April 20, 2014
ಜಾರ್ಜ್ ಫರ್ನಾಂಡಿಸ್
ಕರ್ನಾಟಕದ ಮಂಗಳೂರಿನಲ್ಲಿ 1930ರಲ್ಲಿ ರೋಮನ್ ಕೆಥೋಲಿಕ್ ಕುಟುಂಬದಲ್ಲಿ ಜಾರ್ಜ್ ಫರ್ನಾಂಡೀಸ್ ಜನಿಸಿದರು. ಇವರು ಕಾರ್ಮಿಕ ಸಂಘಟನೆಯ ನೇತಾರ, ಕೃಷಿಕ, ಸಾಮಾಜಿಕ ಕಾರ್ಯಕರ್ತ ಮತ್ತು ಪತ್ರಕರ್ತರಾಗಿದ್ದ ಅಪರೂಪದ ಸಂಸದ. ಅವರ ತಾಯಿ ಐದನೇ ಜಾರ್ಜ್ ಅಭಿಮಾನಿಯಾದ್ದರಿಂದ ಜಾರ್ಜ್ ಜನಿಸಿದಾಗ ಅವರಿಗೆ ಅದೇ ಹೆಸರನ್ನು ಇಟ್ಟರು. ಮಂಗಳೂರಿನಲ್ಲಿ ಮೊದಲ ಹಂತದ ಶಿಕ್ಷಣ ಮುಗಿಸಿದ ಇವರನ್ನು ಕುಟುಂಬದವರು ಬೆಂಗಳೂರಿಗೆ ಧಾರ್ಮಿಕ ಶಿಕ್ಷಣಕ್ಕೆ ಕಳುಹಿಸಿದರೂ ಜಾರ್ಜ್ ಅವರಿಗೆ ಅದರಲ್ಲಿ ಆಸಕ್ತಿ ಬರಲಿಲ್ಲ.
ಅವರು ಕಾರ್ಮಿಕ ಪರ ಹೋರಾಟಗಳಲ್ಲಿ ಭಾಗವಹಿಸಿದರು, ಡಾ.ಲೋಹಿಯಾ ಅವರ ಪ್ರಭಾವಕ್ಕೆ ಒಳಗಾಗಿ ಸಮಾಜವಾದಿಯಾದರು.
ಉದ್ಯೋಗ ಹುಡುಕಿಕೊಂಡು ಮುಂಬೈಗೆ ಬಂದ ಅವರು ಅನೇಕ ಹೋರಾಟಗಳಲ್ಲಿ ಭಾಗವಹಿಸಿದರು. ಸಂಯುಕ್ತ ಸಮಾಜವಾದಿ ಪಕ್ಷದಿಂದ ಲೋಕಸಭೆಗೆ ಸ್ಪರ್ಧಿಸಿ ಕಾಂಗ್ರೆಸ್‌ನ ಎಸ್.ಕೆ.ಪಾಟೀಲ್ ಅವರನ್ನು ಸೋಲಿಸಿ ‘ಜಯಂಟ್ ಕಿಲ್ಲರ್’ ಎಂದು ಪ್ರಸಿದ್ಧರಾದರು. ೧೯೬೯ರಲ್ಲಿ ಇವರು ಸಂಯುಕ್ತ ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾದರು.
ಜನತಾ ದಳದ ಹಿರಿಯ ಸದಸ್ಯರಾಗಿದ್ದ ಅವರು ಮುಂದೆ ಸಮತಾ ಪಕ್ಷ ಸ್ಥಾಪಿಸಿದರು. ಅಖಿಲ ಭಾರತ ರೈಲ್ವೆ ಫೆಡರೇಷನ್‌ನ ಮುಖಂಡರಾಗಿ ೧೯೭೪ರಲ್ಲಿ ಅವರು ಸಂಘಟಿಸಿದ ಮುಷ್ಕರ ತೀವ್ರತರವಾಗಿದ್ದು ಇಂದಿರಾ ಗಾಂಧಿ ಅವರ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿತು, ಈ ಹಿನ್ನೆಲೆಯಲ್ಲಿ ಇಂದಿರಾ ಅವರು ದೇಶದಲ್ಲಿ ಆಂತರಿಕ ತುರ್ತು ಪರಿಸ್ಥಿತಿ ಘೋಷಿಸಿ ಇವರನ್ನು ಬಂಧಿಸಿತು. ೧೯೭೭ರಲ್ಲಿ ನಡೆದ ಮಹಾಚುನಾವಣೆಯಲ್ಲಿ ಜಾರ್ಜ್ ಅವರು ಬಿಹಾರದ ಮುಜಫರ್‌ನಗರದಿಂದ ಸ್ಪರ್ಧಿಸಿ ೩ ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿ ಕೇಂದ್ರ ಗೃಹಮಂತ್ರಿಯಾದರು. ವಿ.ಪಿ.ಸಿಂಗ್ ಅವರ ಸರ್ಕಾರದಲ್ಲಿ ರೈಲ್ವೆ ಮಂತ್ರಿಯಾಗಿದ್ದ ಇವರು ಕೊಂಕಣ ರೈಲ್ವೆ ಯೋಜನೆಗೆ ಜೀವ ಕೊಟ್ಟರು. ಎನ್‌ಡಿಎ ಸರ್ಕಾರದ ಅವಧಿಯಲ್ಲಿ ರಕ್ಷಣಾ ಮಂತ್ರಿಯಾಗಿದ್ದರು. ಪ್ರಖರ ಭಾಷಣಗಳಿಗೆ ಹೆಸರಾಗಿರುವ ಇವರನ್ನು ಬುದ್ಧಿ ಜೀವಿ ಮತ್ತು ರಾಜಕಾರಣಿಯ ಸಂಗಮ ಎನ್ನಬಹುದು.
Subscribe to:
Post Comments (Atom)
No comments:
Post a Comment