April 20, 2014

ಬುದ್ಧಿ–ಸೌಂದರ್ಯದ ಸಂಗಮ ತಾರಕೇಶ್ವರಿ ಸಿನ್ಹಾ

ಕೇವಲ 26 ವಯಸ್ಸಿನಲ್ಲಿ 1952ರ ಬಿಹಾರದ ಬರ್ಹದಿಂದ ಮೊದಲ ಲೋಕಸಭೆಗೆ ಪ್ರವೇಶ ಪಡೆದು ಹಲವರು ಮೂಗಿನ ಮೇಲೆ ಕೈ ಇಟ್ಟುಕೊಳ್ಳುವಂತೆ ಮಾಡಿದವರು. 1942ರ ಚಲೇಜಾವ್ ಚಳವಳಿಗೆ ಬಿಹಾರದಿಂದ ಪ್ರವೇಶಿಸಿದ ಸಿನ್ಹಾ, ಮದುವೆಯಾಗಿ ಕೊಲಕತಾಗೆ ಹೋದರು. ಆದರೆ ಐಎನ್‌ಎ ಸೈನ್ಯದ ವಿಚಾರಣೆಯು ಇವರಲ್ಲಿ ಕುತೂಹಲ ಕೆರಳಿಸಿ ಮತ್ತೆ ರಾಜಕೀಯದತ್ತ ಮುಖ ಮಾಡಿದರು. ದೇಶ ವಿಭಜನೆಯ ಬಳಿಕ ಮಹಾತ್ಮ ಗಾಂಧಿ ಅವರು ನಳಂದ ಜಿಲ್ಲೆಗೆ ಬಂದಾಗ ಅವರನ್ನು ಸ್ವಾಗತಿಸಿದವರ ತಂಡದಲ್ಲಿ ಸಿನ್ಹಾ ಇದ್ದರು. ಅಲ್ಲಿಂದ ಮುಂದೆ ಕೆಲವೇ ತಿಂಗಳಿನಲ್ಲಿ ಅರ್ಥಶಾಸ್ತ್ರದಲ್ಲಿ ಉನ್ನತ ಅಧ್ಯಯನಕ್ಕೆ ಇಂಗ್ಲೆಂಡಿಗೆ ತೆರಳಿದ ಆವರು ಲಂಡನ್‌ ಸ್ಕೂಲ್‌ ಆಫ್‌ ಇಕನಾಮಿಕ್ಸ್‌ನಲ್ಲಿ ಸ್ವಲ್ಪ ಸಮಯ ಅಧ್ಯಯನ ಮಾಡಿದರು.
ಅವರ ವಾದಕೌಶಲಕ್ಕೆ ಹೆಸರಾಗಿದ್ದ ಅವರು ತಮ್ಮ ಭಾಷಣಗಳಿಂದ ಸಂಸತ್ತಿನಲ್ಲಿ ಎಲ್ಲರ ಗಮನ ಸೆಳೆದರು. ಮುಂದೆ 1958ರಲ್ಲಿ ಅವರು ನೆಹರೂ ಸಂಪುಟದಲ್ಲಿ ಮೊರಾರ್ಜಿ ದೇಸಾಯಿ ಹಣಕಾಸು ಸಚಿವರಾಗಿದ್ದಾಗ ಮೊದಲ ಮಹಿಳಾ ಉಪಹಣಕಾಸು ಸಚಿವೆಯಾದರು. 1969ರಲ್ಲಿ ಕಾಂಗ್ರೆಸ್ ಇಬ್ಭಾಗವಾದಾಗ ರಾಜಕೀಯ ಜೇವನದ ಉತ್ತುಂಗದಲ್ಲಿದ್ದ ಸಿನ್ಹಾ ಮೊರಾರ್ಜಿ ಗುಂಪಿನ ಜತೆ ಹೋದರು ಮತ್ತು ಈ ನಿರ್ಧಾರ ಅವರ ರಾಜಕೀಯ ಜೀವನವನ್ನು ಮೊಟಕುಗೊಳಿಸಿತು.ಸತತ ವಾಗಿ ನಾಲ್ಕು ಸಲ 1952,1957, 1962, 1967ರಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದರು. ಮುಂದೆ ಕೂಡ ಚುನಾವಣೆಗೆ ನಿಂತ ಆಕೆ ಮತ್ತೆ ಮತ್ತೆ ಸೋಲನ್ನು ಅನುಭವಿಸಬೇಕಾಯಿತು.ಅವರ ಮತ್ತು ಇಂದಿರಾ ಗಾಂಧಿಯವರ ಸಂಬಂಧ ಹಿತವಾಗಿರದಿರುವುದೂ ಆಕೆ ಇಂದಿರಾ ಬಣದಿಂದ ದೂರ ಸರಿಯಲು ಕಾರಣವಾಗಿತ್ತು. ಪ್ರಸಿದ್ಧ ಹಿಂದಿ ಸಿನಿಮಾ ‘ಆಂಧಿ’ ಇಂದಿರಾ ಗಾಂಧಿ ಮತ್ತು ಭಾಗಶಃ ಸಿನ್ಹಾ ಅವರ ಬದುಕನ್ನು ಆಧರಿಸಿದ ಚಲನಚಿತ್ರ ಎಂಬುದನ್ನು ಚಿತ್ರರಂಗದ ಹಿರಿಯರು ಹೇಳಿದ್ದಾರೆ. ಇಂದಿರಾ ಗಾಂಧಿ ಬಲಶಾಲಿಯಾಗಿದ್ದಾಗ ಮೊರಾರ್ಜಿ ಮತ್ತು ಕೆ.ಕಾಮರಾಜ್‌ ಬಣ ಸೇರಿದ ಇವರು ರಾಜಕೀಯದಲ್ಲಿ ಮತ್ತೆ ಮೇಲೇರಲಿಲ್ಲ. 2007ರಲ್ಲಿ ತಮ್ಮ 81ನೇ ವಯಸ್ಸಿನಲ್ಲಿ ಅವರು ತೀರಿಕೊಂಡಾಗ ಸರಿಯಾದ ಸುದ್ದಿ ಪತ್ರಿಕೆಗಳಲ್ಲಿ ಕೂಡ ಪ್ರಸಾರವಾಗಲಿಲ್ಲ.

No comments: