November 09, 2010

ಬೆಂಕಿಯಲ್ಲಿ ಅರಳಿದ ಹೂವು-ಆನಂದ ಝಂಜರವಾಡ

ಆನಂದ ಝಂಜರವಾಡ ಬದುಕಿನ ಬೆಂಕಿಯಲ್ಲಿ ಅರಳಿದ ಹೂವು.ಬಡತನ, ವೃತ್ತಿ ಜೀವನದ ಹೋರಾಟದ ನಡುವೆ ಕಾವ್ಯದ ರಚನೆ ಮತ್ತು ಮೀಮಾಂಸೆಯಲ್ಲಿ ತೊಡಗಿದವರು.ಕಾವ್ಯದ ಮೂಲ ಆಚಾರ‍್ಯ ಮಧ್ವರ ಸಿದ್ಧಾಂತದ ಭದ್ರ ಬುನಾದಿಯ ಮೇಲೆ ನಿಂತಿದೆ.ಕನ್ನಡ,ಸಂಸ್ಕೃತ,ಮರಾಠಿ ಕಾವ್ಯ ಧಾರೆಗಳಲ್ಲಿ ಮಿಂದ ಆನಂದರು ಜ್ಣಾನೇಶ್ವರ, ಪುರಂದರಾದಿ ದಾಸವರೇಣ್ಯರ ಭಕ್ತಿಯ ಬೇಗೆ ಮತ್ತು ಅಸ್ತಿತ್ವವಾದಿಗಳ ಅಂದಿನಂದಿನ ದಂದುಗದ ಉರಿಯ ನಡುವೆ ಮಾಗುತ್ತ ಕಾವ್ಯ ಮಾಡಿದವರು.ಹಿಂದುಸ್ತಾನಿ ಸಂಗೀತದ ಮಹಾ ರಸಿಕರಾದ ಇವರು ಕಾವ್ಯ ಭಾಷೆಯಿಂದ ಸಂಗೀತದ ಭಾಷೆಯ ಕಡೆಗೆ ಸರಾಗವಾಗಿ ಸಂಚರಿಸಬಲ್ಲವರು.ರಂ.ಶ.ಲೊಕಾಪುರ ಅವರ ಅನುವಾದ ಕುರಿತು ಇವರು ಎತ್ತಿದ ಪ್ರಶ್ನೆಗಳು ಮುಂದೆ ಕೀರ್ತಿನಾಥ ಕುರ್ತಕೋಟಿ ಅವರು”ಅಧ್ಯಯನ ಮತ್ತು ಪಾರಾಯಣ’ದಂಥ ಜೀವಂತ ಕೃತಿ ರಚನೆಗೆ ಕಾರಣವಾಯಿತು.ಹಲವಾರು ಪ್ರಸಿದ್ದ ವೇದಿಕೆಗಳಲ್ಲಿ ಕಾವ್ಯವಾಚನ ಮತ್ತು ಕವಿ ಗೊಟ್ಟಿಗಳ ತಲೆಮಣಿಯಾಗಿದ್ದಾರೆ.
೧.ಖನನೋದ್ಯಮ
೨.ದಿಂಡಿ ಮತ್ತು ದಾಂಡಿ
೩.ಅಧಿಕ ಮತ್ತು ತರಾನ (ಗಂಡ ಭೇರುಂಡ) ಇವರ ಕೆಲವು ಕವನ ಸಂಕಲನಗಳು.

ತೇಜಸ್ವಿಯವರ ಆತ್ಮಕಥೆಯ ಹಲವು ಅಧ್ಯಾಯಗಳು-ಅಣ್ಣನ ನೆನಪು

ಅಣ್ಣನ ನೆನಪು
ಪುಸ್ತಕ:ಅಣ್ಣನ ನೆನಪು
ಲೇಖಕ: ಪೂರ್ಣಚಂದ್ರ ತೇಜಸ್ವಿ
ಭಾಷೆ:ಕನ್ನಡ
ಅನುವಾದದ ವಿವರ:ಬೇರೆ ಭಾಷೆಗೆ ಅನುವಾದವಾಗಿಲ್ಲ
ಪ್ರಕಾಶಕರು:ಪುಸ್ತಕ ಪ್ರಕಾಶನ, ಮೈಸೂರು
ಮೊದಲನೆಯ ಮುದ್ರಣ:೧೯೯೬
ಎರಡನೆಯ ಮುದ್ರಣ:೧೯೯೭
ಅಣ್ಣನ ನೆನಪು ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಅರೆ ಆತ್ಮ ಕಥನದ ಧಾಟಿಯ ಪುಸ್ತಕ.ಮೊದಲು ಸಾಹಿತಿ ಪತ್ರಕರ್ತ ಪಿ. ಲಂಕೇಶ್ ನಡೆಸುತ್ತಿದ್ದ ’ಲಂಕೇಶ್ ಪತ್ರಿಕೆ’ಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿ ಮುಂದೆ ಪುಸ್ತಕ ರೂಪದಲ್ಲಿ ಮುದ್ರಣವಾಯಿತು.
"ಅಣ್ಣನ ನೆನಪು ಕೃತಿ ಒಂದರ್ಥದಲ್ಲಿ ತೇಜಸ್ವಿಯವರು ಹುಟ್ಟಿದಲ್ಲಿನಿಂದ ಇಲ್ಲಿಯವರೆಗಿನ ಕುವೆಂಪುರವರ ಕಥೆ ಅಥವಾ ಅವರ ಜೀವನ ಚರಿತ್ರೆಯ ಹಲವು ಮಹತ್ವಪೂರ್ಣ ಅಧ್ಯಾಯಗಳು.ಹಾಗೆಯೆ ಇದನ್ನು ತೇಜಸ್ವಿಯವರ ಆತ್ಮಕಥೆಯ ಹಲವು ಅಧ್ಯಾಯಗಳೆಂದು ಪರಿಗಣಿಸಬಹುದು.ಕುವೆಂಪುರವರು ಕನ್ನಡ ಸಂಸ್ಕೃತಿ ಚರಿತ್ರೆಯಲ್ಲಿ ವಹಿಸಿರುವ ಮಹತ್ವಪೂರ್ಣ ಪಾತ್ರದಿಂದಾಗಿ ಇದು ಕನ್ನಡನಾಡಿನ ಸಂಸ್ಕೃತಿ ಚರಿತ್ರೆಯ ಬಹು ಮುಖ್ಯ ಅಧ್ಯಾಯಗಳು ಆಗಿವೆ.ಆದರೆ ಇದೆಲ್ಲವನ್ನು ಮರೆತು ನಾವು ಓದಿದರೆ ಇದೊಂದು ಅತಿ ಸುಂದರವಾದ ಕಾದಂಬರಿಯಂಥ ಕಲಾಕೃತಿ.ಇದರಲ್ಲಿ ಚಿತ್ರಿತವಾಗಿರುವ ಕುವೆಂಪುರವರ ವ್ಯಕ್ತಿತ್ವ,ಕನ್ನಡ ಸಾಹಿತ್ಯದಲ್ಲಿನ ಅನನ್ಯ ಮತ್ತು ಅಸಾಧಾರಣ ದಾಖಲೆ." ಈ ಮಾತುಗಳನ್ನು ಪ್ರಕಾಶಕರು ಹೇಳಿದ್ದಾರೆ.
ತೇಜಸ್ವಿಯರ ಮುನ್ನುಡಿ ಕೂಡ ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲುವಂತಿದೆ.
"ನನ್ನ ಚಿಕ್ಕಂದಿನಿಂದಲೂ ನಾನು ಓದು ಮುಗಿಸುವವವರೆಗಿನ ನಮ್ಮ ತಂದೆಯ ನೆನಪುಗಳನ್ನು ನನ್ನ ದಿನಚರಿಯ ಮಾದರಿಯಲ್ಲಿ ಬರೆದಿದ್ದೇನೆ.ಅಣ್ಣನ ವೈವಿಧ್ಯಮಯ ವ್ಯಕ್ತಿತ್ವದಿಂದಾಗಿ ಈ ನೆನಪಿನ ಸರಣಿಯಲ್ಲಿ ರಾಜಕೀಯ ಮೀಮಾಂಸೆ, ತತ್ವಚಿಂತನೆ,ಕರ್ನಾಟಕ ಸಂಸ್ಕೃತಿ ಅವಲೋಕನ,ಸಾಹಿತ್ಯ ಮೀಮಾಂಸೆ,ಸಾಮಾಜಿಕ ಜಿಜ್ಞಾಸೆ,ಮುಂತಾದವೆಲ್ಲ ಮಿಳಿತಗೊಂಡಿವೆ.ಆದರೂ ನೆನಪುಗಳು ಸಂಕೀರ್ಣವಾಗದಂತೆ,ಜಟಿಲವಾಗದಂತೆ, ಸರಳವಾಗಿ,ಜೀವನದ ಸಹಜ ಲಯದಲ್ಲಿ ರೂಪಿಸಲು ಯತ್ನಿಸಿದ್ದೇನೆ ಇದನ್ನು ಬರೆಯುತ್ತ ಕುವೆಂಪುರವರೊಡನಿದ್ದ ಅನೇಕರು ತಮಗೆ ಗೊತ್ತಿದ್ದುದನ್ನೆಲ್ಲ ಕಾಗದ ಬರೆದು ನನಗೆ ಸ್ಪಷ್ಟಪಡಿಸಿದ್ದಾರೆ ಕೆಲವರು ಬಿದ್ದು ಬಿದ್ದು ನಕ್ಕು ಸ್ಫೂರ್ತಿ ನೀಡಿದ್ದಾರೆ.ಆ ಹಿರಿಕಿರಿಯರೆಲ್ಲರಿಗೂ ನನ್ನ ನಮಸ್ಕಾರಪೂರ್ವಕ ಕೃತಜ್ಞತೆಗಳು.ಇದನ್ನು ಬರೆಯುತ್ತಲೇ ಧಾರಾವಾಹಿಯಾಗಿ ಪ್ರಕಟಿಸಿದ ಗೆಳೆಯ ಲಂಕೇಶರಿಗೆ ನಾನು ಕೃತಜ್ಞ.ನನ್ನ ಬಳಿಯಿದ್ದ ಫೋಟೋಗಳ ಜೊತೆಗೆ ಅನೇಕರು ತಮ್ಮ ಬಳಿ ಇದ್ದ ಫೋಟೋಗಳನ್ನು ಒದಗಿಸಿ ತುಂಬಾ ಸಹಾಯ ಮಾಡಿದ್ದಾರೆ.ಅವೆಲ್ಲಾ ಕಲಬೆರಕೆಯಾಗಿ ಯಾರದ್ದು ಯಾವುದು ಎಂದು ತಿಳಿಯಲಾಗದೆ ಎಲ್ಲರಿಗೂ ಒಟ್ಟಾಗಿ ಕೃತಜ್ಞತೆ ಅರ್ಪಿಸಬೇಕಾಗಿದೆ.ಶ್ರೀ.ಜಿ.ಪಿ.ಬಸವರಾಜು,ಶ್ರೀ ನರೇಂದ್ರ ರೈದೇರ್ಲ,ಶ್ರೀ ಚೌಡಪ್ಪರೆಡ್ಡಿ,ಶ್ರೀ ಕೃಪಾಕರ ,ಶ್ರೀ ಸೇನಾನಿ,ಇವರೆಲ್ಲರಿಗೂ ನನ್ನ ಕೃತಜ್ಞತೆಗಳು. ಇದನ್ನು ಬರೆಯುತ್ತ ಪ್ರತಿ ಕಂತನ್ನೂ ಓದಿ, ತನ್ನ ಆರೋಗ್ಯವನ್ನೂ ನಿರ್ಲಕ್ಷಿಸಿ ನನ್ನೊಡನೆ ಮಾತಾಡಿ, ಬರೆಯಲು ಹುರಿದುಂಬಿಸಿದ ತಂಗಿ ಇಂದುಕಲಾಗೂ, ತಾರಿಣಿಗೂ ನನ್ನ ಕೃತಜ್ಞತೆಗಳು.ಎಲ್ಲಕ್ಕಿಂತ ಇದನ್ನು ಅಭೂತಪೂರ್ವವಾಗಿ ಮೆಚ್ಚಿದ ಕನ್ನಡಿಗರಿಗೆ ನನ್ನ ಕೃತಜ್ಞತೆಗಳು."ಇದು ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಮುನ್ನುಡಿಯ ಮಾತುಗಳು.

ಉತ್ತಮ ಪುಸ್ತಕಗಳನ್ನು ಕೊಟ್ಟರೆ ಓದುಗರು ಒಪ್ಪಿಕೊಳ್ಳುತ್ತಾರೆ

ಡಿ ವಿ ಕೆ ಮೂರ್ತಿ
"ಸರ್ಕಾರ ನಂಬಿಕೊಂಡು ಪ್ರಕಾಶನ ಸಂಸ್ಥೆ ನಡೆಸಬಾರದು. ನಾನು ಕಳೆದ ಐದು ದಶಕಗಳಿಂದ ಇದೇ ಮಾದರಿಯಲ್ಲಿ ಸಂಸ್ಥೆಯನ್ನು ನಡೆಸಿಕೊಂಡು ಬಂದಿದ್ದೇನೆ. ಸಾಮಾಜಿಕ ಬದ್ಧತೆ ಹಾಗೂ ಉತ್ತಮ ಗುಣಮಟ್ಟದ ಸಾಹಿತ್ಯವನ್ನು ಜನರಿಗೆ ಒದಗಿಸುವುದು ನನ್ನ ಗುರಿ. ಇದನ್ನು ಜನ ಕೂಡ ಸ್ವೀಕರಿಸಿದ್ದಾರೆ. ಹೀಗಾಗಿ ನಾನು ಯಾವತ್ತೂ ಸರ್ಕಾರದ ಸಗಟು ಖರೀದಿಗೆ ಪುಸ್ತಕಗಳನ್ನು ಕಳುಹಿಸಿದವನಲ್ಲ.
ಪ್ರಕಾಶಕರು ವಾಸ್ತವಿಕತೆ, ಮಹತ್ವ ಅರಿತು ಪುಸ್ತಕಗಳನ್ನು ಪ್ರಕಟಿಸಬೇಕು. ಉತ್ತಮ ಗುಣಮಟ್ಟದ ಸಾಹಿತ್ಯ ತೀರಾ ಅವಶ್ಯಕ. ಪ್ರಕಾಶನ ಸಂಸ್ಥೆಯನ್ನು ನಾನು ಯಾವತ್ತೂ ವ್ಯವಹಾರಿಕವಾಗಿ ನೋಡಿದವನಲ್ಲ. ಲಾಭ ಗಳಿಸಲೇಬೇಕು ಎಂದರೆ ಬೇರೆ ಯಾವುದಾದರೂ ವ್ಯಾಪಾರ ಮಾಡಬಹುದು. ಸಾಮಾಜಿಕ ಬದ್ಧತೆಯಿಂದಲೇ ನಾನು ಅನುಪಮ ನಿರಂಜನ ಅವರ ‘ದಾಂಪತ್ಯ ದೀಪಿಕೆ’, ‘ತಾಯಿ-ಮಗು’ ಮೊದಲಾದ ಪುಸ್ತಕಗಳನ್ನು ಪ್ರಕಟಿಸಿದೆ. ವೈಚಾರಿಕ ದೃಷ್ಟಿಕೋನಕ್ಕಾಗಿ ಎ. ಎನ್. ಮೂರ್ತಿರಾವ್ ಅವರ ‘ದೇವರು’ ಕೃತಿ ಪ್ರಕಟಿಸಿದೆ. ‘ದೇವರು’ ಕೃತಿ ಈಗ 10ನೇ ಮುದ್ರಣ ಕಾಣುತ್ತಿದೆ. ತ್ರಿವೇಣಿ, ವಾಣಿ, ನಿರಂಜನ, ಅನಕೃ, ತರಾಸು ಮೊದಲಾದವರ ಪುಸ್ತಕಗಳನ್ನು ಪ್ರಕಟಿಸಿದ್ದು, ಜನಮನ್ನಣೆ ಪಡೆದಿವೆ. ಉತ್ತಮ ಪುಸ್ತಕಗಳನ್ನು ಕೊಟ್ಟರೆ ಓದುಗರು ಒಪ್ಪಿಕೊಳ್ಳುತ್ತಾರೆ.
ಸರ್ಕಾರ ಪುಸ್ತಕಗಳ ಸಗಟು ಖರೀದಿಯಲ್ಲಿ ಆ ವರ್ಷ ಪ್ರಕಟಿಸಿದ್ದು, ಈ ವರ್ಷ ಪ್ರಕಟಿಸಿದ್ದು ಎಂದು ನೋಡಬಾರದು. ಗುಣಮಟ್ಟದ ಕಡೆಗೆ ಗಮನ ನೀಡಬೇಕು. ಪುಸ್ತಕ ಖರೀದಿಯಲ್ಲಿ ಭ್ರಷ್ಟಾಚಾರ ನಡೆಸಬಾರದು. ಭ್ರಷ್ಟಾಚಾರ ಇದ್ದಲ್ಲಿ ಕಳಪೆ ಪುಸ್ತಕಗಳೆಲ್ಲಾ ಬರುತ್ತವೆ. ಕನ್ನಡ ಪುಸ್ತಕ ಪ್ರಾಧಿಕಾರ, ಸರ್ಕಾರ ಅಥವಾ ಕನ್ನಡ ಸಾಹಿತ್ಯ ಪರಿಷತ್ ಯಾರೇ ಆಗಿರಲಿ ಗುಣಮಟ್ಟದ ಸಾಹಿತ್ಯಕ್ಕೆ ಮನ್ನಣೆ ನೀಡಬೇಕು. ಜನರಿಗೆ ಬೇಕಾದ ಪುಸ್ತಕಗಳನ್ನು ನೀಡಿದರೆ ಭವಿಷ್ಯ ಇದ್ದೆ ಇರುತ್ತದೆ."

ಪುಸ್ತಕ ಬ್ರಹ್ಮ
ದೆಹಲಿ ಕನ್ನಡಿಗ ಏರ್ಪಡಿಸಿದ್ದ ೧೦ನೆಯ ಸಮ್ಮೇಳನದಲ್ಲಿ ’ಶ್ರೇಷ್ಥ ಪ್ರಕಾಶಕ’ ಸನ್ಮಾನ.
ಆಧಾರ:
೧. ಡಿ ವಿ ಕೆ ಮೂರ್ತಿ-ಪುಸ್ತಕ ಲೋಕದ ಅನನ್ಯರು ಮಾಲಿಕೆ,ಅಭಿನವ ಪ್ರಕಾಶನ, ಬೆಂಗಳೂರು
೨. ೦೫-೦೨-೨೦೦೨ರಂದು ಕನ್ನಡಪ್ರಭ ಪತ್ರಿಕೆಗೆ ನೀಡಿದ ಸಂದರ್ಶನ