾದಾತೀತವಾಗಿರಲಿಲ್ಲ. ಅವರು ಭಾರತದ ಸೈನಿಕ ರಹಸ್ಯಗಳನ್ನು ಪಾಕಿಸ್ತಾನಕ್ಕೆ ಹಣಕ್ಕೆ ಮಾರಿದ್ದರು ಎಂದು ಪಾಕಿಸ್ತಾನದ ಫೀಲ್ಡ್ ಮಾರ್ಷಲ್‌ ಆಗಿದ್ದ ಅಯೂಬ್‌ ಖಾನ್ ಅವರ ಮಗ ಗೊಹರ್‌ ಅಯೂಬ್ ಆರೋಪ ಮಾಡಿದ್ದರು, ಆದರೆ ಭಾರತದ ರಕ್ಷಣಾ ಇಲಾಖೆ ಅದನ್ನು ನಿರಾಕರಿಸಿದ್ದು ಸರಿಯಾಗೇ ಇತ್ತು. ಅವರು ತಮ್ಮ ಪ್ರಾಣವನ್ನು ಮಾರಿಕೊಂಡಿದ್ದು ಧ್ಯೇಯಕ್ಕೆ ಮಾತ್ರ. ಬೇಸರದ ಸಂಗತಿ ಎಂದರೆ ಸ್ವಾತಂತ್ರ್ಯಾ ನಂತರದ ಎಲ್ಲ ಪ್ರಮುಖ ಸಮರಗಳ ಮುಂಚೂಣಿಯಲ್ಲಿದ್ದು 94 ವರ್ಷ ಬದುಕಿ ಮೃತರಾದ ಮಾಣಿಕ್‌ ಅವರ ಅಂತ್ಯ ಕ್ರಿಯೆಯಲ್ಲಿ ಭಾರತದ ರಾಷ್ಟ್ರಪತಿ, ಪ್ರಧಾನಿ, ಗೃಹಮಂತ್ರಿ ಯಾರೂ ಭಾಗವಹಿಸಲಿಲ್ಲ. ಸಾಂವಿಧಾನಿಕ ಹುದ್ದೆಯಲ್ಲಿದ್ದು ಭ್ರಷ್ಟ ರೆಂಬ ಆಪಾದನೆಗೆ ಒಳಗಾದ ರಾಜಕಾರಣಿಗಳು ನಿಧನರಾದಾಗ ಕೆಳಕ್ಕಿಳಿಯುವ ರಾಷ್ಟ್ರ ಧ್ವಜ ಅಂದು ಮಾತ್ರ ಅರ್ಧ ಮಟ್ಟದಲ್ಲಿ ಹಾರಾಡಲಿಲ್ಲ. ಮೇರಾ ಭಾರತ್ ಮಹಾನ್! ಸಾಮಾನ್ಯ ಜನರ ಮನಸ್ಸಿನಲ್ಲಿ ಇಂದಿಗೂ ಅವರ ಬಗ್ಗೆ ಗೌರವವಿದೆ. ಅವರು ಜನ್ಮ ಶತಾಬ್ಧಿಯ ವೇಳೆಯಲ್ಲಾದರೂ ಫೀಲ್ಡ್ ಮಾರ್ಷಲ್‌್ ಮಾಣಿಕ್‌ ಷಾ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಿ ಸರ್ಕಾರ ತನ್ನನ್ನು ತಾನು ಗೌರವಿಸಿಕೊಳ್ಳಬೇಕು.

No comments: