April 20, 2014

ಮಾದರಿ ಸಂಸದ ಡಾ.ಲೋಹಿಯಾ

ಸಮಾಜವಾದಿ ಮುಖಂಡ, ಹಿರಿಯ ಚಿಂತಕ ಡಾ.ರಾಮ ಮನೋಹರ ಲೋಹಿಯಾ ಸೈದ್ಧಾಂತಿಕ ರಾಜಕಾರಣದಲ್ಲಿ ವಿಶ್ವಾಸವಿಟ್ಟವರು. ಅವರು ಜೀವನದುದ್ದಕ್ಕೂ ಪಂ.ನೆಹರು ನೇತೃತ್ವದ ಕಾಂಗ್ರೆಸ್ ಆಡಳಿತದ ವಿರುದ್ಧ ದನಿ ಎತ್ತಿದರು. 1962 ರ ಮಹಾಚುನಾವಣೆಯಲ್ಲಿ ಡಾ. ಲೋಹಿಯಾ ಪಂ.ನೆಹರುಗೆ ಎದುರಾಳಿಯಾಗಿ ಸ್ಪರ್ಧಿಸಿದರು.ಮೊದ ಮೊದಲು ಇವರನ್ನು ಹಗುರವಾಗಿ ಪರಿಗಣಿಸಿದ ನೆಹರು, ತಾವು ಮತ ಯಾಚನೆಗೆ, ಚುನಾವಣಾ ಪ್ರಚಾರಕ್ಕೆ ಕ್ಷೇತ್ರಕ್ಕೆ ಹೋಗುವುದಿಲ್ಲ ಎಂದಿದ್ದರು. ಆದರೆ ಚುನಾವಣಾ ರಂಗು ಏರಿದಂತೆ ಲೋಹಿಯಾ ಪರ ಅಲೆ ಏಳುತ್ತಿರುವುದನ್ನು ಗುರುತಿಸಿದ ನೆಹರು ಪುಲ್ಪುರ ಕ್ಷೇತ್ರಕ್ಕೆ ಧಾವಿಸಬೇಕಾಯಿತು! ಇದು ಲೋಹಿಯಾ ಪ್ರಭಾವ. ಈ ಚುನಾವಣೆಯಲ್ಲಿ ಕೊನೆಗೂ ಗೆದ್ದಿದ್ದು ನೆಹರೂ ಅವರೆ. ಆದರೆ ಸ್ವಾರಸ್ಯವೆಂದರೆ 43 ಮತ ಎಣಿಕೆ ಕೇಂದ್ರಗಳಲ್ಲಿ ಡಾ.ಲೋಹಿಯಾ ಅವರು ನೆಹರು ಅವರಿಗಿಂತ ಮುಂದಿದ್ದರು. ತಮ್ಮ ಸೋಲನ್ನು ಕುರಿತು ಲೋಹಿಯಾ ಪ್ರತಿಕ್ರಿಯೆ ಮಜವಾಗಿದೆ : ‘ನನಗೆ ಬಂಡೆಯನ್ನು ಚೂರುಚೂರು ಮಾಡಲು ಆಗದಿದ್ದರೂ ಬಿರುಕನ್ನಂತೂ ಉಂಟುಮಾಡಿದೆ.’ ಇಲ್ಲಿ ಆ ಬಂಡೆಯೆಂದರೆ ಪಂ.ನೆಹರು. ಇದೇ ಲೋಹಿಯಾ, 1963ರಲ್ಲಿ ನಡೆದ ಲೋಕಸಭಾ ಉಪಚುನಾವಣೆಗೆ ಫರೂಕಾಬಾದ್ ನಿಂದ ಸ್ಪರ್ಧಿಸಿ ಆಯ್ಕೆಯಾದರು.ಲೋಕಸಭೆ ಪ್ರವೇಶಿಸಿದ ಕೂಡಲೆ ತಲಾ ಆದಾಯ ಕುರಿತು ಚರ್ಚೆ ಆರಂಭಿಸಿದರು.ಇದು ‘ಮೂರು ಆಣೆ --–ಹದಿನೈದು ಆಣೆ’ ಎಂದೇ ಪ್ರಸಿದ್ಧವಾಯಿತು.ಅವರು ಲೋಕಸಭೆಯಲ್ಲಿ ಆಡುತ್ತಿದ್ದ ಮಾತುಗಳು ತುಂಬ ಜವಾಬ್ದಾರಿಯಿಂದ ಮತ್ತು ಅಷ್ಟೇ ಸ್ವಾರಸ್ಯಕರವಾಗಿರುತ್ತಿತ್ತು.1965ರಲ್ಲಿ ನಡೆದ ಭಾರತ–ಪಾಕಿಸ್ತಾನ ಯುದ್ಧದ ಸಮಯದಲ್ಲಿ ಅವರು ಹೇಳಿದ ಮಾತು ಇಂದಿಗೂ ರೋಮಾಚನ ಉಂಟುಮಾದುವಂಥದ್ದು.‘ಭಾರತೀಯರು ಪಾಕಿಸ್ತಾನದ ವಿರುದ್ಧ ಬಂಡೆಯಂತೆ ನಿಲ್ಲಬೇಕು ಮತ್ತು ಭಾರತದ ಮುಸ್ಲಿಮರನ್ನು ಕೋಮಲವಾದ ಹೂವಿನಂತೆ ಕಾಪಾಡಬೇಕು.’ಈ ಅಂಶಗಳನ್ನು ಡಾ.ಲೋಹಿಯಾ ನಿಕಟವರ್ತಿ ಉಪೇಂದ್ರನಾಥ ವರ್ಮ ನೆನಪಿಸಿಕೊಂಡಿದ್ದು ಇದು ಲೋಕಸಭೆಯ ಸೆಕ್ರೆಟರಿಯಟ್ ಪ್ರಕಟಿಸಿರುವ ‘ಲೋಹಿಯಾ ಅಂಡ್ ಪಾರ್ಲಿಮೆಂಟ್’ ಎಂಬ ಪುಸ್ತಕದಲ್ಲಿ ದಾಖಲಾಗಿದೆ.

No comments: