April 20, 2014

ಸುಚೇತ ಕೃಪಲಾನಿ(1908–1974)

ಸುಚೇತ ಕೃಪಲಾನಿ(1908–1974).ಇವರ ಮೊದಲ ಹೆಸರು ಸುಚೇತಾ ಮುಜುಮ್ದಾರ್.ಪಂಜಾಬಿನ ಅಂಬಾಲದಲ್ಲಿ ಜನಿಸಿ,ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ರಾಜಕೀಯದಲ್ಲಿ ಸಕ್ರಿಯರಾಗಿದ್ದ ಅಪರೂಪದ ಮಹಿಳಾ ಸಂಸದೆ ಸುಚೇತಾ ಕೃಪಲಾನಿ. ಚಲೇ ಜಾವ್ ಚಳವಳಿ ಮೂಲಕ ಹೋರಾಟಕ್ಕೆ ಕಾಲಿಟ್ಟ ಆಕೆ ಸಂವಿಧಾನ ರಚನೆಗೆಂದು ರಚಿತವಾದ ಉಪಸಮಿತಿಯ ಸದಸ್ಯರಾಗಿದ್ದರು. ಮಹಾತ್ಮ ಗಾಂಧಿ ಅವರಿಗೆ ಆಪ್ತರಾಗಿದ್ದ ಅವರು ಸ್ವಾತಂತ್ರ್ಯ ಬರುವ ಸಮಯದ ಆಸುಪಾಸಿನಲ್ಲಿ ನಡೆದ ದಂಗೆಗಳಲ್ಲಿ ಗಾಂಧಿಯವರ ಜತೆ ಕೆಲಸ ಮಾಡಿ ಶಾಂತಿ ಸ್ಥಾಪನೆಗೆ ಹೆಣಗಿದರು. ಸುಚೇತಾ ಅವರು ಕೆಲಕಾಲ ಬನಾರಸ್ ಹಿಂದು ವಿ.ವಿಯಲ್ಲಿ ಸಂವಿಧಾನದ ಇತಿಹಾಸ ವಿಷಯದ ಬೋಧಕಿಯಾಗಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿ ಒಟ್ಟು ಮೂರು ಸಲ ಲೋಕಸಭಾ ಸದಸ್ಯೆಯಾಗಿದ್ದ ಇವರು 1952, 1957ರಲ್ಲಿ ಅಸ್ತಿತ್ವಕ್ಕೆ ಬಂದ ಮೊದಲ ಎರಡು ಲೋಕಸಭೆಗಳಿಗೆ ನವದೆಹಲಿ ಕ್ಷೇತ್ರದಿಂದ ಆಯ್ಕೆಯಾದರು. ಸಣ್ಣ ಪ್ರಮಾಣದ ಕೈಗಾರಿಕೆಗಳ ರಾಜ್ಯ ಮಂತ್ರಿಯಾಗಿ ಕೆಲಸಮಾಡಿದರು. ನಂತರ ಕಾನ್ಪುರದಿಂದ ಉತ್ತರ ಪ್ರದೇಶದ ವಿಧಾನ ಸಭೆಗೆ ಗೆದ್ದು ಬಂದ ಸುಚೇತಾ, ರಾಜ್ಯಸಂಪುಟದಲ್ಲಿ ಕಾರ್ಯ ನಿರ್ವಹಿಸಿದರು. 1963ರಲ್ಲಿ ಉತ್ತರ ಪ್ರದೇಶದ ಮಹಿಳಾ ಮುಖ್ಯಮಂತ್ರಿಯಾದ ಇವರು ದೇಶದ ಪ್ರಪ್ರಥಮ ಮಹಿಳಾ ಮುಖ್ಯಮಂತ್ರಿಯಾದ ಹೆಗ್ಗಳಿಕೆಗೆ ಪಾತ್ರರಾದರು. 1963ರಿಂದ 1967ರವರೆಗೆ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಪಾರದರ್ಶಕ ಆಡಳಿತಕ್ಕೆ ಹೆಸರಾಗಿದ್ದ ಸುಚೇತಾ ಅವರು ರಾಜ್ಯ ಸರ್ಕಾರಿ ನೌಕರರು ಸಂಬಳ ಹೆಚ್ಚಳಕ್ಕೆಂದು ನಡೆಸಿದ ಮೊದಲ 62 ದಿನಗಳ ಮುಷ್ಕರ ಎದುರಿಸಬೇಕಾಯಿತು, ಆದರೆ ಅದಕ್ಕೆ ಮಣಿಯದ ಅವರು ಕಾರ್ಮಿಕ ಮುಖಂಡರು ಒಪ್ಪಿ ಸಂಧಾನಕ್ಕೆ ಬಂದ ಮೇಲೆ ಅವರ ಮನವಿಗಳನ್ನು ಸ್ವೀಕರಿಸಿದ್ದ ಗಟ್ಟಿ ರಾಜಕಾರಣಿ! 1967ರಲ್ಲಿ ಸುಚೇತಾ ಉತ್ತರಪ್ರದೇಶದ ಗೊಂಡಾದಿಂದ ಮತ್ತೆ ನಾಲ್ಕನೇ ಲೋಕಸಭೆಗೆ ಆಯ್ಕೆಯಾದರು. ಇವರು 1936ರಲ್ಲಿ ಅವರ ಪ್ರಸಿದ್ಧ ಸಮಾಜವಾದಿ ನಾಯಕ ಜೆ.ಬಿ.ಕೃಪಲಾನಿ ಅವರನ್ನು ವಿವಾಹವಾದರು. ಮೊದಲು ಕಾಂಗ್ರೆಸ್‌ನಲ್ಲಿದ್ದ ಜೆ.ಬಿ.ಕೃಪಲಾನಿ ನಂತರ ಕಾಂಗ್ರೆಸ್ ತೊರೆದರು. ಪತಿ ಪತ್ನಿ ಇಬ್ಬರೂ ಬೇರೆ ಬೇರೆ ರಾಜಕೀಯ ಪಕ್ಷಗಳಲ್ಲಿದ್ದುದು ವಿಶೇಷ ಸಂಗತಿ. ಕೃಪಲಾನಿ ದಂಪತಿಗಳು 1,2, ಮತ್ತು 4 ನೇ ಲೋಕಸಭೆಗೆ ಒಟ್ಟಿಗೆ ಸದಸ್ಯರಾಗಿದ್ದುದು ವಿಶೇಷ. ಜೆ.ಬಿ.ಕೃಪಲಾನಿ 3ನೇ ಲೋಕಸಭೆಗೂ ಆಯ್ಕೆಯಾಗಿದ್ದರು. ತತ್ವ ಸಿದ್ಧಾಂತಕ್ಕೆ ಅವರಿಬ್ಬರೂ ಮಹತ್ವ ನೀಡುತ್ತಿದ್ದುದಕ್ಕೆ ಇದೊಂದು ಅಪೂರ್ವ ನಿದರ್ಶನ. ಸಂಬಳದಲ್ಲಿ ಹೆಚ್ಚಳಕ್ಕೆ ಸಮಾಜವಾದಿಗಳ ಗುಂಪು ಉತ್ತರಪ್ರದೇಶದಲ್ಲಿ ಹೋರಾಟ ಮಾಡಿದರೂ ಈಕೆ ಯಾವ ಒತ್ತಡಕ್ಕೂ ಮಣಿಯಲಿಲ್ಲ! ಗಾಂಧಿವಾದಿಯಾಗಿದ್ದ ಇವರು 1971ರಲ್ಲಿ ರಾಜಕೀಯ ನಿವೃತ್ತಿ ಪಡೆದು 1974ರಲ್ಲಿ ನಿಧನರಾದರು.

No comments: