April 20, 2014
ಅಟಲ್ ಬಿಹಾರಿ ವಾಜಪೇಯಿ :ಕವಿ ಹೃದಯದ ಪ್ರಧಾನಿ – ಸಂಸದ
ತಮ್ಮ ದೀರ್ಘ ಕಾಲದ ರಾಜಕೀಯ ಜೀವನದಲ್ಲಿ ಅನೇಕ ವಿಶೇಷತೆಗಳನ್ನು ಹೊಂದಿರುವ ಸಂಸದರಲ್ಲಿ ಅಟಲ್ ಬಿಹಾರಿ ವಾಜಪೇಯಿ ಒಬ್ಬರು. ಲೋಕಸಭೆಗೆ ಒಂಬತ್ತು ಸಲ, ರಾಜ್ಯ ಸಭೆಗೆ ಎರಡು ಸಲ ಗೆದ್ದು ಬಂದ ಅವರು ಮೊದಲಿನಿಂದಲೂ ಸೈದ್ಧಾಂತಿಕ ರಾಜಕೀಯದಲ್ಲಿ ವಿಶ್ವಾಸವಿರಿಸಿದವರು.
ಆರೆಸ್ಸೆಸ್ ಹಿನ್ನೆಲೆಯಿಂದ ಬಂದ ವಾಜಪೇಯಿ, ಅದರ ಅಂಗ ಸಂಸ್ಥೆ ಜನಸಂಘದಲ್ಲಿ ಮೊದಲು ಸೇವೆ ಸಲ್ಲಿಸಿದರು. ಜನಸಂಘದ ಸ್ಥಾಪಕ ಡಾ.ಶಾಮಾ ಪ್ರಸಾದ್ ಮುಖರ್ಜಿ ಅವರ ಒಡನಾಡಿಯಾಗಿದ್ದ ಅವರು ಕಾಶ್ಮೀರ ಕುರಿತ ಹೋರಾಟದಲ್ಲಿ ಭಾಗವಹಿಸಿದ್ದರು. 1957ರಲ್ಲಿ ಲೋಕಸಭೆಗೆ ಮೊದಲ ಸಲ ಬಲರಾಂಪುರದಿಂದ ಆಯ್ಕೆಯಾದರು. ವಿವಿಧ ಕಾಲಘಟ್ಟಗಳಲ್ಲಿ ಉತ್ತರಪ್ರದೇಶ, ದೆಹಲಿ, ಮಧ್ಯಪ್ರದೇಶ,ಗುಜರಾತಿನಿಂದ ಆಯ್ಕೆಯಾದ ಏಕೈಕ ಸಂಸದೀಯ ಪಟು ಅವರು.
ಹಿಂದಿಯ ಉತ್ತಮ ಕವಿ ಎಂಬ ಪ್ರಶಂಸೆಗೆ ಪಾತ್ರರಾದ ಅವರು ಆಕರ್ಷಕ ಭಾಷಣಗಳಿಗೆ ಮೊದಲಿನಿಂದಲೂ ಹೆಸರುವಾಸಿ. ಕಾಂಗ್ರೆಸ್ ನೀತಿಗಳನ್ನು ಆಗಿಂದಾಗ್ಗೆ ಟೀಕಿಸಿಯೂ ಅವರು ಮಾತಿನಲ್ಲಿ ಸಂಯಮ ತೋರುತ್ತಿದ್ದರು.1975ರಲ್ಲಿ ಶ್ರೀಮತಿ ಇಂದಿರಾಗಾಂಧಿ ಅವರು ಹೇರಿದ ಆಂತರಿಕ ತುರ್ತು ಪರಿಸ್ಥಿಯಲ್ಲಿ ಬಂಧನಕ್ಕೆ ಒಳಗಾದ ಅವರು 1977 ರಲ್ಲಿ ನಡೆದ ಮಹಾ ಚುನಾವಣೆಯಲ್ಲಿ ವಿಜೇತರಾಗಿ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದರು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ವಾಜಪೇಯಿ ಅವರು ಹಿಂದಿಯಲ್ಲಿ ಭಾಷಣ ಮಾಡಿದ್ದು ಸುದ್ದಿಯಾಗಿತ್ತು. ಜನತಾ ಸರ್ಕಾರ ಪತನವಾದ ಮೇಲೆ ವಾಜಪೇಯಿ, ಸಂಗಡಿಗರೊಡನೆ ಸೇರಿ ಭಾರತೀಯ ಜನತಾಪಕ್ಷವನ್ನು(ಬಿಜೆಪಿ)1980ರಲ್ಲಿಹುಟ್ಟುಹಾಕಿದರು. ಶ್ರೀಮತಿ ಇಂದಿರಾಗಾಂಧಿ ಅವರ ಹತ್ಯೆಯ ನಂತರ 1984ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದು ಕೇವಲ ಎರಡು ಸ್ಥಾನಗಳಲ್ಲಿ, ಅದರಲ್ಲಿ ವಾಜಪೇಯಿ ಕೂಡ ಗೆಲುವು ಸಾಧಿಸಿದರು ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕರಾದರು.
1996ರಿಂದ 2004ರವರೆಗೆ ವಾಜಪೇಯಿ ಅವರು ಸತತವಾಗಿ ಮೂರು ಸಲ ಭಾರತದ ಪ್ರಧಾನಿಯಾಗಿದ್ದರು.ಅವರ ಪ್ರಧಾನಿ ಅವಧಿಯಲ್ಲಿ ಭಾರತ –ಪಾಕಿಸ್ತಾನದ ನಡುವಿನ ಸಂಬಂಧ ಸುಧಾರಿಸುವ ಪ್ರಯತ್ನಗಳು ನಡೆದು, ದೆಹಲಿ–ಲಾಹೋರ್ ನಡುವೆ ಬಸ್ ಸಂಚಾರ ಆರಂಭವಾಯಿತು. ಕಾರ್ಗಿಲ್ ಯದ್ಧದಲ್ಲಿ ಭಾರತ ಗೆಲುವು ಸಾಧಿಸಿದ ನಂತರ ನಡೆದ ಮಹಾಚುನಾವಣೆಯಲ್ಲಿ 543 ಸ್ಥಾನಗಳಲ್ಲಿ ಬಿಜೆಪಿ ನೇತೃತ್ವದ ಎನ್ ಡಿ ಎ ಗೆ 303 ಸ್ಥಾನ ಗಳಿಸಿತು.
2002ರಲ್ಲಿ ಗುಜರಾತಿನಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಹಿಂದು–ಮುಸ್ಲಿಂ ಹಿಂಸಾಚಾರವನ್ನು ಬಹಿರಂಗವಾಗಿ ಖಂಡಿಸಿದ ಪ್ರಧಾನಿ ವಾಜಪೇಯಿ, ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ರಾಜಧರ್ಮ ಪಾಲಿಸಲು ಸೂಚಿಸಿದ್ದರು.
ರಾಜ್ಯ ಸಭೆಯಲ್ಲಿ ಹಾಲಿ ಪ್ರಧಾನಿ ಮನಮೋಹನ ಸಿಂಗ್ ವಾಜಪೇಯಿ ಅವರನ್ನು ಭಾರತೀಯ ರಾಜಕೀಯದ ಭೀಷ್ಮ ಪಿತಾಮಹ ಎಂದು ಹೊಗಳಿದ್ದರು.
1977ರಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರಾದ ಮೇಲೆ ಅವರು ತಮ್ಮ ಕಚೇರಿಗೆ ಪ್ರವೇಶಿಸಿದರು.ಅವರನ್ನು ಸಂತೋಷಗೊಳಿಸಬಹುದು ಎಂದು ಭಾವಿಸಿದ್ದ ಅಧಿಕಾರಿಗಳು ಹಿಂದಿನ ಸರ್ಕಾರದ ಅನೇಕ ನಾಯಕರ ಭಾವಚಿತ್ರಗಳನ್ನು ತೆಗೆದಿದ್ದರು. ವಾಜಪೇಯಿ ತಮ್ಮ ಕೊಠಡಿಗೆ ಬಂದ ಕೂಡಲೆ ಕೇಳಿದ ಪ್ರಶ್ನೆ:‘ನೆಹರೂ ಅವರ ಭಾವಚಿತ್ರ ಮೊದಲು ಇಲ್ಲಿತ್ತಲ್ಲಾ, ಎಲ್ಲಿ ಹೋಯಿತು?’.
ಮೊದಲ ಸಲ ಲೋಕಸಭೆಗೆ ಆಯ್ಕೆಯಾದ ಅವರು ಮಾಡಿದ ಭಾಷಣವನ್ನು ಮೆಚ್ಚಿದ್ದ ನೆಹರೂ, ಮುಂದೆ ವಾಜಪೇಯಿ ಭಾರತದ ಪ್ರಧಾನಿಯಾಗುವರು ಎಂದು ‘ಭವಿಷ್ಯ’ ನುಡಿದಿದ್ದರು.
2005ರಲ್ಲಿ ಸಕ್ರಿಯ ರಾಜಕೀಯದಿಂದ ನಿವೃತ್ತರಾದ ವಾಜಪೇಯಿ ಸಾತ್ವಿಕ ಸಾರ್ವಜನಿಕ ನಡವಳಿಕೆ ಮತ್ತು ಸೈದ್ಧಾಂತಿಕ ರಾಜಕೀಯ ಎರಡೂ ಒಟ್ಟೊಟ್ಟಿಗೆ ಸಾಗಬಹುದು ಎಂಬುದನ್ನು ತೋರಿಸಿದ ಅಪರೂಪದ ರಾಜಕಾರಣಿ.
Subscribe to:
Post Comments (Atom)
No comments:
Post a Comment