April 20, 2014
ಅರುಣ್ ಶೌರಿ
ಲೇಖಕ, ಪತ್ರಿಕೋದ್ಯಮಿ ಮತ್ತು ಕೇಂದ್ರ ಸಚಿವರಾಗಿ ಕಾರ್ಯ ಮಾಡಿದ ಅಪರೂಪದ ಸಂಸದ ಅರುಣ್ ಶೌರಿ. 1941ರಲ್ಲಿ ಪಂಜಾಬಿನ ಜಲಂಧರ್ ನಲ್ಲಿ ಜನಿಸಿದ ಇವರು ಬಾರಖಂಬ, ಸೈಂಟ್ ಸ್ಟೀಫನ್ಸ್ ಹೈಸ್ಕೂಲ್‌ಗಳಲ್ಲಿ ಅಧ್ಯಯನ ಮಾಡಿ, ಅಮೆರಿಕಾದ ಮ್ಯಾಕಸ್ವೆಲ್ ಸ್ಕೂಲ್ ಆಫ್ ಇಕನಾಮಿಕ್ಸ್‌ನಿಂದ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದರು. ಇವರ ತಂದೆ ಹರಿದೇವ್ ಶೌರಿ ಮತ್ತು ಸ್ವತಃ ಅರುಣ್ ಶೌರಿಯವರು ಲೆಕ್ಕವಿರದಷ್ಟು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು ಹಾಕಿ ಹೋರಾಟ ನಡೆಸಿದ್ದಾರೆ. ವಿಶ್ವಸಂಸ್ಥೆಯಲ್ಲಿ ಅರ್ಥಶಾಸ್ತ್ರಜ್ಙರಾಗಿ ಹಲವು ವರ್ಷ ಕೆಲಸ ಮಾಡಿದ ಇವರು ಯೋಜನಾ ಆಯೋಗದ ಸಲಹೆಗಾರರಾಗಿದ್ದರು.
ಬಿಜೆಪಿಯನ್ನು ಪ್ರತಿನಿಧಿಸಿ 1998ರಲ್ಲಿ ಶೌರಿ ರಾಜ್ಯಸಭಾ ಸದಸ್ಯರಾಗಿದ್ದರು. ತಮ್ಮ ನೇರ ಮೊನಚು ಬರಹಗಳಿಗೆ ಪ್ರಸಿದ್ಧರಾದ ಇವರು ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಡಿಸ್ ಇನ್ವೆಸ್ಟ್‌ಮೆಂಟ್ ಖಾತೆ ಸಚಿವರಾಗಿದ್ದರು.ಇಂಡಿಯನ್ ಎಕ್ಸ್‌ಪ್ರೆಸ್, ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗಳ ಸಂಪಾದಕರಾಗಿ ಉತ್ತಮ ಪತ್ರಕರ್ತರೆನಿಸಿಕೊಂಡರು. ರಾಜೀವ್ ಗಾಂಧಿಯವರು ಪ್ರಧಾನಿಯಾಗಿದ್ದ ಕಾಲದ ಬೋಫರ್ಸ್ ಹಗರಣ ಮತ್ತು ಮಹಾರಾಷ್ಟ್ರದ ಏ.ಆರ್.ಅಂತುಳೆ ಸರ್ಕಾರದ ಭ್ರಷ್ಟಾಚಾರ ಬಯಲಿಗೆಳೆದ ಕೀರ್ತಿ ಇವರದು. ವಿ.ಪಿ.ಸಿಂಗ್ ಅವರು ಪ್ರಧಾನಿಯಾಗಿದ್ದಾಗಿನ ಮಂಡಲ್ ಕಮಿಷನ್ ವರದಿಯನ್ನು ಶೌರಿ ಬಹಿರಂಗವಾಗಿ ವಿರೋಧಿಸಿದರು.
ಪದ್ಮಭೂಷಣ, ಮ್ಯಾಗ್ಸೆಸ್ಸೆ ಸನ್ಮಾನಗಳನ್ನು ಪಡೆದಿರುವ ಶೌರಿ ವೈಚಾರಿಕವಾಗಿ ಹಿಂದುತ್ವದ ಪ್ರಬಲ ಪ್ರತಿಪಾದಕರಾಗಿ ಹಲವು ಗ್ರಂಥಗಳನ್ನು ರಚಿಸಿದ್ದಾರೆ. ಇವರ ಕೆಲವು ಕೃತಿಗಳು: The Parliamentary System,Courts and their Judgements:Premises, Prerequisites, Consequences
Eminent Historians: Their Technology, Their Line, Their Fraud,Falling Over Backwards: An essay against Reservations and against Judicial populism,Worshiping False God.
ಸ್ವತಃ ಹಿಂದುತ್ವ ಪ್ರತಿಪಾದಿಸಿದರೂ ವಿವಿಧ ಧರ್ಮಗಳ ನೇರ ಅನುಸಂಧಾನ ಮಾಡಲು ಯತ್ನಿಸಿದ ಅರುಣ್ ಶೌರಿ, ಇತ್ತೀಚಿನ ವರ್ಷಗಳಲ್ಲಿ ಬೌದ್ಧ ಗುರು ದಲೈ ಲಾಮಾ ಪ್ರಭಾವಕ್ಕೆ ಒಳಗಾಗಿ, ಸಕ್ರಿಯ ರಾಜಕೀಯದಿಂದ ಹಿಂದೆ ಸರಿದಿರುತ್ತಾರೆ.
Subscribe to:
Post Comments (Atom)
No comments:
Post a Comment