April 20, 2014
37 ವರ್ಷ ಸಂಸತ್ ಪಟುವಾಗಿದ್ದ ಇಂದ್ರಜಿತ್ ಗುಪ್ತಾ
ಹನ್ನೊಂದು ಸಲ ಲೋಕಸಭೆಗೆ ಆಯ್ಕೆಯಾದ ಇಂದ್ರಜಿತ್ ಗುಪ್ತಾ (1919–2001) ಅವರು ಕಮ್ಯುನಿಸ್ಟ್ ಪಕ್ಷದ ನಿಷ್ಠಾವಂತ ಸದಸ್ಯರಾಗಿ ಕೊನೆ ತನಕ ಉಳಿದವರು. ಮೊದಲ ಸಲ 1960ರಲ್ಲಿ ಲೋಕಸಭೆ ಪ್ರವೇಶಿಸಿದ ಅವರು 6ನೇ ಲೋಕಸಭೆ(1977ರಿಂದ 1980) ಬಿಟ್ಟರೆ ಉಳಿದಂತೆ ಸತತವಾಗಿ ಲೋಕಸಭಾ ಸದಸ್ಯರಾಗಿದ್ದರು. ಅವರು 2,3,4,5,7,8,9,10,11,12,13ನೇ ಲೋಕಸಭೆಯ ಸದಸ್ಯರಾಗಿ 37 ವರ್ಷ ಸೇವೆ ಸಲ್ಲಿಸಿ ದಾಖಲೆ ಸೃಷ್ಟಿಸಿದರು. ಬಹಳ ಹಳೆಯ ಸದಸ್ಯರಾದ ಕಾರಣ 1996,1998,1999ರಲ್ಲಿ ಹಂಗಾಮಿ ಸ್ಪೀಕರ್ ಆಗಿ ಹೊಸ ಸದಸ್ಯರಿಗೆ ಪ್ರಮಾಣ ವಚನ ಬೋಧಿಸುವ ಗೌರವ ಅವರಿಗೆ ಬಂದಿತ್ತು.
ದೀರ್ಘ ಕಾಲ ವಿರೋಧ ಪಕ್ಷದಲ್ಲಿದ್ದ ಗುಪ್ತಾ ಅವರು ನೇರ–ಖಾರ ನುಡಿಗೆ ಹೆಸರುವಾಸಿ. ಅವರ ತರ್ಕಬದ್ಧ ಮಾತುಗಳು ಸಂಸತ್ತಿನಲ್ಲಿ ಅನೇಕರ ಗಮನ ಸೆಳೆಯುವಂತಿರುತ್ತಿತ್ತು. ಸಿಪಿಐ ವಿಚಾರಧಾರೆಗೆ ಬದ್ಧರಾಗಿದ್ದ ಅವರು ಸಾಮ್ಯವಾದಕ್ಕಿಂತ ಒಟ್ಟು ಸಂಸತ್ತಿನ ಬೌದ್ಧಿಕ ಮಟ್ಟ ಹೆಚ್ಚಿಸುವುದರಲ್ಲಿ ಶ್ರಮಿಸಿದರು. ಸಂಯುಕ್ತ ರಂಗ ಸರ್ಕಾರದಲ್ಲಿ ಕೇಂದ್ರ ಗೃಹಮಂತ್ರಿಯಾಗಿದ್ದ ಅವರು ಸರ್ಕಾರವನ್ನು ತಮ್ಮ ನೇರ ಪ್ರಶ್ನೆಗಳಿಂದ ಮುಜುಗರಗೊಳಿಸುತ್ತಿದ್ದರು. ದೊಡ್ಡ ಮತಗಳ ಅಂತರದಲ್ಲಿ ಗೆಲ್ಲುತ್ತಿದ್ದುದು ಅವರ ವಿಶೇಷತೆ. ಗೃಹಮಂತ್ರಿಯಂಥ ಮಹತ್ವದ ಹುದ್ದೆಗೆ ಏರಿದಂಥ ಮೊದಲ ಕಮ್ಯುನಿಸ್ಟ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು(1996–98).
ಸ್ವತಃ ಗುಪ್ತಾ, ಕಾರ್ಮಿಕರ ಪರ ವಹಿಸಿ ಹೋರಾಟ ಮಾಡಿದವರು, ಆದರೆ ಇವರ ತಾತ, ತಂದೆ ಮತ್ತು ಸಹೋದರರು ನಾಗರಿಕ ಸೇವೆಯಲ್ಲಿ ದೊಡ್ಡ ಹುದ್ದೆಗಳಲ್ಲಿದ್ದರು ಎಂಬುದು ಒಂದು ಸ್ವಾರಸ್ಯಕರ ಸಂಗತಿ. ದೆಹಲಿಯಲ್ಲಿ ಶಿಕ್ಷಣ ಮುಗಿಸಿದ ಬಳಿಕ ಕೇಂಬ್ರಿಡ್ಜ್ ವಿವಿಯಲ್ಲಿ ಉನ್ನತ ವ್ಯಾಸಂಗ ಮಾಡಿದ ಅವರಿಗೆ ಕಮ್ಯುನಿಸ್ಟ್ ವಿಚಾರಗಳ ಸಂಪರ್ಕ ಬಂದದ್ದು ಲಂಡನ್‌ನಲ್ಲಿ.
ಉದ್ದಕ್ಕೂ ಸರಳ ಜೀವನ ನಡೆಸಿದ ಅವರು ಎರಡು ಕೊಠಡಿಯಿರುವ ಮನೆಯಲ್ಲಿ ವಾಸವಾಗಿದ್ದರು. ಕೇಂದ್ರದಲ್ಲಿ ಮಂತ್ರಿಯಾಗುವವರೆಗೂ ನಡೆದೇ ಸಂಸತ್ತಿಗೆ ಬರುತ್ತಿದ್ದರು. 1998ರಿಂದ 2002ರವೆರೆಗೆ ಸಂಸತ್ತಿನ ಸ್ಪೀಕರ್ ಆಗಿದ್ದ ಜಿ.ಎಂ.ಸಿ.ಬಾಲಯೋಗಿ ಅವರು ಗುಪ್ತಾ ಅವರನ್ನು ‘Father of the House’ ಎಂದು ಕರೆದಿದ್ದರು. ಗುಪ್ತಾ ಅವರು ಎಷ್ಟೋ ಸಲ ಪಾಲಿಮೆಂಟ್ ಗ್ರಂಥಭಂಡಾರದಲ್ಲಿ ಕುಳಿತು ವಿವಿಧ ವಿಷಯಗಳ ಅಧ್ಯಯನ ನಡೆಸುತ್ತಿದ್ದರು.
ಅರ್ಥಶಾಸ್ತ್ರ, ರಕ್ಷಣೆ, ವಿದೇಶಾಂಗ ವ್ಯವಹಾರಗಳ ಬಗ್ಗೆ ಅಪಾರ ಅಧ್ಯಯನವಿದ್ದ ಗುಪ್ತಾ ಅವರು 'Capital and Labour in Jute Industry', 'Self- Reliance in National Defence' ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಅವರು ಕೆಂದ್ರ ಗೃಹಮಂತ್ರಿಯಾಗಿದ್ದಾಗ ಅತಿ ದೊಡ್ಡ ವಿರೋಧ ಪಕ್ಷವಾಗಿದ್ದ ಬಿಜೆಪಿ ದಿನವಿಡೀ ವಿರೋಧ ಮಾಡಿದ ಬಳಿಕ ಗುಪ್ತಾ ಹೇಳುತ್ತಿದ್ದ ಒಂದೇ ಮಾತು : ‘ ನಾನು ವಿರೋಧ ಪಕ್ಷದಲ್ಲಿದ್ದರೂ ಇದನ್ನೇ ಮಾಡುತ್ತಿದ್ದೆ.’
ಅವರು ಕೇಂದ್ರ ಗೃಹ ಮಂತ್ರಿಯಾಗಿದ್ದಾಗ ಅವರ ಕಾರು ,ವಿಮಾನ ನಿಲ್ದಾಣದ ರನ್‌ವೇ ಸಮೀಪದ ಪಥಕ್ಕೆ ಹೋಗುತ್ತಿರಲಿಲ್ಲ ಬದಲಿಗೆ ಅವರು ಏರ್‌ಲೈನ್ ಬಸ್ಸನ್ನು ಬಳಸಿ ನಿಲ್ದಾಣದಿಂದ ಹೊರಕ್ಕೆ ಬರುತ್ತಿದ್ದರು. ಸಂಸದರು ಸಾಮಾನ್ಯರಂತೆ ಬದುಕ ಬೇಕು ಎಂದು ಅವರು ನಂಬಿ ಅಂತೆಯೇ ನಡೆಯುತ್ತಿದ್ದರು. ಸಾರ್ವಜನಿಕ ಹಿತ ರಕ್ಷಣೆ ಮಾಡುವ ವಿಷಯಗಳನ್ನು ಹೆಚ್ಚಾಗಿ ಸಂಸತ್ತಿನಲ್ಲಿ ಪ್ರಸ್ತಾಪಿಸುತ್ತಿದ್ದ ಅವರಿಗೆ 1992ರಲ್ಲಿ ‘ಶ್ರೇಷ್ಠ ಸಂಸದ’ ಎಂಬ ಪುರಸ್ಕಾರ ಲಭಿಸಿತ್ತು.
Subscribe to:
Post Comments (Atom)
No comments:
Post a Comment