April 20, 2014

ಗ್ರಾಮ ವಿಕಾಸದ ನಾನಾಜಿ ದೇಶಮುಖ್

ಕೃಷಿ, ಪತ್ರಿಕೋದ್ಯಮ ಮತ್ತು ಗ್ರಾಮ ವಿಕಾಸದಲ್ಲಿ ತೊಡಗಿಸಿಕೊಂಡ ಸಂಸದ ನಾನಾಜಿ ದೇಶಮುಖ್. ಚಂಡಿಕಾರಾವ್‌ ಅಮೃತ್‌ರಾವ್‌ ದೇಶಮುಖ್‌ ಇವರ ನಿಜವಾದ ಹೆಸರು. ಮಹರಾಷ್ಟ್ರದ ಕಡೋಲಿಯಲ್ಲಿ 1916ರಲ್ಲಿ ಜನಿಸಿದ ನಾನಾಜಿ ಅವರು ಶಿಕ್ಷಣದ ನಂತರ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡರು. ಲೋಕಮಾನ್ಯ ತಿಲಕರ ವಿಚಾರಗಳಿಂದ ಪ್ರಭಾವಿತರಾಗಿ ನಾನಾಜಿ ಆರ್.ಎಸ್.ಎಸ್. ವೈಚಾರಿಕತೆಯತ್ತ ಆಕರ್ಷಿತರಾದರು. ಜನಸಂಘದ ಆರಂಭದ ಕಾಲದಿಂದಲೂ ಅದರ ಜೊತೆಗಿದ್ದ ಇವರು ಆ ಪಕ್ಷದ ಕಾರ್ಯದರ್ಶಿ ಮತ್ತು ಖಜಾಂಚಿಯಾಗಿದ್ದವರು. ಸಂಶೋಧನೆಯಲ್ಲಿ ಆಸಕ್ತಿ ಇದ್ದ ಇವರು ದೆಹಲಿಯಲ್ಲಿ ದೀನದಯಾಳು ಸಂಶೋಧನ ಸಂಸ್ಥೆಯನ್ನು ಕಟ್ಟಿ ಬೆಳೆಸಿದರು. ಮದುವೆಯಾಗದೆ ಉಳಿದ ನಾನಾಜಿ ‘ರಾಷ್ಟ್ರಧರ್ಮ್’ , ‘ಪಾಂಚಜನ್ಯ’ ಮತ್ತು ‘ಸ್ವದೇಶಿ’ ಪತ್ರಿಕೆಗಳು ಆರಂಭವಾದಾಗ ವಾಜಪೇಯಿ ಅದರ ಸಂಪಾದಕರಾದರು ಮತ್ತು ನಾನಾಜಿ ಮಾರ್ಗದರ್ಶಕರಾದರು. 1967ರಲ್ಲಿ ಇವರ ಪ್ರಯತ್ನದಿಂದ ಉತ್ತರಪ್ರದೇಶದಲ್ಲಿ ಮೊದಲ ಕಾಂಗ್ರೆಸ್ಸೇತರ ಸರ್ಕಾರದ ರಚನೆಗೆ ಕಾರಣರಾದರು. ಅವರಿಗೆ ಚೌಧರಿ ಚರಣ ಸಿಂಗ್‌ ಮತ್ತು ಡಾ.ಲೋಹಿಯಾ ಅವರ ನಿಕಟವರ್ತಿಯಾಗಿದ್ದರು. ಅವರು ಒಮ್ಮೆ ಡಾ.ಲೋಹಿಯಾ ಅವರನ್ನು ಜನಸಂಘದ ಕಾರ್ಯಕರ್ತರ ಸಮ್ಮೇಳನಕ್ಕೆ ಆಹ್ವಾನಿಸಿದರು. ಅಲ್ಲಿ ಡಾ.ಲೋಹಿಯಾ ಮತ್ತು ಜನಸಂಘದ ಹಿರಿಯ ನಾಯಕ ದೀನದಯಾಳು ಉಪಾಧ್ಯಾಯ ಅವರನ್ನು ಭೇಟಿಮಾಡಿಸಿದರು. ಇದರಿಂದ ಕಾಂಗ್ರೆಸ್ಸೇತರ ರಾಜಕೀಯ ಶಕ್ತಿಗಳ ಹೊಂದಾಣಿಕೆಗೆ ಮುನ್ನುಡಿ ಬರೆದಂತೆ ಆಯಿತು. ವಿನೋಬಾ ಅವರ ಭೂದಾನ ಚಳವಳಿ ಮತ್ತು ಜೆಪಿಯವರು ಕರೆಕೊಟ್ಟ ಸಂಪೂರ್ಣ ಕ್ರಾಂತಿ ಹೋರಾಟಗಳಲ್ಲಿ ಸಂಪೂರ್ಣವಾಗಿ ನಾನಾಜಿ ತಮ್ಮನ್ನು ತೊಡಗಿಸಿಕೊಂಡರು. ಇವರು ತುರ್ತು ಪರಿಸ್ಥಿತಿ ನಂತರದ 1977ರ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದ ಬಲರಾಂಪುರಂದಿಂದ ಆಯ್ಕೆಯಾದರು. ಜನತಾ ಪಕ್ಷ ಆರಂಭವಾಗುವಾಗ ನಾನಾಜಿ ಅದರ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ ಇವರಿಗೆ ಪ್ರಧಾನಿ ಮೊರಾರ್ಜಿ ದೇಸಾಯಿ ತಮ್ಮ ಸಂಪುಟ ಸೇರಲು ಆಹ್ವಾನಿಸಿದಾಗ ನಾನಾಜಿ ನಯವಾಗಿ ಅದನ್ನು ನಿರಾಕರಿಸಿದರು. ಹಳ್ಳಿಗಳ ವಿಕಾಸದಲ್ಲಿ ನಂಬಿಕೆ ಇದ್ದ ಅವರು ಉತ್ತರಪ್ರದೇಶದ ಚಿತ್ರಕೂಟದಲ್ಲಿ ಚಿತ್ರಕೂಟ ಗ್ರಾಮೋದಯ ವಿಶ್ವವಿದ್ಯಾಲಯ ಸ್ಥಾಪಿಸಿ ಅದರ ಮೊದಲ ಕುಲಪತಿಯಾದರು. ಇದು ದೇಶದ ಮೊದಲ ಗ್ರಾಮೀಣ ವಿ.ವಿ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಶಿಕ್ಷಣ, ಆರೋಗ್ಯ, ಸ್ವಾವಲಂಬನೆ ಕ್ಷೇತ್ರಗಳಲ್ಲಿ ಕೊಡುಗೆ ನೀಡಿದ್ದು ಇವರ ವಿಶೇಷತೆ.

No comments: