April 20, 2014
ಸುಚೇತ ಕೃಪಲಾನಿ(1908–1974)
ಸುಚೇತ ಕೃಪಲಾನಿ(1908–1974).ಇವರ ಮೊದಲ ಹೆಸರು ಸುಚೇತಾ ಮುಜುಮ್ದಾರ್.ಪಂಜಾಬಿನ ಅಂಬಾಲದಲ್ಲಿ ಜನಿಸಿ,ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ರಾಜಕೀಯದಲ್ಲಿ ಸಕ್ರಿಯರಾಗಿದ್ದ ಅಪರೂಪದ ಮಹಿಳಾ ಸಂಸದೆ ಸುಚೇತಾ ಕೃಪಲಾನಿ.
ಚಲೇ ಜಾವ್ ಚಳವಳಿ ಮೂಲಕ ಹೋರಾಟಕ್ಕೆ ಕಾಲಿಟ್ಟ ಆಕೆ ಸಂವಿಧಾನ ರಚನೆಗೆಂದು ರಚಿತವಾದ ಉಪಸಮಿತಿಯ ಸದಸ್ಯರಾಗಿದ್ದರು. ಮಹಾತ್ಮ ಗಾಂಧಿ ಅವರಿಗೆ ಆಪ್ತರಾಗಿದ್ದ ಅವರು ಸ್ವಾತಂತ್ರ್ಯ ಬರುವ ಸಮಯದ ಆಸುಪಾಸಿನಲ್ಲಿ ನಡೆದ ದಂಗೆಗಳಲ್ಲಿ ಗಾಂಧಿಯವರ ಜತೆ ಕೆಲಸ ಮಾಡಿ ಶಾಂತಿ ಸ್ಥಾಪನೆಗೆ ಹೆಣಗಿದರು. ಸುಚೇತಾ ಅವರು ಕೆಲಕಾಲ ಬನಾರಸ್ ಹಿಂದು ವಿ.ವಿಯಲ್ಲಿ ಸಂವಿಧಾನದ ಇತಿಹಾಸ ವಿಷಯದ ಬೋಧಕಿಯಾಗಿದ್ದರು.
ಕಾಂಗ್ರೆಸ್ ಅಭ್ಯರ್ಥಿಯಾಗಿ ಒಟ್ಟು ಮೂರು ಸಲ ಲೋಕಸಭಾ ಸದಸ್ಯೆಯಾಗಿದ್ದ ಇವರು 1952, 1957ರಲ್ಲಿ ಅಸ್ತಿತ್ವಕ್ಕೆ ಬಂದ ಮೊದಲ ಎರಡು ಲೋಕಸಭೆಗಳಿಗೆ ನವದೆಹಲಿ ಕ್ಷೇತ್ರದಿಂದ ಆಯ್ಕೆಯಾದರು. ಸಣ್ಣ ಪ್ರಮಾಣದ ಕೈಗಾರಿಕೆಗಳ ರಾಜ್ಯ ಮಂತ್ರಿಯಾಗಿ ಕೆಲಸಮಾಡಿದರು. ನಂತರ ಕಾನ್ಪುರದಿಂದ ಉತ್ತರ ಪ್ರದೇಶದ ವಿಧಾನ ಸಭೆಗೆ ಗೆದ್ದು ಬಂದ ಸುಚೇತಾ, ರಾಜ್ಯಸಂಪುಟದಲ್ಲಿ ಕಾರ್ಯ ನಿರ್ವಹಿಸಿದರು. 1963ರಲ್ಲಿ ಉತ್ತರ ಪ್ರದೇಶದ ಮಹಿಳಾ ಮುಖ್ಯಮಂತ್ರಿಯಾದ ಇವರು ದೇಶದ ಪ್ರಪ್ರಥಮ ಮಹಿಳಾ ಮುಖ್ಯಮಂತ್ರಿಯಾದ ಹೆಗ್ಗಳಿಕೆಗೆ ಪಾತ್ರರಾದರು. 1963ರಿಂದ 1967ರವರೆಗೆ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು.
ಪಾರದರ್ಶಕ ಆಡಳಿತಕ್ಕೆ ಹೆಸರಾಗಿದ್ದ ಸುಚೇತಾ ಅವರು ರಾಜ್ಯ ಸರ್ಕಾರಿ ನೌಕರರು ಸಂಬಳ ಹೆಚ್ಚಳಕ್ಕೆಂದು ನಡೆಸಿದ ಮೊದಲ 62 ದಿನಗಳ ಮುಷ್ಕರ ಎದುರಿಸಬೇಕಾಯಿತು, ಆದರೆ ಅದಕ್ಕೆ ಮಣಿಯದ ಅವರು ಕಾರ್ಮಿಕ ಮುಖಂಡರು ಒಪ್ಪಿ ಸಂಧಾನಕ್ಕೆ ಬಂದ ಮೇಲೆ ಅವರ ಮನವಿಗಳನ್ನು ಸ್ವೀಕರಿಸಿದ್ದ ಗಟ್ಟಿ ರಾಜಕಾರಣಿ! 1967ರಲ್ಲಿ ಸುಚೇತಾ ಉತ್ತರಪ್ರದೇಶದ ಗೊಂಡಾದಿಂದ ಮತ್ತೆ ನಾಲ್ಕನೇ ಲೋಕಸಭೆಗೆ ಆಯ್ಕೆಯಾದರು.
ಇವರು 1936ರಲ್ಲಿ ಅವರ ಪ್ರಸಿದ್ಧ ಸಮಾಜವಾದಿ ನಾಯಕ ಜೆ.ಬಿ.ಕೃಪಲಾನಿ ಅವರನ್ನು ವಿವಾಹವಾದರು. ಮೊದಲು ಕಾಂಗ್ರೆಸ್‌ನಲ್ಲಿದ್ದ ಜೆ.ಬಿ.ಕೃಪಲಾನಿ ನಂತರ ಕಾಂಗ್ರೆಸ್ ತೊರೆದರು. ಪತಿ ಪತ್ನಿ ಇಬ್ಬರೂ ಬೇರೆ ಬೇರೆ ರಾಜಕೀಯ ಪಕ್ಷಗಳಲ್ಲಿದ್ದುದು ವಿಶೇಷ ಸಂಗತಿ. ಕೃಪಲಾನಿ ದಂಪತಿಗಳು 1,2, ಮತ್ತು 4 ನೇ ಲೋಕಸಭೆಗೆ ಒಟ್ಟಿಗೆ ಸದಸ್ಯರಾಗಿದ್ದುದು ವಿಶೇಷ. ಜೆ.ಬಿ.ಕೃಪಲಾನಿ 3ನೇ ಲೋಕಸಭೆಗೂ ಆಯ್ಕೆಯಾಗಿದ್ದರು. ತತ್ವ ಸಿದ್ಧಾಂತಕ್ಕೆ ಅವರಿಬ್ಬರೂ ಮಹತ್ವ ನೀಡುತ್ತಿದ್ದುದಕ್ಕೆ ಇದೊಂದು ಅಪೂರ್ವ ನಿದರ್ಶನ.
ಸಂಬಳದಲ್ಲಿ ಹೆಚ್ಚಳಕ್ಕೆ ಸಮಾಜವಾದಿಗಳ ಗುಂಪು ಉತ್ತರಪ್ರದೇಶದಲ್ಲಿ ಹೋರಾಟ ಮಾಡಿದರೂ ಈಕೆ ಯಾವ ಒತ್ತಡಕ್ಕೂ ಮಣಿಯಲಿಲ್ಲ!
ಗಾಂಧಿವಾದಿಯಾಗಿದ್ದ ಇವರು 1971ರಲ್ಲಿ ರಾಜಕೀಯ ನಿವೃತ್ತಿ ಪಡೆದು 1974ರಲ್ಲಿ ನಿಧನರಾದರು.
37 ವರ್ಷ ಸಂಸತ್ ಪಟುವಾಗಿದ್ದ ಇಂದ್ರಜಿತ್ ಗುಪ್ತಾ
ಹನ್ನೊಂದು ಸಲ ಲೋಕಸಭೆಗೆ ಆಯ್ಕೆಯಾದ ಇಂದ್ರಜಿತ್ ಗುಪ್ತಾ (1919–2001) ಅವರು ಕಮ್ಯುನಿಸ್ಟ್ ಪಕ್ಷದ ನಿಷ್ಠಾವಂತ ಸದಸ್ಯರಾಗಿ ಕೊನೆ ತನಕ ಉಳಿದವರು. ಮೊದಲ ಸಲ 1960ರಲ್ಲಿ ಲೋಕಸಭೆ ಪ್ರವೇಶಿಸಿದ ಅವರು 6ನೇ ಲೋಕಸಭೆ(1977ರಿಂದ 1980) ಬಿಟ್ಟರೆ ಉಳಿದಂತೆ ಸತತವಾಗಿ ಲೋಕಸಭಾ ಸದಸ್ಯರಾಗಿದ್ದರು. ಅವರು 2,3,4,5,7,8,9,10,11,12,13ನೇ ಲೋಕಸಭೆಯ ಸದಸ್ಯರಾಗಿ 37 ವರ್ಷ ಸೇವೆ ಸಲ್ಲಿಸಿ ದಾಖಲೆ ಸೃಷ್ಟಿಸಿದರು. ಬಹಳ ಹಳೆಯ ಸದಸ್ಯರಾದ ಕಾರಣ 1996,1998,1999ರಲ್ಲಿ ಹಂಗಾಮಿ ಸ್ಪೀಕರ್ ಆಗಿ ಹೊಸ ಸದಸ್ಯರಿಗೆ ಪ್ರಮಾಣ ವಚನ ಬೋಧಿಸುವ ಗೌರವ ಅವರಿಗೆ ಬಂದಿತ್ತು.
ದೀರ್ಘ ಕಾಲ ವಿರೋಧ ಪಕ್ಷದಲ್ಲಿದ್ದ ಗುಪ್ತಾ ಅವರು ನೇರ–ಖಾರ ನುಡಿಗೆ ಹೆಸರುವಾಸಿ. ಅವರ ತರ್ಕಬದ್ಧ ಮಾತುಗಳು ಸಂಸತ್ತಿನಲ್ಲಿ ಅನೇಕರ ಗಮನ ಸೆಳೆಯುವಂತಿರುತ್ತಿತ್ತು. ಸಿಪಿಐ ವಿಚಾರಧಾರೆಗೆ ಬದ್ಧರಾಗಿದ್ದ ಅವರು ಸಾಮ್ಯವಾದಕ್ಕಿಂತ ಒಟ್ಟು ಸಂಸತ್ತಿನ ಬೌದ್ಧಿಕ ಮಟ್ಟ ಹೆಚ್ಚಿಸುವುದರಲ್ಲಿ ಶ್ರಮಿಸಿದರು. ಸಂಯುಕ್ತ ರಂಗ ಸರ್ಕಾರದಲ್ಲಿ ಕೇಂದ್ರ ಗೃಹಮಂತ್ರಿಯಾಗಿದ್ದ ಅವರು ಸರ್ಕಾರವನ್ನು ತಮ್ಮ ನೇರ ಪ್ರಶ್ನೆಗಳಿಂದ ಮುಜುಗರಗೊಳಿಸುತ್ತಿದ್ದರು. ದೊಡ್ಡ ಮತಗಳ ಅಂತರದಲ್ಲಿ ಗೆಲ್ಲುತ್ತಿದ್ದುದು ಅವರ ವಿಶೇಷತೆ. ಗೃಹಮಂತ್ರಿಯಂಥ ಮಹತ್ವದ ಹುದ್ದೆಗೆ ಏರಿದಂಥ ಮೊದಲ ಕಮ್ಯುನಿಸ್ಟ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು(1996–98).
ಸ್ವತಃ ಗುಪ್ತಾ, ಕಾರ್ಮಿಕರ ಪರ ವಹಿಸಿ ಹೋರಾಟ ಮಾಡಿದವರು, ಆದರೆ ಇವರ ತಾತ, ತಂದೆ ಮತ್ತು ಸಹೋದರರು ನಾಗರಿಕ ಸೇವೆಯಲ್ಲಿ ದೊಡ್ಡ ಹುದ್ದೆಗಳಲ್ಲಿದ್ದರು ಎಂಬುದು ಒಂದು ಸ್ವಾರಸ್ಯಕರ ಸಂಗತಿ. ದೆಹಲಿಯಲ್ಲಿ ಶಿಕ್ಷಣ ಮುಗಿಸಿದ ಬಳಿಕ ಕೇಂಬ್ರಿಡ್ಜ್ ವಿವಿಯಲ್ಲಿ ಉನ್ನತ ವ್ಯಾಸಂಗ ಮಾಡಿದ ಅವರಿಗೆ ಕಮ್ಯುನಿಸ್ಟ್ ವಿಚಾರಗಳ ಸಂಪರ್ಕ ಬಂದದ್ದು ಲಂಡನ್‌ನಲ್ಲಿ.
ಉದ್ದಕ್ಕೂ ಸರಳ ಜೀವನ ನಡೆಸಿದ ಅವರು ಎರಡು ಕೊಠಡಿಯಿರುವ ಮನೆಯಲ್ಲಿ ವಾಸವಾಗಿದ್ದರು. ಕೇಂದ್ರದಲ್ಲಿ ಮಂತ್ರಿಯಾಗುವವರೆಗೂ ನಡೆದೇ ಸಂಸತ್ತಿಗೆ ಬರುತ್ತಿದ್ದರು. 1998ರಿಂದ 2002ರವೆರೆಗೆ ಸಂಸತ್ತಿನ ಸ್ಪೀಕರ್ ಆಗಿದ್ದ ಜಿ.ಎಂ.ಸಿ.ಬಾಲಯೋಗಿ ಅವರು ಗುಪ್ತಾ ಅವರನ್ನು ‘Father of the House’ ಎಂದು ಕರೆದಿದ್ದರು. ಗುಪ್ತಾ ಅವರು ಎಷ್ಟೋ ಸಲ ಪಾಲಿಮೆಂಟ್ ಗ್ರಂಥಭಂಡಾರದಲ್ಲಿ ಕುಳಿತು ವಿವಿಧ ವಿಷಯಗಳ ಅಧ್ಯಯನ ನಡೆಸುತ್ತಿದ್ದರು.
ಅರ್ಥಶಾಸ್ತ್ರ, ರಕ್ಷಣೆ, ವಿದೇಶಾಂಗ ವ್ಯವಹಾರಗಳ ಬಗ್ಗೆ ಅಪಾರ ಅಧ್ಯಯನವಿದ್ದ ಗುಪ್ತಾ ಅವರು 'Capital and Labour in Jute Industry', 'Self- Reliance in National Defence' ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಅವರು ಕೆಂದ್ರ ಗೃಹಮಂತ್ರಿಯಾಗಿದ್ದಾಗ ಅತಿ ದೊಡ್ಡ ವಿರೋಧ ಪಕ್ಷವಾಗಿದ್ದ ಬಿಜೆಪಿ ದಿನವಿಡೀ ವಿರೋಧ ಮಾಡಿದ ಬಳಿಕ ಗುಪ್ತಾ ಹೇಳುತ್ತಿದ್ದ ಒಂದೇ ಮಾತು : ‘ ನಾನು ವಿರೋಧ ಪಕ್ಷದಲ್ಲಿದ್ದರೂ ಇದನ್ನೇ ಮಾಡುತ್ತಿದ್ದೆ.’
ಅವರು ಕೇಂದ್ರ ಗೃಹ ಮಂತ್ರಿಯಾಗಿದ್ದಾಗ ಅವರ ಕಾರು ,ವಿಮಾನ ನಿಲ್ದಾಣದ ರನ್‌ವೇ ಸಮೀಪದ ಪಥಕ್ಕೆ ಹೋಗುತ್ತಿರಲಿಲ್ಲ ಬದಲಿಗೆ ಅವರು ಏರ್‌ಲೈನ್ ಬಸ್ಸನ್ನು ಬಳಸಿ ನಿಲ್ದಾಣದಿಂದ ಹೊರಕ್ಕೆ ಬರುತ್ತಿದ್ದರು. ಸಂಸದರು ಸಾಮಾನ್ಯರಂತೆ ಬದುಕ ಬೇಕು ಎಂದು ಅವರು ನಂಬಿ ಅಂತೆಯೇ ನಡೆಯುತ್ತಿದ್ದರು. ಸಾರ್ವಜನಿಕ ಹಿತ ರಕ್ಷಣೆ ಮಾಡುವ ವಿಷಯಗಳನ್ನು ಹೆಚ್ಚಾಗಿ ಸಂಸತ್ತಿನಲ್ಲಿ ಪ್ರಸ್ತಾಪಿಸುತ್ತಿದ್ದ ಅವರಿಗೆ 1992ರಲ್ಲಿ ‘ಶ್ರೇಷ್ಠ ಸಂಸದ’ ಎಂಬ ಪುರಸ್ಕಾರ ಲಭಿಸಿತ್ತು.
ದಿಟ್ಟ, ಸುಂದರ ಮಹಿಳಾ ಸಂಸದೆ ರಾಜಮಾತಾ ಗಾಯತ್ರಿ ದೇವಿ
ಗಾಯತ್ರಿ ದೇವಿ ರಾಜಮನೆತನದಿಂದ ಬಂದು ಲೋಕಸಭೆ ವಿರೋಧ ಪಕ್ಷದ ಸದಸ್ಯೆಯಾಗಿ ಲೋಕಸಭೆ ಪ್ರವೇಶಿಸಿದ ಮಹಿಳೆ. 1919ರಲ್ಲಿ ಪಶ್ಚಿಮ ಬಂಗಾಳದ ಕೂಚ್‌್್್್ ಬಿಹಾರದ ರಾಜಮನೆತನದಲ್ಲಿ ಜನಿಸಿದ ಈ ರಾಜಕುಮಾರಿ, ಜೈಪುರ ರಾಜಮನೆತನದ ಎರಡನೇ ಮಾನ್‌ಸಿಂಗ್ ಅವರ ಮೂರನೇ ಪತ್ನಿ.
1947ರಲ್ಲಿ ಸ್ವಾತಂತ್ರ್ಯಬಂದ ಮೇಲೆ 562 ಮಹಾರಾಜರಲ್ಲಿ 20 ಮಂದಿ ರಾಜತಾಂತ್ರಿಕ ಸೇವೆಗೆ ಹೋದರು, 40 ಮಂದಿ ರಾಜಕೀಯಕ್ಕೆ ಬಂದರು, ಆದರೆ ರಾಜಕೀಯದಲ್ಲಿ ಜೈಪುರದ ಈ ರಾಣಿ ಮಾಡಿದ ಪರಿಣಾಮ ಬೇರೆ ರಾಜಮನೆತನದವರು ಮಾಡಲಿಲ್ಲ ಎಂದು ಅಂದಿನ ಪತ್ರಿಕೆಗಳು ಬರೆದವು.
ಪ್ರಪಂಚದ ಅತ್ಯಂತ 10 ಸುಂದರ ಮಹಿಳೆಯರಲ್ಲಿ ಒಬ್ಬರು ಎಂದು ಪರಿಗಣಿತರಾಗಿದ್ದವರು ಗಾಯತ್ರಿ ದೇವಿ.
ನಟ ಅಮಿತಾಭ್ ಬಚ್ಚನ್ ಪಟ್ಟಿ ಮಾಡಿರುವ ಮರೆಯಲಾಗದ ಮಹಿಳೆಯರಲ್ಲಿ ಈಕೆ ಒಬ್ಬರು. ಶ್ರೀಮಂತ–ಸುಂದರ–ಮೇಧಾವಿ–‘ಮೊದಲ ದರ್ಜೆ ರಾಜಕಾರಣಿ’ ಎಂದು ಅವರನ್ನು ಆ ಕಾಲದ ಪತ್ರಿಕೆಗಳು ವರ್ಣಿಸಿದ್ದವು.
ಆಕೆ ಮತ್ತು ರಾಜ ಇಬ್ಬರೂ ರಾಜಾಜಿ ಯವರ ಸ್ವತಂತ್ರ ಪಕ್ಷ ಸೇರಿದರು. ಗಾಯತ್ರಿದೇವಿ ರಾಜಸ್ತಾನದಲ್ಲಿ ಸ್ವತಂತ್ರ ಪಕ್ಷ ಸ್ಥಾಪಿಸಿದರು. ಆಗ ರಾಜಾಜಿ ತಮ್ಮ ಪಕ್ಷದ ಪತ್ರಿಕೆಯಲ್ಲಿ ಗಾಯತ್ರಿಯವರನ್ನು ಝಾನ್ಸಿ ರಾಣಿಗೆ ಹೋಲಿಸಿದ್ದರು. ರಾಜಸ್ತಾನದ ಹೆಂಗಸರು ಪರದೆಯ ಹಿಂದೆ ಇರ ಬೇಕಿದ್ದ ಪರಿಸ್ಥಿತಿಯಲ್ಲಿ ಆಕೆ ರಾಜಸ್ತಾನದ ಜೈಪುರದಿಂದ ಸ್ವತಂತ್ರ ಪಕ್ಷದ ಟಿಕೆಟಿನಿಂದ ಲೋಕಸಭಾ ಚುನಾವಣೆ ಎದುರಿಸಿ ಕಾಂಗ್ರೆಸ್ ವಿರುದ್ಧ 1962,1967,1971ರಲ್ಲಿ ಸತತವಾಗಿ ವಿಜಯಿಯಾದದ್ದು ವಿಶೇಷ. ಇವರು 1962ರಲ್ಲಿ ಅವರು ಶೇ.78 ಮತಗಳನ್ನು ಪಡೆದು ಗಿನ್ನಿಸ್ ದಾಖಲೆ ಸೃಷ್ಟಿಸಿದ್ದರು. ಚಲಾಯಿಸಲಾದ 246,516 ಮತಗಳಲ್ಲಿ ಇವರಿಗೆ 192,909 ಮತಗಳು ಬಂದಿದ್ದವು! 1975ರ ತುರ್ತು ಪರಿಸ್ಥಿತಿಯಲ್ಲಿ ತೆರಿಗೆ ಪಾವತಿಸಿಲ್ಲ ಎಂಬ ಸುಳ್ಳು ಆರೋಪದ ಮೇಲೆ ಅವರು ಬಂಧನಕ್ಕೆ ಒಳಗಾಗಿ 5 ತಿಂಗಳು ತಿಹಾರ್ ಜೈಲಿನಲ್ಲಿದ್ದರು. 1999ರಲ್ಲಿ ತೃಣಮೂಲ ಕಾಂಗ್ರೆಸ್ ಅವರನ್ನು ಕೂಚ್ ಬಿಹಾರ್‌ನಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ನೀಡಿದ ಆಹ್ವಾನಕ್ಕೆ ಅವರು ಪ್ರತಿಸ್ಪಂದಿಸಲಿಲ್ಲ.
ಪೋಲೋ, ಕುದುರೆ ಸವಾರಿ ಮತ್ತು ಶಿಕಾರಿ ಪ್ರಿಯೆಯಾಗಿದ್ದ ಗಾಯತ್ರಿದೇವಿ ಜೈಪುರದಲ್ಲಿ ಬಾಲಕಿಯರ ಸಾರ್ವಜನಿಕ ಶಾಲೆ ತೆರೆದರು, ಜೈಪುರ ಸಾಂಪ್ರದಾಯಿಕ ಕುಂಭಕಲೆ(ಬ್ಲೂ ಪಾಟರಿ)ಯ ಉಳಿವಿಗೆ ಶ್ರಮಿಸಿದರು.ಅವರ ಹೆಸರಿನಲ್ಲಿ ಒಂದು ಫೇಸ್ ಬುಕ್ ಖಾತೆ ಕೂಡ ಇದೆ.
‘A Princess Remembers: The Memoirs of the Maharani of Jaipur’ ಇದು ಅವರ ಆತ್ಮಕತೆ. 90 ವರ್ಷ ಜೀವಿಸಿದ್ದ ಆಕೆ 2009ರಲ್ಲಿ ನಿಧನರಾದರು. ರಾಜವೈಭವ, ಪ್ರಜಾಪ್ರತಿನಿಧಿತ್ವ ಎರಡನ್ನೂ ಪ್ರತಿನಿಧಿಸಿದ ಇತಿಹಾಸದ ಸಂಧಿ ಕಾಲದಲ್ಲಿದ್ದ ಸಂಸದೆ –ಮಹಾರಾಣಿ ಗಾಯತ್ರಿದೇವಿ.
ಅರ್ಥಶಾಸ್ತ್ರ –ಸಂಸದ ತಜ್ಙ ಪ್ರೊ ಕೆ.ವೆಂಕಟಗಿರಿಗೌಡ
ಅರ್ಥಶಾಸ್ತ್ರದಲ್ಲಿ ತಜ್ಙರಾದ ಕೆಲವರು ಭಾರತದ ಸಂಸತ್ತಿನ ಸದಸ್ಯರಾಗಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್, ಪ್ರಧಾನಿ ಡಾ.ಮನಮೋಹನ್ ಸಿಂಗ್,ಪಿ.ಚಿದಂಬರಂ, ಪ್ರಣವ್ ಮುಖರ್ಜಿ,ಅರುಣ್ ಶೌರಿ ಇವರು ಕೆಲವು ಅರ್ಥಶಾಸ್ತ್ರಜ್ಙರಾಗಿದ್ದ ಸಂಸದರು. ಈ ಗುಂಪಿಗೆ ಕರ್ನಾಟಕದಿಂದ ಸೇರುವ ಹೆಸರು ಪ್ರೊ.ಕೃಷ್ಣದಾಸೇ ವೆಂಕಟಗಿರಿಗೌಡ. ಬೆಂಗಳೂರಿನ ಬೈರಪಟ್ಟಣದಲ್ಲಿ ಜನಿಸಿದ ಅವರು ಮೈಸೂರು ವಿವಿಯಿಂದ ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದ ನಂತರ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ 1956ರಲ್ಲಿ ಪಿ.ಹೆಚ್‌ಡಿ ಪಡೆದರು. ಅಲ್ಲಿ ಗೌಡರು ‘ಹಣದುಬ್ಬರ’ ಕುರಿತು ಸಂಶೋಧನೆ ಮಾಡುವಾಗಲೇ ಪ್ರತಿಷ್ಠಿತ ಲಾರ್ಡ್ ಲೆವರ್ ಹುಲ್ಮೆ ಪ್ರಶಸ್ತಿಗಾಗಿ ಆಯ್ಕೆಯಾದರು. ಮೈಸೂರು ವಿವಿಯಲ್ಲಿ ಲೆಕ್ಚರರ್, ರೀಡರ್ ಆಗಿದ್ದ ಗೌಡರು 1967ರಲ್ಲಿ ಬೆಂಗಳೂರು ವಿವಿಯಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕ ಮತ್ತು ವಿಭಾಗದ ಮುಖ್ಯಸ್ಥರಾಗಿದ್ದರು. 1983ರಲ್ಲಿ ನಿವೃತ್ತರಾದ ಬಳಿಕ 1984ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿ.ಎಸ್.ಕೃಷ್ಣ ಅಯ್ಯರ್ ವಿರುದ್ಧ ಸೋತಿದ್ದರು.
ಇವರು ಮತ್ತೆ 1991ರಲ್ಲಿ 10ನೇ ಲೋಕಸಭೆಗೆ ಬಿಜೆಪಿ ಟಿಕೆಟಿನಿಂದ ಸ್ಪರ್ಧಿಸಿ ಬೆಂಗಳೂರು ದಕ್ಷಿಣದಿಂದ ಆಯ್ಕೆಯಾದರು. ಬಿಜೆಪಿಯಲ್ಲಿ ಇದ್ದರೂ ಇವರು ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್ ಮತ್ತು ಹಣಕಾಸು ಸಚಿವ ಮನಮೋಹನ್ ಸಿಂಗ್ ಅವರ ಉದಾರೀಕರಣದ ಆರ್ಥಿಕ ನೀತಿಯನ್ನು ಮುಕ್ತವಾಗಿ ಹೊಗಳಿದ್ದರು.
ಇವರ ಕೆಲವು ಕೃತಿಗಳೆಂದರೆ 'Perestroika and Glasnost for India', 'Fiscal Revolution in India', 'Euro-Dollar Flows and International Monetary Stability', 'Inflation—Appreciation of the Indian Rupee'.‘ಬೈರಪಟ್ಟಣದಿಂದ ಬ್ರಿಟನಿನವರೆಗೆ’ ಇವರ ಆತ್ಮಕತೆ.
ಅವರು ಪೆಟ್ರೋ ಡಾಲರ್ ಕುರಿತು ಬರೆದ ಪುಸ್ತಕವು ಎಪ್ಪತ್ತರ ದಶಕದ ಮಧ್ಯ ಭಾಗದಲ್ಲಿ ಭಾರತದ ಒಳಗೆ ಮತ್ತು ವಿದೇಶಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
ಮೊದಲು ಕಾಂಗ್ರೆಸ್‌ನಲ್ಲಿದ್ದು ನಂತರ ಬಿಜೆಪಿ ಸೇರಿದ ಅವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ನಿಂತಿದ್ದ ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್ ಅವರನ್ನು ಚುನಾವಣೆಯಲ್ಲಿ ಸೋಲಿಸಿ ಇವರು ‘ಜೈಂಟ್ ಕಿಲ್ಲರ್’ ಎಂದು ಖ್ಯಾತಿ ಪಡೆದರು. ಮುಂಗೋಪವಿದ್ದ ಇವರು ನೇರ ನಡೆಗೆ ಹೆಸರಾಗಿದ್ದರು. ಒಂದು ಸಂದರ್ಶನದಲ್ಲಿ ಸಂದರ್ಶಕರು ‘ನೀವು ಮುಂಗೋಪಿ ಆದ್ದರಿಂದ ಜನರೊಡನೆ ಹೊಂದಿಕೊಂಡು ಹೋಗಲಾರದವರು ಎನ್ನುವ ಭಾವನೆಯಿದೆಯಲ್ಲ?’ ಎಂದಾಗ ‘ಹೌದು ನಾನು ಮುಂಗೋಪಿ, ಜವಾಹರಲಾಲ್ ನೆಹರುರವರು ಮುಂಗೋಪಿ ಯಾಗಿರಲಿಲ್ಲವೇ?’ ಎಂದು ಮತ್ತೆ ಕೋಪದಲ್ಲೇ ಉತ್ತರಿಸಿದ್ದರು!
ರಾಜಕೀಯವಾಗಿ ಮುಂದೆ ಭಿನ್ನ ದಾರಿಗಳನ್ನು ತುಳಿದ ಗೌಡರು ಮತ್ತು ಮನಮೋಹನ್ ಸಿಂಗ್ ಲಂಡನ್‌ನಲ್ಲಿ ಸಹಪಾಠಿಗಳಾಗಿದ್ದರು. 81 ವರ್ಷ ಬಾಳಿದ ಈ ಗೌಡರು ಎರಡು ಸಲ ಒಕ್ಕಲಿಗ ಸಂಘದ ಅಧ್ಯಕ್ಷರಾಗಿದ್ದರು.
ಪಾರ್ಲಿಮೆಂಟರಿ ಕಲಾಪಗಳ ಸಂಸ್ಥೆ ಕಾರ್ಯದರ್ಶಿ ಎಂ.ಸಿ.ಶಾಂತಮೂರ್ತಿ ಗೌಡರು ತೀರಿ ಕೊಂಡಾಗ ಅವರ ಸಾವು ಅರ್ಥಶಾಸ್ತ್ರದ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ಸಂತಾಪ ವ್ಯಕ್ತಪಡಿಸಿದ್ದರು.
ಮಹಿಳಾ ಅಧ್ಯಯನದ ಕೆಲವು ಮರೆತ ಮುಖಗಳು
ಈಗಿರುವ ಪರಿಸ್ಥಿತಿಯ ಅಧ್ಯಯನ ಹೋರಾಟ ಎರಡೂ ಪೂರಕ ಎಂಬುದು ಸದ್ಯದ ಮಹಿಳಾ ಅಧ್ಯಯನವು ಮತ್ತೆ ನೆನಪಿಸಿಕೊಂಡು ಮುಂದಿನ ವಿಚಾರಗಳನ್ನು ಓದಬೇಕೆಂದು ಮನವಿ.
ಮಹಿಳಾ ಅಧ್ಯಯನ ನಡೆಸುವ ಕೆಲವರು ಪ್ರಾಯೋಗಿಕವಾಗಿ ನೇರ ಹೋರಾಟದಲ್ಲಿ ಭಾಗವಹಿಸಲು ಹಿಂದೇಟು ಹಾಕುವುದು ನಿಜ.ಇಲ್ಲಿ ಹೋರಾಟ ನಡೆಸುವವರ ಬಗ್ಗೆ ತಾತ್ಸಾರಕ್ಕಿಂತಲೂ ತಮ್ಮ ‘ಅಕಡೆಮಿಕ್’ ವ್ಯಕ್ತಿತ್ವಕ್ಕೆ ಇದರಿಂದ ಧಕ್ಕೆಯಾಗಬಹುದು ಎಂಬ ತಪ್ಪು ಕಲ್ಪನೆ ಕೆಲವರಲ್ಲಿ ಇದೆ.
ಮಹಿಳಾ ಅಧ್ಯಯನದ ಒಳನೋಟಕ್ಕೆ, ಹೋರಾಟದ ಅನುಭವ ಅಧ್ಯಯನಕ್ಕೆ ಪರಸ್ಪರ ಬೆಂಬಲವಾಗಿರಬೇಕು.ಇದಕ್ಕೆ ಹಿಂದಿನ ಒಂದು ಉದಾಹರಣೆ ನೀಡುವುದಾದರೆ, ಮಹಾತ್ಮ ಗಾಂಧಿ ಅವರ ಅಸಹಕಾರ ಆಂದೋಲನ ನಡೆಯುತ್ತಿದ್ದಾಗ ಒಂದು ಕಡೆ ಖಾದಿ ನೂಲುವುದು, ಚರಕದ ಬಳಕೆ ಮುಂತಾದ ‘ಕಟ್ಟುವ’ ಕೆಲಸಗಳು, ವಿದೇಶಿ ಬಟ್ಟೆಗಳನ್ನು ಸುಡುವುದು, ಪಿಕೆಟಿಂಗ್, ಮದ್ಯದ ಅಂಗಡಿಗಳಿಗೆ ಮುತ್ತಿಗೆ ಮೊದಲಾದ ‘ಹೋರಾಟದ ’ಕೃತ್ಯಗಳು ಜತೆಯಾಗಿ ನಡೆಯುತ್ತಿದ್ದವು. ಇದರ ಜತೆಗೆ ಹಿಂಸೆ–ಅಹಿಂಸೆಯ ವ್ಯಾಖ್ಯಾನವೂ ನಡೆಯುತ್ತಿತ್ತು. ಈಗಿನ ವಾದ–ವಿವಾದ, ಪ್ರತಿಭಟನೆ, ಸೃಜನಶೀಲತೆ ಎಲ್ಲವೂ ಬೆರೆತ ವಾತಾವರಣವೊಂದು ದಲಿತ ಅಧ್ಯಯನ, ಮಹಿಳಾ ಅಧ್ಯಯನ ಮೊದಲಾದ ಚಳವಳಿ ಆಧಾರಿತ ಶಿಸ್ತುಗಳಿಗೆ ಬೇಕು.ಫುಲೆ, ಸರಸ್ವತಿಬಾಯಿ ಫುಲೆ, ಅಂಬೇಡ್ಕರ್ ಇವರಾರಿಗೂ ಸಂಘರ್ಷ ಮತ್ತು ಓದು ಬೇರೆ ಬೇರೆ ವಿಷಯವಾಗಿರಲಿಲ್ಲ.
ಉದಾಹರಣೆಗೆ ರಾಷ್ಟ್ರೀಯ ಮಹಿಳಾ ಆಯೋಗ ಪ್ರತಿ ವರ್ಷ ವರದಿಗಳನ್ನು ಹೊರತರುತ್ತಿದ್ದು, ಅದನ್ನು ಮಹಿಳಾ ಅಧ್ಯಯನದಲ್ಲಿ ಸೇರಿಸುವುದು ಅತ್ಯಾವಶ್ಯಕ.ಅದು ವರ್ಷದಿಂದ ವರ್ಷಕ್ಕೆ ಬದಲಾಗುತ್ತಿರಬೇಕು. ಈ ವರದಿಗಳನ್ನು ವ್ಯವಸ್ಥಿತವಾಗಿ ವಿಶ್ಲೇಷಿಸಿ ವಿಮರ್ಶೆಗೆ ಒಳಪಡಿಸುವುದು ಸಿಲಬಸ್ ಒಳಗೇ ನಡೆಯಬೇಕು.
ಮಹಿಳಾ ಅಧ್ಯಯನದ ಕ್ಷೇತ್ರ ಸೀಮಿತವಾಗದಂತೆ ಕೆಲಸ ನಡೆಯಬೇಕು. ಅಂದರೆ ಈ ಕ್ಷೇತ್ರ ದಿನದಿಂದ ದಿನಕ್ಕೆ ವಿಸ್ತಾರವಾಗಬೇಕು.
ಇಲ್ಲಿರುವ ವಿಷಯಗಳು ದಂತಗೋಪುರದ ಗಾಂಭೀರ್ಯದ ಮುಖವಾಡ ಹೊತ್ತ ಅಧ್ಯಯನಗಳಾಗ ಬೇಕಿಲ್ಲ. ಸಮಾಜದ ಕೊನೆಯ ಮಹಿಳೆಯ ಸ್ಥಿತಿಗತಿ ಸುಧಾರಿಸುವುದು ಹೇಗೆ? ಅಧಿಕಾರ ಕೇಂದ್ರಗಳ ಜತೆ ಅನುಸಂಧಾನ ನಡೆಸುವುದು ಹೇಗೆ? ಎಂಬುದನ್ನು ನೇರವಾಗಿ ಅನುಭವಿಗಳ ಸಹಾಯದಿಂದ ವಿದ್ಯಾರ್ಥಿಗಳಿಗೆ ತಿಳಿಸಿಕೊಡಬೇಕಾಗುತ್ತದೆ.
ಮಹಿಳಾ ಅಧ್ಯಯನದಲ್ಲಿ ನನ್ನ ಸೀಮಿತ ಓದಿಗೆ ಗೋಚರಿಸಿದ ಹಾಗೆ ದೊಡ್ಡ ಮಟ್ಟದ ದೇಸಿ ಮೂಲದ ತಾತ್ವಿಕ ಆಯಾಮವಿಲ್ಲ. ಮಹಿಳಾ ಅಧ್ಯಯನಕ್ಕೆ ಸೇರಬೇಕಾದ ಆಯಾಮಗಳು: ತಂತ್ರಗಳು ಮತ್ತು ಮಹಿಳಾ ಅಧ್ಯಯನ.ಭಾರತೀಯ ಸಾಹಿತ್ಯದಲ್ಲಿ ವೈದಿಕ, ಜೈನ ,ಬೌದ್ಧ, ಆದಿವಾಸಿ, ಜಾನಪದ ಸಾಹಿತ್ಯದಷ್ಟೆ ಮಹತ್ವದ ಆದರೆ ಇದುವರೆಗೂ ಇಡೀ ಭಾರತೀಯ ಶಿಕ್ಷಣದಲ್ಲಿ ಮರ್ಯಾದೆಯ ಸ್ಥಾನ ದೊರೆತಿಲ್ಲ. ತಂತ್ರ ಎಂದರೆ ಈಗಲೂ ಮಾಟ, ವಶೀಕರಣ ಎಂಬ ಅರ್ಥವೇ ಪ್ರಬಲವಾಗಿದೆ. ಸರ್ ಜಾನ್ ವುಡ್ರೋಫ್ ಮೊದಲಿಗೆ ತಂತ್ರದ ಅನುವಾದ ವ್ಯಾಖ್ಯಾನಕ್ಕೆ ತೊಡಗಿದರು, ಪಿ.ಸಿ.ಬಾಗಚಿ, ಗೋಪಿನಾಥ ಕವಿರಾಜ ಅದನ್ನು ವಿಸ್ತರಿಸಿದರು. ಮಾರ್ಕ್ಸ್ ವಾದಿ, ದೇವಿ ಪ್ರಸಾದ್ ಚಟ್ಟೋಪಾಧ್ಯಾಯರು ತಮ್ಮ ‘ಲೋಕಾಯತ’ ದಲ್ಲಿ ಒಂದು ಅಧ್ಯಾಯವನ್ನೇ ತಂತ್ರಗಳಿಗೆ ಮೀಸಲಿಟ್ಟಿದ್ದಾರೆ. ಆದರೆ ಮಹಿಳಾ ಅಧ್ಯಯನದ ಕೇಂದ್ರ ಭೌತಿಕವಾದ ಸಮಸ್ತ ಆಯಾಮಗಳ ಮಹಿಳೆಯಾಗಿರುವಂತೆ, ತಂತ್ರಗಳ ಫಿಲಾಸಫಿಯೇ ಮಾತೃ ತತ್ವದ ಉಪಾಸನೆಯಾಗಿದೆ.ಈ ಕುರಿತು ಲಿಖಿತ, ಅಲಿಖಿತ ಸಾಹಿತ್ಯವಿರುವಂತೆ ಕಲೆ, ಆರೋಗ್ಯ ವಿಜ್ಞಾನವೂ ಇದೆ. ಮಹಿಳಾ ಅಧ್ಯಯನ ದಶದಿಕ್ಕುಗಳಲ್ಲೂ, ಸಾಧ್ಯವಿರುವ ಎಲ್ಲಾ ಆಯಾಮಗಳಲ್ಲೂ ಹಬ್ಬಬೇಕಿದೆ.ಪಾಶ್ಚಾತ್ಯ ಲೋಕದೃಷ್ಟಿಯಂತೆ ತೃತಿಯ ಜಗತ್ತಿನ ಬೇರೆ ಬೇರೆ ಲೋಕದೃಷ್ಟಿಗಳೂ ಅದರಲ್ಲಿ ಪ್ರವೇಶ ಪಡೆಯಬೇಕಿದೆ.
ಕಳೆದ ಮೂವತ್ತು ವರ್ಷಗಳಲ್ಲಿ ಸಾಂಸ್ಕೃತಿಕ ಓದು ವಿಶೇಷವಾಗಿ ಮಾನವಿಕ ಶಿಕ್ಷಣದ ಭಾಗವಾಗಿ ಒಳಗೆ ಬಂದಿದೆ. ಆದರೆ ಮಹಿಳಾ ಅಧ್ಯಯನವು ಈ ಆಯಾಮದಲ್ಲಿ ಮರೆತ ಪುಟವಾಗಿಬಿಟ್ಟಿದೆ. ವಿಶಾಲವೂ ಸಂಕೀರ್ಣವೂ ಆದ ಸಾಂಸ್ಕೃತಿಕ ಅಧ್ಯಯನದ ಅಖಂಡ ಹಾಸು ಹೊಕ್ಕಾದ ಭಾಗವಾಗಿ ಮಹಿಳಾ ಅಧ್ಯಯನ ಬೆಳೆಯಬೇಕಾಗಿದೆ.
ವೀಣಾ ಮಜುಂದಾರ್,ಶರ್ಮಿಳಾ ರೇಗೆ ಮೊದಲಾದವರ ಬಗ್ಗೆ ಸಾಹಿತ್ಯ ಸೃಷ್ಟಿಯಾಗುತ್ತಿಲ್ಲ.ಮಹಿಳೆಯರ ಸಂಘಟಿತ ಹೋರಾಟದ ಬಗ್ಗೆ ಚಿತ್ರಣ ಕಟ್ಟಿಕೊಡುವ ಆಂದೋಲನದ ಕೃತಿಗಳು ಬರುತ್ತಿಲ್ಲ.It is a special study not a separate study-–ಎಂಬ ಮಾತು ಮತ್ತೆ ಚಲಾವಣೆಗೆ ಬರಬೇಕು.
ಹಿಂದೆ ಡಿ.ಆರ್.ನಾಗರಾಜ ಅವರು ಗಾರ್ಗಿ ಪ್ರತಿಭೆ, ಮೈತ್ರೇಯಿ ಪ್ರತಿಭೆ ಕುರಿತು ಹೊಸ ಕಲ್ಪನೆ ಬರುವ ಮಾತು ಆಡಿದ್ದರು, ಆದರೆ ಅದನ್ನು ಯಾರಾದರೂ ಮುಂದುವರೆಸಿ ಚರ್ಚೆಯನ್ನು ವಿಸ್ತರಿಸಬೇಕಿತ್ತು, ಈಗಲೂ ಆ ಕೆಲಸ ಕೈಗೆತ್ತಿಕೊಳ್ಳಬೇಕಿದೆ.
ಕರ್ನಾಟಕದ ಮಹಿಳಾ ಅಧ್ಯಯನದ ವಿಭಾಗಗಳು ಎದುರಿಸುತ್ತಿರುವ ದೊಡ್ಡ ಕೊರತೆಯೆಂದರೆ ಸೂಕ್ತವಾದ ಆಕರಗಳದ್ದು. ಬಿ.ಎನ್.ಸುಮಿತ್ರಾಬಾಯಿ, ತೇಜಸ್ವಿನಿ ನಿರಂಜನ, ಎನ್.ಗಾಯತ್ರಿ ಇವರು ಸಂಕಲಿಸಿರುವ, ರಚಿಸಿರುವ ಕೆಲವು ಕೃತಿಗಳನ್ನು ಬಿಟ್ಟರೆ ಇವತ್ತಿಗೂ ಮಹಿಳಾ ಅಧ್ಯಯನದ ವಿದ್ಯಾರ್ಥಿಗಳು ಪರಾಮರ್ಶನೆ ಮಾಡಲು ಕನ್ನಡದಲ್ಲಿ ಪುಸ್ತಕಗಳಿಲ್ಲ. ಯುರೋಪಿನ ವಿವಿಧ ಭಾಷೆಗಳಲ್ಲಿ ಇರುವ ಮಹಿಳಾ ಅಧ್ಯಯನದ ಕೃತಿಗಳು ಕನ್ನಡಕ್ಕೆ ಬರಬೇಕು. ಶ್ರೀಮತಿಯವರು ಅನುವಾದಿಸಿದ ಸಿಮ ದಿ ಬೊವಾ ಅವರ ‘ದಿ ಸಿಕೆಂಡ್ ಸೆಕ್ಸ್’ ಮಹಿಳಾ ಅಧ್ಯಯನದ ಅನುವಾದಗಳಲ್ಲಿ ಮಹತ್ವದ ಸ್ಥಾನಗಳಿಸಿದೆ. ಈ ರೀತಿಯ ಕೃತಿಗಳ ಅನುವಾದದ ಸಂಖ್ಯೆ ಹೆಚ್ಚಬೇಕು. ಈ ಅನುವಾದಗಳು ತಯಾರಾಗುವಾಗ ಸೂಕ್ತವಾದ ಟಿಪ್ಪಣಿಗಳು, ನಮ್ಮ ಸಂದರ್ಭಕ್ಕೆ ಈ ಅರಿವನ್ನು ಒಳಗೆ ತೆಗೆದು ಕೊಳ್ಳುವ ಬಗೆಗಳನ್ನೂ ಚರ್ಚಿಸುವಂಥ ಮುನ್ನುಡಿಗಳು ಬೇಕಾಗುತ್ತವೆ.
ಇಲ್ಲಿ ವಹಿಸಬೇಕಾದ ಒಂದು ಎಚ್ಚರವೆಂದರೆ ವಿಚಾರದ ರೈಲು ಗಾಡಿಯಲ್ಲಿ ಪಶ್ಚಿಮದ ಎಂಜಿನ್ನಿಗೆ ನಮ್ಮ ಬೋಗಿಗಳನ್ನು ಕಟ್ಟಿಹಾಕಬಾರದು.
ಮಹಿಳಾ ಪತ್ರಕರ್ತೆಯರು,ಹೋರಾಟಗಾರ್ತಿಯರು, ಸಾಮಾಜಿಕ ನಾಯಕಿಯರು – ಪರಿಸರ ಕಾರ್ಯಕರ್ತೆಯರು, ರಾಜಕಾರಣಿಗಳು, ಉದ್ಯಮಿಗಳು, ಕಾನೂನು ಚಿಂತಕಿಯರು ಮತ್ತು ಯಾವುದೇ ಗುಂಪಿಗೂ ಸೇರದ ಮಹಿಳಾ ನಾಯಕಿಯರು ಇವರೆಲ್ಲರನ್ನೂ ಕುರಿತು 100 ಪುಟಗಳ ಕಿರು ಹೊತ್ತಿಗೆಗಳು ಮಹಿಳಾ ಅಧ್ಯಯನದ ವಿದ್ಯಾರ್ಥಿಗಳ ಕೈಗೆ ತಲುಪಿದರೆ ಎಷ್ಟು ಚೆನ್ನಾಗಿರುತ್ತದೆ?
ಮಹಿಳಾ ಅಧ್ಯಯನದ ಹಣೆಪಟ್ಟಿ ಹೊರದೆ ಇರುವ ಅನೇಕರು ಮಹಿಳೆ ಕುರಿತ ಮಹತ್ವದ ವಿಷಯಗಳನ್ನು ಬರೆದಿದ್ದಾರೆ, ಚರ್ಚಿಸಿದ್ದಾರೆ.ಇದರಲ್ಲಿ ಓಶೋ, ಜಿಡ್ಡು ಕೃಷ್ಣಮೂರ್ತಿ,ಧರಂಪಾಲ್ ಮೊದಲಾದವರಿದ್ದಾರೆ. ಇವರ ಚಿಂತನೆಗಳು ಮಹಿಳಾ ಅಧ್ಯಯನದ ಬಿ.ಎ., ಎಂ.ಎ. ಅಧ್ಯಯನದ ಪಠ್ಯಗಳಾಗುವ ಎಲ್ಲಾ ಅರ್ಹತೆಗಳನ್ನು ಪಡೆದಿವೆ.
ನವೋದಯದ ಸಾಹಿತಿಗಳ ಸಾಲಿನಲ್ಲಿ ಎಂದಿಗೂ ಕಲ್ಯಾಣಮ್ಮ, ನಂಜನಗೂಡು ತಿರುಮಲಾಂಬಾ, ಸೇರುವುದಿಲ್ಲ. ಏಕೆ? ರಂ.ಶ್ರೀ.ಮುಗಳಿ, ಎಲ್.ಎಸ್.ಶೇಷಗಿರಾವ್, ಕೀರ್ತಿನಾಥ ಕುರ್ತಕೋಟಿ ಇವರು ಬರೆದಿರುವ ಹೊಸಗನ್ನಡ ಸಾಹಿತ್ಯ ಚರಿತ್ರೆಗಳಲ್ಲಿ ಕನ್ನಡದಪ್ರಮುಖರಾದ ಲೇಖಕಿಯರಿಗೆಹೇಳಿಕೊಳ್ಳುವ ‘ಸ್ಪೇಸ್’ದೊರೆತಿಲ್ಲ. ದ.ರಾ.ಬೇಂದ್ರೆ, ಕೆ.ಎಸ್.ನರಸಿಂಹಸ್ವಾಮಿ ಇವರು ಖಂಡಿತವಾಗಿ ಸ್ತ್ರೀಸಂವೇದನೆ ಇದ್ದ ಲೇಖಕರು. ಬೇಂದ್ರೆ ಅವರ ಅನೇಕ ಮುಖ್ಯ ಕವನಗಳ ನಿರೂಪಕಿ ಹೆಣ್ಣೇ ಆಗಿದ್ದಾಳೆ. ಸಾಹಿತ್ಯ ಚರಿತ್ರೆಗಳ ನಿರ್ಮಾಣ ಕನ್ನಡದ ಸಂದರ್ಭದಪ್ರಮುಖ ರಾಜಕಾರಣಗಳಲ್ಲೊಂದು.ಅದರಲ್ಲಿ ಮಹಿಳಾ ಅಧ್ಯಯನದ ದೃಷ್ಟಿಯಿಂದ ರಾಜಕೀಯ ಮಾಡಬೇಕಾದ ಆವಶ್ಯಕತೆ ಇದೆ.
ಲಿಂಗ ಅಧ್ಯಯನದ (gender studies) ಒಂದು ಭಾಗವಾಗಿ ಮಹಿಳಾ ಅಧ್ಯಯನ ನಡೆಯಬೇಕು,ಆಗ ಅದನ್ನು ದ್ವೀಪವಾಗಿಸುವ ಪ್ರಯತ್ನ ಸ್ವಲ್ಪವಾದರೂ ಕಮ್ಮಿಯಾಗುತ್ತದೆ.
ಮಹಿಳಾ ಅಧ್ಯಯನ, ಪುರುಷ ಅಧ್ಯಯನ (men studies) ಸಲಿಂಗಿಗಳು, ಟ್ರಾನ್ಸ್ ಜೆಂಡರ್ ನವರ ಅಧ್ಯಯನಗಳು (LGBT studies), ಲೈಂಗಿಕತೆ ಕುರಿತ ಅಧ್ಯಯನಗಳು (sexuality) ಒಂದಕ್ಕೊಂದು ಬೆರೆತ ವಾತಾವರಣದಲ್ಲಿ ಮಹಿಳಾ ಅಧ್ಯಯನ ಮತ್ತೊಮ್ಮೆ ಗರಿಗೆದರಬಹುದು.
ಕನ್ನಡದ ಪ್ರಜ್ಙಾವಂತ ಪುರುಷರ ಗುಂಪು ವಿವಿಧ ಸಂದರ್ಭಗಳಲ್ಲಿ ಹೇಗೆ ಮಹಿಳಾ ವಿಷಯಗಳಿಗೆ ಸ್ಪಂದಿಸಿದೆ ಎಂಬುದು ಮಹಿಳಾ ಅಧ್ಯಯನದ ಒಂದು ಭಾಗವಾಗಬೇಕು. ತಕ್ಷಣಕ್ಕೆ ನೆನಪಾಗುವುದು ಅರವತ್ತು ಎಪ್ಪತ್ತು ವರ್ಷಗಳ ಹಿಂದೆ ಶಂಬಾ ಜೋಶಿ ಅಡುಗೆ ಮನೆ ಕುರಿತು ಬರೆದ ಬರೆಹ, ಪಂಡಿತ ತಾರಾನಾಥರು ಮಹಿಳೆ ಮತ್ತು ಪುರುಷರ ಲೈಂಗಿಕ ಜೀವನದ ವಿಷಯಗಳ ಮೇಲೆ ಬರೆದಿರುವುದು ,ಡಿವಿಜಿಯವರು ಅಬಲಾಶ್ರಮದ ಬಗ್ಗೆ ಬರೆದಿರುವುದು –ಇವುಗಳನ್ನು ಈಗ ಮಹಿಳಾ ಅಧ್ಯಯನ, ಮರುವಿಚಾರದ ದೃಷ್ಟಿಯಿಂದ ನೋಡಬೇಕು.
ಕ್ರಿಸ್ತಶಕದ ಮೂರನೇ ಮಿಲೆನಿಯಂನಲ್ಲಿ ಮಹಿಳೆ, ಪರಿಸರ ಇವು ಮುಂಚೂಣಿಯ ವಿಷಯಗಳಾಗಬೇಕು.ಇಲ್ಲಿ ಯಾರು ಜಾಗ ಬಿಡುವುದಿಲ್ಲ, ನಾವೆ ಜಾಗ ಕಲ್ಪಿಸಿಕೊಳ್ಳಬೇಕು.
ಮಾಂತ್ರಿಕ ವಾಸ್ತವಿಕತೆಯ ಪಿತಾಮಹ ಗಾರ್ಸಿಯಾ ಮಾರ್ಕ್ವೆಜ್ ನಿಧನಕ್ಕೆ ಕಂಬನಿಯ ಮಹಾಪೂರ
ಮಾಂತ್ರಿಕ ವಾಸ್ತವಿಕತೆಯಮಾಂತ್ರಿಕ ವಾಸ್ತವಿಕತೆಯ ಮೂಲಕ ಪ್ರೇಮ, ಕುಟುಂಬ ಮತ್ತು ಲ್ಯಾಟಿನ್ ಅಮೆರಿಕಾದ ಸರ್ವಾಧಿಕಾರಿತ್ವದ ಬಗ್ಗೆ ಮಹಾನ್ ಕೃತಿಗಳನ್ನು ರಚಿಸಿದ್ದ ಕೊಲಂಬಿಯಾದ ನೊಬೆಲ್ ಪ್ರಶಸ್ತಿ ವಿಜೇತ ಲೇಖಕ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ನಿಧನಕ್ಕೆ ವಿಶ್ವದಾದ್ಯಂತ ಹರಿದು ಬಂದಿದೆ.
87ನೇ ವಯಸ್ಸಿನಲ್ಲಿ ನಿಧನರಾಗಿರುವ ಮಾರ್ಕ್ವೆಜ್ ಅವರನ್ನು ಅವರ ಆಪ್ತರು
‘ಗಾಬೊ‘ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ‘ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್’ , ‘ಲವ್ ಇನ್ ದ ಟೈಂ ಆಫ್ ಕಾಲೆರ’ ದಂಥ ಜಗತ್ತಿನ ಅತಿ ಜನಪ್ರಿಯ ಕೃತಿಗಳನ್ನು ರಚಿಸಿದ್ದ ಲ್ಯಾಟಿನ್ ಅಮೆರಿಕಾದ ಈ ಲೇಖಕ ತನ್ನ ಖಂಡದ ಪ್ರಕ್ಷುಬ್ಧತೆಗೆ ಸಾಕ್ಷಿಯಾದ ಸಾಹಿತ್ಯ ಆಂದೋಲನಕ್ಕೆ ಸಾಕ್ಷಿಯಾಗಿದ್ದ.
ಗೆಳೆಯರು ತನ್ನನ್ನು ಇಷ್ಟಪಡಲಿ ಎಂದು ಇವನು ಬರೆಯುತ್ತಾನೆ ಎಂದು ಪತ್ರಕರ್ತ ಮಾರ್ಕ್ವೆಜ್‌ನ್ನು ಸಹ ನೋಬೆಲ್ ಪುರಸ್ಕೃತ ಮಾರಿಯೋ ವರ್ಗಾಸ್ ಲ್ಲೋಸಾ ಒಮ್ಮೆ ತಮಾಷೆ ಮಾಡಿದ್ದ. ಮಾರ್ಕ್ವೆಜ್ ಕ್ಯೂಬಾದ ನಾಯಕ ಫಿಡಲ್ ಕ್ಯಾಸ್ಟ್ರೋವಿನ ಮಿತ್ರನಾಗಿದ್ದ.
‘ಕೊಲಂಬಿಯಾದ ಈ ಸರ್ವ ಶ್ರೇಷ್ಠನ ಸಾವಿನಿಂದ ಒಂದು ಸಾವಿರ ವರ್ಷಗಳ ಒಂಟಿತನ ಮತ್ತು ಬೇಸರ ಉಂಟಾಗಿದೆ‘ ಎಂದು ಕೊಲಂಬಿಯಾದ ಅಧ್ಯಕ್ಷ ಜುವಾನ್ ಮ್ಯಾನುಯಲ್ ಸಾಂಟೋಸ್ ಟ್ವೀಟ್ ಮಾಡಿದ್ದಾರೆ. ಕೊಲಂಬಿಯಾದ ಅಧ್ಯಕ್ಷರಾದ ಅವರು ಮೂರು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದ್ದಾರೆ.
ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮ ‘ ಜಗತ್ತು ತನ್ನ ಅತಿ ದೊಡ್ಡ ದಾರ್ಶನಿಕ ಲೇಖಕನ್ನು ಕಳೆದುಕೊಂಡಿದೆ‘ ಎಂದಿದ್ದಾರೆ. ಫ್ರೆಂಚ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲ್ಲಾಂಡ್, ಈ ‘ ಸಾಹಿತ್ಯಕ ದೈತ್ಯ’ನಿಗೆ ಸಂಬಂಧಿಸಿದ ತಮ್ಮ ಶೋಕ ಸಂದೇಶದಲ್ಲಿ ‘ಅವರು ನಮ್ಮ ಕಾಲದ ದಕ್ಷಿಣ ಅಮೆರಿಕಾದ ಬಹುದೊಡ್ಡ ಬುದ್ಧಿಜೀವಿಯಾಗಿದ್ದರು’ ಎಂದು ಬಣ್ಣಿಸಿದ್ದಾರೆ.
‘ಲ್ಯಾಟಿನ್ ಅಮೆರಿಕಾದ ದನಿಯಾಗಿದ್ದ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಇಡೀ ನಮ್ಮ ವಿಶ್ವಕ್ಕೇ ದನಿಯಾದರು. ಅವರ ಪ್ರತಿಭೆ ನಮ್ಮನ್ನು ಶ್ರೀಮಂತಗೊಳಿಸಿತ್ತು ಅವರ ಸಾವು ನಮ್ಮನ್ನು ಬಡವರನ್ನಾಗಿ ಮಾಡಿದೆ ’ ಎಂದು ಯುರೋಪಿಯನ್ ಕಮಿಷನ್ನಿನ ಅಧ್ಯಕ್ಷ ಜೋಸ್ ಮ್ಯಾನುಅಲ್ ಬರ್ರೋಸೊ ತಿಳಿಸಿದ್ದಾರೆ.
ಮಾರ್ಚ್ 31ರಂದು ನ್ಯುಮೋನಿಯಾ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದ ಮಾರ್ಕ್ವೆಜ್ ಅವರನ್ನು ಒಂದು ವಾರದ ಬಳಿಕ ಬಿಡುಗಡೆ ಮಾಡಲಾಗಿದ್ದು ಅವರು ಮೆಕ್ಸಿಕೊ ಸಿಟಿಯಲ್ಲಿರುವ ತಮ್ಮ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಅವರ ನಿಧನದ ಸರಿಯಾದ ಕಾರಣ ತಿಳಿದುಬಂದಿಲ್ಲ.
ಮಾರ್ಕ್ವೆಜ್ ಅವರು ಕೊಲಂಬಿಯಾದ ಕೆರಿಬಿಯನ್ ಕರಾವಳಿಯ ಅರಕಾಟಕ ಹಳ್ಳಿಯಲ್ಲಿ ತಂತಿ ನಿರ್ವಾಹಕನೊಬ್ಬನ ಮಗನಾಗಿ 1927ರ ಮಾರ್ಚ್ 6ರಂದು ಜನಿಸಿದರು.
ಸ್ಪೇನಿನ ವಲಸೆಗಾರರು, ಸ್ಥಳೀಯ ನಿವಾಸಿಗಳು ಮತ್ತು ಕಪ್ಪು ಗುಲಾಮರುಗಳಿರುವ ಉಷ್ಣವಲಯದ ಸಂಸ್ಕೃತಿಯಲ್ಲಿ ಅಜ್ಜ–ಅಜ್ಜಿ ಮತ್ತು ಚಿಕ್ಕಮ್ಮನ ಆರೈಕೆಯಲ್ಲಿ ಮಾರ್ಕ್ವೆಜ್ ಬೆಳೆದರು. ಅವರ ತಾತ ಸೈನ್ಯದ ನಿವೃತ್ತ ಅಧಿಕಾರಿಯಾಗಿದ್ದರು.
ಅವರ ತಾಯ್ನಾಡಿನ ಅದ್ಭುತ ಕತೆಗಳು ಹೇರಳವಾಗಿ ಬರೆಯಲು ಅವರಿಗೆ ಸ್ಫೂರ್ತಿ ನೀಡಿದವು. ಅವರ ಮೇರುಕೃತಿ ‘ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್’ ಜಗತ್ತಿನ 35 ಭಾಷೆಗಳಿಗೆ ಅನುವಾದವಾಗಿದ್ದು 3 ಕೋಟಿಗೂ ಹೆಚ್ಚಿನ ಪ್ರತಿಗಳು ಮಾರಾಟವಾಗಿವೆ.
ಒಂದೇ ಕುಟುಂಬದಿಂದ ಒಂಬತ್ತು ಮಂದಿ ಲೋಕಸಭೆಗೆ!
ರಾಜೀವ್ ಗಾಂಧಿ ಭಾರತದ ನಗುಮೊಗದ ರಾಜಕಾರಣಿಗಳಲ್ಲಿ ಒಬ್ಬರು. ಒಂದೇ ಕುಟುಂಬದ ಸದಸ್ಯರು ದೇಶದ ರಾಜಕೀಯದಲ್ಲಿ ಅತ್ಯಂತ ಸಕ್ರಿಯವಾಗಿ ಪಾಲ್ಗೊಂಡಿರುವುದಕ್ಕೆ ಈ ನೆಹರೂ–ಗಾಂಧಿ ಕುಟುಂಬ ಒಂದು ಉತ್ತಮ ನಿದರ್ಶನ. ಅವರ ತಾತ ನೆಹರೂ ದೇಶದ ಮೊದಲ ಪ್ರಧಾನಿ, ತಾಯಿ ಇಂದಿರಾಗಾಂಧಿ ಭಾರತದ ಮೂರನೇ ಪ್ರಧಾನಿ. ರಾಜೀವ್ ಗಾಂಧಿ ಅವರ ತಂದೆ ಪಾರ್ಸಿ ಧರ್ಮಕ್ಕೆ ಸೇರಿದ ಫಿರೋಜ್ ಷಾ ಗಂಧಿ ಅವರು ಪತ್ರಕರ್ತರು ಮತ್ತು ಮೊದಲನೇ ಲೋಕಸಭೆಗೆ ಉತ್ತರಪ್ರದೇಶದ ರಾಯ್ ಬರೇಲಿಯಿಂದ 1952–57ರ ಅವಧಿಗೆ ಆಯ್ಕೆಯಾಗಿದ್ದರು.
1980ರಲ್ಲಿ ತಮ್ಮ ಸಂಜಯ ಗಾಂಧಿ ವಿಮಾನ ಅಪಘಾತದಲ್ಲಿ ಮರಣಹೊಂದಿದ ಮೇಲೆ ಇಂದಿರಾಗಾಂಧಿ ಅವರ ಆಗ್ರಹದ ಮೇರೆಗೆ ರಾಜೀವ್ ರಾಜಕೀಯ ಪ್ರವೇಶಿಸಿದರು. ಸಂಜಯ ಗಾಂಧಿ ಅವರ ಪತ್ನಿ ಶ್ರೀಮತಿ ಮನೇಕಾ ಗಾಂಧಿ ಅವರು ಈ ಪರಿವಾರಕ್ಕೆ ಸೇರಿದ ಕಾಂಗ್ರೆಸೇತರ ಲೋಕಸಭಾ ಸದಸ್ಯೆ. ಅವರು 9,11,12,13,14,15 ನೇ ಲೋಕಸಭೆಗೆ ಆಯ್ಕೆಯಾಗಿದ್ದರು. ಅವರ ಪುತ್ರ ವರುಣ್ ಗಾಂಧಿ ಅವರು 15ನೇ ಲೋಕಸಭೆಗೆ ಉತ್ತರಪ್ರದೇಶದ ಪಿಲಿಭೇತ್ ಕ್ಷೇತ್ರದಿಂದ ಆಯ್ಕೆಯಾಗಿದ್ದರು.
ಇಂದಿರಾಗಾಂಧಿ ಅವರು 1984ರ ಅಕ್ಟೋಬರ್ 31ರಂದು ಅವರ ಅಂಗರಕ್ಷಕರಿಂದ ಹತ್ಯೆ ನಂತರದ ಮಹಾಚುನಾವಣೆಯಲ್ಲಿ ಗೆದ್ದು ರಾಜಕೀಯಕ್ಕೆ ಬಂದ ರಾಜೀವ್ ಅವರು ಪ್ರಧಾನಿಯಾದರು. ಒಂದೇ ಕುಟುಂಬದಿಂದ ಆಯ್ಕೆಯಾದ ಮೂರನೇ ಪ್ರಧಾನಿ ಇವರು. ಲೋಕಸಭಾ ಸದಸ್ಯರೂ ಆಗಿದ್ದ ಇವರ ತಂದೆ, ತಾಯಿ, ಅಜ್ಜ, ತಮ್ಮ ಇವರ ಅಂತಿಮಸಂಸ್ಕಾರ ರಾಜೀವ್ ಅವರೇ ಮಾಡಬೇಕಾಗಿ ಬಂದಿತ್ತು.
7,8,9,10ನೇ ಲೋಕಸಭೆಗೆ ಆಯ್ಕೆಯಾದ ರಾಜೀವ್ ಅವರು ಮತ್ತೆ ಮತ್ತೆ ಉತ್ತರಪ್ರದೇಶದ ಅಮೇಠಿಯಿಂದ ಆಯ್ಕೆಯಾದರು. ದೇಶದ ಪ್ರಧಾನಿಯಾಗುವುದರೊಡನೆ ಕೆಲವು ಕಾಲ ರಕ್ಷಣಾ ಸಚಿವರಾಗಿ,ಪರಿಸರ ಮತ್ತು ಅರಣ್ಯ ಖಾತೆ ಸಚಿವರಾಗಿಯೂ ಸೇವೆ ಸಲ್ಲಿಸಿದರು.ಒಂಬತ್ತನೇ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು.
ಕರ್ನಾಟಕದಲ್ಲಿ ಕಾಂಗ್ರೆಸ್ ನ ವೀರೇಂದ್ರ ಪಾಟೀಲರನ್ನು ಅನಿರೀಕ್ಷಿತವಾಗಿ ಮುಖ್ಯಮಂತ್ರಿ ಪದವಿಯಿಂದ ಇಳಿಸಿದ ಪ್ರಕರಣ ಆ ಕಾಲದಲ್ಲಿ ದೊಡ್ಡ ಚರ್ಚೆಯ ವಿಷಯವಾಗಿತ್ತು.
ಅವರ ಹತ್ಯೆಗೆ ಮೊದಲು ನಡೆದ ಮಹಾಚುನಾವಣೆಯಲ್ಲಿ ರಾಜೀವ್ ಕರ್ನಾಟಕದಲ್ಲಿ ಚುನಾವಣಾ ಪ್ರವಾಸ ಮಾಡುವಾಗ ಕೇರಳದ ಗಡಿ ಪ್ರದೇಶವಾದ ತಲಪಡಿಗೆ ಬಂದರು, ಅವರನ್ನು ಆಸ್ಕರ್ ಫರ್ನಾಂಡಿಸ್ ಸ್ವಾಗತಿಸಿದ ಮೇಲೆ ರಾಜೀವ್ ಕಾರಿನಲ್ಲಿ ಕುಳಿತರು. ಆಗ ಆಸ್ಕರ್ ಹೇಳಿದರು : ‘Sir,mind your head’(ಸರ್, ದಯವಿಟ್ಟು ನಿಮ್ಮ ತಲೆ ಹುಷಾರು). ’I will have to mind my head’(ಹೌದು, ನನ್ನ ತಲೆ ಕಾಪಾಡಿಕೊಳ್ಳಬೇಕು). ಆದರೆ ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಅವರು ಎಲ್.ಟಿ.ಟಿ.ಇ. ಭಯೋತ್ಪಾದಕರ ಭಯೋತ್ಪಾದನೆಗೆ ಮೇ 21, 1991ರಂದು ಬಲಿಯಾದರು.
ಮುಂದೆ ಇವರ ಪತ್ನಿ ಶ್ರೀಮತಿ ಸೋನಿಯಾ ಗಾಂಧಿ ಅವರು 13,14,15ನೇ ಲೋಕಸಭೆಗೆ ಆಯ್ಕೆಯಾದರು ಮತ್ತು 1998ರಿಂದ ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷೆಯಾಗಿದ್ದಾರೆ. ಅವರ ಮಗ ರಾಹುಲ್ ಗಾಂಧಿ 14,15ನೇ ಲೋಕಸಭೆಗೆ ಅಮೇಠಿಯಿಂದ ಆಯ್ಕೆಯಾಗಿದ್ದರು. ಹೀಗೆ ಒಂದೇ ಕುಟುಂಬದ ಒಂಬತ್ತು ಮಂದಿ ಲೋಕಸಭೆಗೆ ಪ್ರವೇಶೀಸಿದ್ದು ವಿಶೇಷ ವಿದ್ಯಮಾನ.
ಅಟಲ್ ಬಿಹಾರಿ ವಾಜಪೇಯಿ :ಕವಿ ಹೃದಯದ ಪ್ರಧಾನಿ – ಸಂಸದ
ತಮ್ಮ ದೀರ್ಘ ಕಾಲದ ರಾಜಕೀಯ ಜೀವನದಲ್ಲಿ ಅನೇಕ ವಿಶೇಷತೆಗಳನ್ನು ಹೊಂದಿರುವ ಸಂಸದರಲ್ಲಿ ಅಟಲ್ ಬಿಹಾರಿ ವಾಜಪೇಯಿ ಒಬ್ಬರು. ಲೋಕಸಭೆಗೆ ಒಂಬತ್ತು ಸಲ, ರಾಜ್ಯ ಸಭೆಗೆ ಎರಡು ಸಲ ಗೆದ್ದು ಬಂದ ಅವರು ಮೊದಲಿನಿಂದಲೂ ಸೈದ್ಧಾಂತಿಕ ರಾಜಕೀಯದಲ್ಲಿ ವಿಶ್ವಾಸವಿರಿಸಿದವರು.
ಆರೆಸ್ಸೆಸ್ ಹಿನ್ನೆಲೆಯಿಂದ ಬಂದ ವಾಜಪೇಯಿ, ಅದರ ಅಂಗ ಸಂಸ್ಥೆ ಜನಸಂಘದಲ್ಲಿ ಮೊದಲು ಸೇವೆ ಸಲ್ಲಿಸಿದರು. ಜನಸಂಘದ ಸ್ಥಾಪಕ ಡಾ.ಶಾಮಾ ಪ್ರಸಾದ್ ಮುಖರ್ಜಿ ಅವರ ಒಡನಾಡಿಯಾಗಿದ್ದ ಅವರು ಕಾಶ್ಮೀರ ಕುರಿತ ಹೋರಾಟದಲ್ಲಿ ಭಾಗವಹಿಸಿದ್ದರು. 1957ರಲ್ಲಿ ಲೋಕಸಭೆಗೆ ಮೊದಲ ಸಲ ಬಲರಾಂಪುರದಿಂದ ಆಯ್ಕೆಯಾದರು. ವಿವಿಧ ಕಾಲಘಟ್ಟಗಳಲ್ಲಿ ಉತ್ತರಪ್ರದೇಶ, ದೆಹಲಿ, ಮಧ್ಯಪ್ರದೇಶ,ಗುಜರಾತಿನಿಂದ ಆಯ್ಕೆಯಾದ ಏಕೈಕ ಸಂಸದೀಯ ಪಟು ಅವರು.
ಹಿಂದಿಯ ಉತ್ತಮ ಕವಿ ಎಂಬ ಪ್ರಶಂಸೆಗೆ ಪಾತ್ರರಾದ ಅವರು ಆಕರ್ಷಕ ಭಾಷಣಗಳಿಗೆ ಮೊದಲಿನಿಂದಲೂ ಹೆಸರುವಾಸಿ. ಕಾಂಗ್ರೆಸ್ ನೀತಿಗಳನ್ನು ಆಗಿಂದಾಗ್ಗೆ ಟೀಕಿಸಿಯೂ ಅವರು ಮಾತಿನಲ್ಲಿ ಸಂಯಮ ತೋರುತ್ತಿದ್ದರು.1975ರಲ್ಲಿ ಶ್ರೀಮತಿ ಇಂದಿರಾಗಾಂಧಿ ಅವರು ಹೇರಿದ ಆಂತರಿಕ ತುರ್ತು ಪರಿಸ್ಥಿಯಲ್ಲಿ ಬಂಧನಕ್ಕೆ ಒಳಗಾದ ಅವರು 1977 ರಲ್ಲಿ ನಡೆದ ಮಹಾ ಚುನಾವಣೆಯಲ್ಲಿ ವಿಜೇತರಾಗಿ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದರು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ವಾಜಪೇಯಿ ಅವರು ಹಿಂದಿಯಲ್ಲಿ ಭಾಷಣ ಮಾಡಿದ್ದು ಸುದ್ದಿಯಾಗಿತ್ತು. ಜನತಾ ಸರ್ಕಾರ ಪತನವಾದ ಮೇಲೆ ವಾಜಪೇಯಿ, ಸಂಗಡಿಗರೊಡನೆ ಸೇರಿ ಭಾರತೀಯ ಜನತಾಪಕ್ಷವನ್ನು(ಬಿಜೆಪಿ)1980ರಲ್ಲಿಹುಟ್ಟುಹಾಕಿದರು. ಶ್ರೀಮತಿ ಇಂದಿರಾಗಾಂಧಿ ಅವರ ಹತ್ಯೆಯ ನಂತರ 1984ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದು ಕೇವಲ ಎರಡು ಸ್ಥಾನಗಳಲ್ಲಿ, ಅದರಲ್ಲಿ ವಾಜಪೇಯಿ ಕೂಡ ಗೆಲುವು ಸಾಧಿಸಿದರು ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕರಾದರು.
1996ರಿಂದ 2004ರವರೆಗೆ ವಾಜಪೇಯಿ ಅವರು ಸತತವಾಗಿ ಮೂರು ಸಲ ಭಾರತದ ಪ್ರಧಾನಿಯಾಗಿದ್ದರು.ಅವರ ಪ್ರಧಾನಿ ಅವಧಿಯಲ್ಲಿ ಭಾರತ –ಪಾಕಿಸ್ತಾನದ ನಡುವಿನ ಸಂಬಂಧ ಸುಧಾರಿಸುವ ಪ್ರಯತ್ನಗಳು ನಡೆದು, ದೆಹಲಿ–ಲಾಹೋರ್ ನಡುವೆ ಬಸ್ ಸಂಚಾರ ಆರಂಭವಾಯಿತು. ಕಾರ್ಗಿಲ್ ಯದ್ಧದಲ್ಲಿ ಭಾರತ ಗೆಲುವು ಸಾಧಿಸಿದ ನಂತರ ನಡೆದ ಮಹಾಚುನಾವಣೆಯಲ್ಲಿ 543 ಸ್ಥಾನಗಳಲ್ಲಿ ಬಿಜೆಪಿ ನೇತೃತ್ವದ ಎನ್ ಡಿ ಎ ಗೆ 303 ಸ್ಥಾನ ಗಳಿಸಿತು.
2002ರಲ್ಲಿ ಗುಜರಾತಿನಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಹಿಂದು–ಮುಸ್ಲಿಂ ಹಿಂಸಾಚಾರವನ್ನು ಬಹಿರಂಗವಾಗಿ ಖಂಡಿಸಿದ ಪ್ರಧಾನಿ ವಾಜಪೇಯಿ, ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ರಾಜಧರ್ಮ ಪಾಲಿಸಲು ಸೂಚಿಸಿದ್ದರು.
ರಾಜ್ಯ ಸಭೆಯಲ್ಲಿ ಹಾಲಿ ಪ್ರಧಾನಿ ಮನಮೋಹನ ಸಿಂಗ್ ವಾಜಪೇಯಿ ಅವರನ್ನು ಭಾರತೀಯ ರಾಜಕೀಯದ ಭೀಷ್ಮ ಪಿತಾಮಹ ಎಂದು ಹೊಗಳಿದ್ದರು.
1977ರಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರಾದ ಮೇಲೆ ಅವರು ತಮ್ಮ ಕಚೇರಿಗೆ ಪ್ರವೇಶಿಸಿದರು.ಅವರನ್ನು ಸಂತೋಷಗೊಳಿಸಬಹುದು ಎಂದು ಭಾವಿಸಿದ್ದ ಅಧಿಕಾರಿಗಳು ಹಿಂದಿನ ಸರ್ಕಾರದ ಅನೇಕ ನಾಯಕರ ಭಾವಚಿತ್ರಗಳನ್ನು ತೆಗೆದಿದ್ದರು. ವಾಜಪೇಯಿ ತಮ್ಮ ಕೊಠಡಿಗೆ ಬಂದ ಕೂಡಲೆ ಕೇಳಿದ ಪ್ರಶ್ನೆ:‘ನೆಹರೂ ಅವರ ಭಾವಚಿತ್ರ ಮೊದಲು ಇಲ್ಲಿತ್ತಲ್ಲಾ, ಎಲ್ಲಿ ಹೋಯಿತು?’.
ಮೊದಲ ಸಲ ಲೋಕಸಭೆಗೆ ಆಯ್ಕೆಯಾದ ಅವರು ಮಾಡಿದ ಭಾಷಣವನ್ನು ಮೆಚ್ಚಿದ್ದ ನೆಹರೂ, ಮುಂದೆ ವಾಜಪೇಯಿ ಭಾರತದ ಪ್ರಧಾನಿಯಾಗುವರು ಎಂದು ‘ಭವಿಷ್ಯ’ ನುಡಿದಿದ್ದರು.
2005ರಲ್ಲಿ ಸಕ್ರಿಯ ರಾಜಕೀಯದಿಂದ ನಿವೃತ್ತರಾದ ವಾಜಪೇಯಿ ಸಾತ್ವಿಕ ಸಾರ್ವಜನಿಕ ನಡವಳಿಕೆ ಮತ್ತು ಸೈದ್ಧಾಂತಿಕ ರಾಜಕೀಯ ಎರಡೂ ಒಟ್ಟೊಟ್ಟಿಗೆ ಸಾಗಬಹುದು ಎಂಬುದನ್ನು ತೋರಿಸಿದ ಅಪರೂಪದ ರಾಜಕಾರಣಿ.
ಅಕಡೆಮಿಗಳು ಹೇಗಿರಬೇಕು?
ವಿವಿಧ ಅಕಡೆಮಿಗಳಿಗೆ ಅಧ್ಯಕ್ಷ ಮತ್ತು ಸದಸ್ಯರ ನೇಮಕಾತಿ ಹೋದ ವಾರ ಆಗಿದೆ.ಇದು ಎಂದೋ ಆಗ ಬೇಕಾದ ಕೆಲಸ, ತುಂಬ ತಡವಾಗಿ ಆಗಿದೆ.ಇದರಲ್ಲಿ ಕೆಲವರು ಅರ್ಹತೆ ಇದ್ದವರು, ಕೆಲವರು ಇದಕ್ಕೆಂದೆ ಅರ್ಹತೆ ಕಲ್ಪಿಸಿಕೊಂಡವರು ಬಂದಿದ್ದಾರೆ.ಅಕಡೆಮಿಗಳು ಸುಮಾರು ಎರದು ವರ್ಷದ ನಂತರ ಮತ್ತೆ ಕೆಲಸ ಶರು ಮಾಡಲು ಹೊರಟಿರುವುದು ಶುಭ ಸೂಚನೆ.ಹೊಸ ರೀತಿಯಲ್ಲಿ ಕೆಲಸ ಮಾಡಲು ಇದೊಂದು ಅವಕಾಶ.ಕಾಲ ಬದಲಾಗಿದೆ, ಜನಗಳ ಆಶೋತ್ತರಗಳು ಬದಳಗಿವೆ.ಒಂದು ಅ ಕಾಡೆಮಿ ಎಂದರೇನು?ಅದು ಮಾಡಲೇಬೇಕಾದ ಕೆಲಸಗಳು ಏನು?ಪುನರಾವರ್ತನೆ ಆಗದಂತೆ ಹೇಗೆ ಕೆಲಸ ಮಾಡಬಹುದು ಎಂಬ ಬಗ್ಗೆ ಮೊದಲಿಗೆ ಎಲ್ಲ ಅಕಡೆಮಿಗಳ ಅಧ್ಯಕ್ಷರ ಮತ್ತು ರಿಜಿಸ್ಟ್ರಾರಗಳ ಸಭೆ ಕರೆದು ಒಂದು ಸಮಗ್ರ ಚಿತ್ರಣ ಪಡೆಯಬೇಕು.ಕುವೆಂಪು ಭಾಷಾ ಪ್ರಾಧಿಕಾರ,ಕರ್ನಾಟಕ ಸಾಹಿತ್ಯ ಅಕಾಡೆಮಿ,ಕರ್ನಾಟಕ ಜಾನಪದ ಅಕಾಡೆಮಿ,ಕನ್ನಡ ಸಂಸ್ಕತಿ ಇಲಾಖೆ ಇವಗಳು ಪರಸ್ಪರ ಒಟ್ಟಿಗೆ ಕುಳಿತು ಕೆಲಸ ದ ಯೋಜನೆ ಮಾಡಿದರೆ ಲಾಭವಿದೆ.//ವಚನ, ದಾಸ ಸಾಹಿತ್ಯದ ಸಮಗ್ರ ಸಂಪುಟಗಳಂತೆ ಸಮಗ್ರ ಕನ್ನಡ ತತ್ವಪದ ಸಾಹಿತ್ಯದ ಸರಣಿ ತರಬೇಕಿದೆ.
ಸಮಗ್ರ ಸಾಹಿತ್ಯ ಸಾಹಿತ್ಯ ಸಂಪುಟಗಳಲ್ಲಿ ಒಂದು ಪ್ರಮುಖ ಸಮಸ್ಯೆಯಿದೆ.ಈಗ ದಿ.ಹಾಮಾನಾ ಸಂಪಾದಿಸಿದ್ದ ಡಿವಿಜಿ ಸಂಪುಟ ಸಮಗ್ರವಲ್ಲ,ಅದರಲ್ಲಿ ಡಿವಿಜಿಯವರು ದಿವಾನ ಮಿರ್ಜಾ ಇಸ್ಮಾಯಿಲ, ಸರ ಎಂ.ವಿಶ್ವೇಶ್ವರಯ್ಯ, ತಿ.ತಾ.ಶರ್ಮ, ರಾಜಾಜಿ ಮೊದಲಾದವರಿಗೆ ಬರೆದ ನೂರಾರು ಪತ್ರಗಳು ಸೇರಿಲ್ಲ.ಇನ್ನು ಈಗಾಗಲೆ ವಹಿಸಿಕೊಟ್ಟಿರುವ ಟಿ.ಎಸ.ವೆಂಕಣ್ಣಯ್ಯ ಮತ್ತು ಎ.ಆರ.ಕೃಷ್ಣಶಾಸ್ತ್ರಿ ಸಂಪುಟಗಳು ಹೊರಗೆ ಬಂದಿಲ್ಲ.ಸಮಗ್ರಗಳ ಪರಿಕಲ್ಪನೆಯಲ್ಲಿ ಸಮಸ್ಯೆಯಿದೆ.ಉದಾಹರಣೆಗೆ ರೆವರೆಂಡ ಕಿಟ್ಟಲ, ಬಿ.ಎಲ.ರೈಸ,ಆರ.ನರಸಿಂಹಾಚಾರ,ಆ.ನೇ.ಉಪಾಧ್ಯೆ, ಡಿವಿಜಿ ಯವರ ಸಾವಿರಾರು ಪುಟಗಳ ಬರಹ ಇಂಗ್ಲಿಷಿನಲ್ಲಿದೆ.ಅದನ್ನು ಯಾರು ಪ್ರಕಟಿಸಬೇಕು?ಕನ್ನಡದ ಪ್ರಸಿದ್ಧ ಪತ್ರಕರ್ತ ತಿ.ತಾ.ಶರ್ಮಾ ಅವರ ’ವಿಶ್ವಕರ್ಣಾಟಕ’ದ ಸಂಪಾದಕೀಯ,ಲೇಖನಗಳಲ್ಲದೆ ಬೇರೆಡೆ ಚದುರಿ ಹೋಗಿರುವ ಅಸಂಖ್ಯಾತ ಬರಹಗಳು ಒಂದು ಕಡೆ ಸಮಗ್ರವಾಗಿ ಸಿಗುತ್ತಿಲ್ಲ.ಇದೇ ಸಾಲಿಗೆ ಬೇಂದ್ರೆಯವರನ್ನು ಪ್ರಭಾವಿಸಿದ ಶಾಂತಕವಿ,ಸರಸ್ವತಿಬಾಯಿ ರಾಜವಾಡೆ,ಎನ.ಅಂತರಂಗಾಚಾರ ಬರಹಗಳು ಸೇರುತ್ತವೆ.ಬಾಬಾಸಾಹೇಬ ಅಂಬೇಡ್ಕರ ಚಿಂತನೆ ಕನ್ನಡಕ್ಕೆ ಬಂದಿದೆ, ಆದರೆ ಮೊದಲ ಮುದ್ರಣದಲ್ಲಿತುಂಬ ತಪ್ಪುಗಳು ಮಾತ್ರವಲ್ಲ,ಕಾನೂನಿಗೆ ಸಂಬಂಧಿಸಿದ ಮೂಲದ ಕಠಿಣ ಭಾಗಗಳು ಬಿಟ್ಟು ಹೋಗಿದ್ದವು,ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಹೊಸ ಮುದ್ರಣದಲ್ಲಿ ಈ ಲೋಪಗಳು ಆದಷ್ಟು ಸರಿಯಾಗಿವೆ. ರಾಂಮನೋಹರ ಲೋಹಿಯ ಸಮಗ್ರದ ಕೆಲಸ, ದೀನದಯಾಳ ಸಮಗ್ರದ ಕೆಲಸ ಪೂರ್ಣವಾಗಿಲ್ಲ. ಅದೇ ರೀತಿ ಮಹಾತ್ಮ ಫುಲೆ ಸಮಗ್ರ ಕನ್ನಡಕ್ಕೆ ಬರಬೇಕಿದೆ.ಒಂದೊಂದು ಅಕಾಡೆಮಿ ಮೂಲ ಮಾಹಿತಿ ಸಂಗ್ರಹಣೆಗೆ ಪರಿಣತರ, ಪರಿಶ್ರಮ ಪಡಬಲ್ಲವರ ತಂಡ ಕಟ್ಟಿ ಕೊಂಡು ಕಾಲ ಮಿತಿಯೊಳಗೆ ಈ ಕೆಲಸ ಮಾಡಿ ಮುಗಿಸ ಬೇಕು.ಪಟ್ಟ ಶ್ರಮ ಸಾರ್ಥಕವಾಗ ಬೇಕಾದರೆ ಸಿಡಿ ರೂಪದಲ್ಲಿ ಸಂಗ್ರಹಿಸಿ ತನ್ನ ಅಕಾಡೆಮಿ //ಅಂತರ್ಜಾಲ ತಾಣದಲ್ಲಿ ಹಾಕಬೇಕು.ಇಲ್ಲಿ ಪ್ರಾಜೆಕ್ಟ ಗುಟನಬರ್ಗ(project Guttenberg) ಮಾದರಿ ಅನುಸರಿಸಬಹುದು.ಆಗ ಒಂದು ಸಲ ಮಾಡಿದ ಕೆಲಸ ಶಾಶ್ವತವಾಗಿ ಉಳಿಯುತ್ತದೆ, ಮುಂದಿನ ಪೀಳಿಗೆಯ ಪಾಲಿಗೆ ದೊಡ್ಡ ಸಂಪತ್ತಾಗುತ್ತದೆ.
ಅಕಾಡೆಮಿಗಳು ತಮ್ಮ ಹಿಂದಿನ ಎಲ್ಲ ಪ್ರಕಟಣೆಗಳನ್ನು ಮೊದಲು ಅಂತರ್ಜಾಲ ತಾಣದಲ್ಲಿ ಪಿಡಿಎಫ(pdf) ಡಿಜೆವಿಯು(djvu) ಮತ್ತು ಇನ್ನಿತರ ರೂಪಗಳಲ್ಲಿ ಕಡ್ಡಾಯವಾಗಿ ಹಾಕಬೇಕು.ಆಯಾ ಸಮಿತಿಯ ಕಾಲದಲ್ಲಿ ನಡೆದ ಕೆಲಸಗಳ ಸಂಕ್ಷಿಪ್ತ ವರದಿಗಳನ್ನು, ಪುಸ್ತಕಗಳನ್ನು ಕೆಲಸ ಮಾಡಿದವರ ಹೆಸರಿನ ಸಮೇತ ಹಾಕಬೇಕು.ಇದು ಹಿಂದೆ ಕೆಲಸ ಮಾಡಿದವರನ್ನು ಗೌರವಿಸುವ ಕ್ರಮವೂ ಹೌದು.
ಈಗ ಎಲ್ಲಾ ವಿಷಯಗಳಲ್ಲೂ ಸರಳವಾದ ಆದರೆ ಅಧಿಕೃತ ವಿವರ, ವಿಶ್ಲೇಷಣೆಯಿರುವ 100–200 ಪುಟಗಳ ಪುಸ್ತಕಗಳ ಅಗತ್ಯವಿದೆ.ಹಿಂದೆ ಬರಗೂರು ಅವರ ಕಾಲದಲ್ಲಿ ಸಾಹಿತ್ಯ ಅಕಾಡೆಮಿ ಇಂತಹ ಕೃತಿಗಳನ್ನು ಪ್ರಕಟಿಸಲಾಗಿತ್ತು.
ಇಂಗ್ಲಿಷಿನಲ್ಲಿ ಇರುವ ನಮ್ಮ ಸಂದರ್ಭಕ್ಕೆ, ಸಮಾಜಕ್ಕೆ ಅತ್ಯಗತ್ಯವಾದ
ವಿವಿಧ ಆಕರ ಪುಸ್ತಕಗಳು ನಮಗೆ ಬೇಕು.ಸಾಹಿತ್ಯದ ಅತಿ ಹಳೆಯ ರೂಪಗಳಾದ ಮಹಾಕಾವ್ಯ, ನಾಟಕ,ಈಚಿನ ರೂಪವಾದ ಕಾದಂಬರಿ ಕುರಿತು ಜಗತ್ತಿನ ವಿವಿಧೆಡೆಗಳಲ್ಲಿ ಬಂದಿರುವ ಹೊಸ ನೋಟಗಳು ತುರ್ತಾಗಿ ಕನ್ನಡಕ್ಕೆ ಬೇಕು.ಅದೇ ರೀತಿ ನಮ್ಮ ಪ್ರಮುಖ ಲೇಖಕರ ಬಗ್ಗೆ ಬೇರೆ ಭಾರತೀಯ ಭಾಷೆಗಳಲ್ಲಿ ವ್ಯಕ್ತವಾಗುತ್ತಿರುವ ಹೊಸ ಮಾತುಗಳು ಅಕಾಡೆಮಿಗಳ ಮೂಲಕ ಜನರಿಗೆ ತಲುಪಬೇಕು.ಈಗಜಾನಪದ ವಿಶ್ವವಿದ್ಯಾಲಯಲ್ಲಿರುವ ಅನೇಕರು ಜಾನಪದ ಅಕಾಡೆಮಿಯಲ್ಲಿ ಕೆಲಸ ಮಾಡಿರುವವರೆ,ಹಾಗಾಗಿ ಪರಸ್ಪರ ಮಾತನಾಡಿಕೊಂಡು ಜಾನಪದಕ್ಕೆ ಸಂಬಂಧ ಪಟ್ಟ ಅತ್ಯುತ್ತಮ ಕೆಲಸ ಮಾಡಲು ಬಹಳ ಅವಕಾಶವಿದೆ.
ಕೊನೆಗೂ ಎಲ್ಲವೂ ನಡೆಯುತ್ತಿರುವುದು ಪ್ರಜೆಗಳ ತೆರಿಗೆಯಿಂದ ಅಲ್ಲವೆ?
ಏನೇ ಕನ್ನಡದ ಮಾತನಾಡಿದರು
ಮೊನ್ನೆ ಮೊನ್ನೆ ಸರ್ಕಾರದ ಪರವಕೀಲರನ್ನು ಹೈಕೋರ್ಟ ತಾಯ್ನುಡಿ ಕುರಿತು ಕೇಳಿದ ಪ್ರಶ್ನೆ ಯಾರು ಇನ್ನು ಮರೆತಿಲ್ಲ.ಕನ್ನಡ ಬಿಡದೆ, ಇಂಗ್ಲಿಷನಲ್ಲಿರುವ //ಜ್ಙಾನ ನಮ್ಮ ಹೊಸ ತಲೆಮಾರನ್ನು ಸೇರಬೇಕಿದೆ.ಕವಿ ಸಿದ್ಧಲಿಂಗಯ್ಯನವರು ಒಂದು ಸಲ ಹೇಳಿದ ಸಾಲು ನನಗೆ ಇನ್ನೂ ನೆನಪಿದೆ:’ಕನ್ನಡ ನಮ್ಮ ಬೇರು ಇಂಗ್ಲಿಷ ಅನ್ನ ಸಾರು’.ವಸಾಹತೋತ್ತರ, ಆಧುನಿಕೋತ್ತರ ಸಂದರ್ಭ ಮನೆಗಳಲ್ಲಿ ಕನ್ನಡ ಕಮ್ಮಿಯಾಗುತ್ತಿರುವ ಸಮಯವೂ ಹೌದು.ಜನರ ಬದುಕಿಗೆ ಉಪಯೋಗವಾಗುವ ರೀತಿಯಲ್ಲಿ, ಗ್ರಾಮೀಣ ಭಾಗಗಳಲ್ಲಿ ಕುಸಿದಿರುವ ಆತ್ಮವಿಶ್ವಾಸ ಚಿಗುರುವಂತೆ ಮಾಡುವ ದಿಕ್ಕಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು,ರೂಪಿಸಬೇಕಿದೆ.
ವಿವಿಧ ಅಕಾಡೆಮಿಗಳ ಹಿಂದಿನ ಹಣಕಾಸು ವಹಿವಾಟಿನ ವೈಖರಿ ನೋಡಿದರೆ ಅದು ಆಶಾದಾಯಕವಾಗಿಲ್ಲ.ಜನರಿಂದ ಪಡೆದ 1ರೂಗೆ 100 ಪೈಸೆಗೂ ಲೆಕ್ಕ ಕೊಡಬೇಕೆಂದು ಗೋಪಾಲಕೃಷ್ಣ ಗೋಖಲೆ ಹೇಳಿದ್ದರು.ಇದರ ಅರ್ಥ, ಅಧ್ಯಕ್ಷರು ಸದಸ್ಯರು ಮಂಜೂರಾಗಿರುವ ಹಣ ವಾಪಸಾಗಲು ಬಿಡದೆ, ಸೂಕ್ತವಾಗಿ ಬಳಸಿಕೊಳ್ಳಬೇಕು,ಇದರಲ್ಲಿ ಬೇಕಿರುವುದು ಯೋಜನೆ ಮತ್ತು ಅನುಷ್ಠಾನವೇ ಹೊರತು ಸಂಕೋಚವಲ್ಲ.ಮಹಾರಾಷ್ಟ್ರ, ಕೇರಳ, ಬಂಗಾಳ,ಒಡಿಶಾಗೆ ಸಾಂಸ್ಕೃತಿಕ ಲಕ್ಷಣವಿರುವಂತೆ ಕನ್ನಡಕ್ಕೂ ಇದೆ,ಕನ್ನಡಕ್ಕೆ ಒಂದು ಕಾಲವಿರುವಂತೆ, ಒಂದು ದೇಶವೂ ಇದೆ.ಕೆ.ವಿ.ಸುಬ್ಬಣ್ಣ ಒಂದು ಲೇಖನದಲ್ಲಿ ಹೇಳಿರುವಂತೆ ’ಭವಕರ್ನಾಟಕ’ವಿರುವಂತೆ ’ಭಾವಕರ್ನಾಟಕ’ವೂ ಇದೆ.ಕನ್ನಡದ ವ್ಯಕ್ತಿತ್ವದೊಡನೆ ಅದರ ಅಸ್ತಿತ್ವದ ಪ್ರಶ್ನೆಗಳನ್ನು ಎಲ್ಲಾ ಅಕಾಡೆಮಿಗಳು ಮೈಮೇಲೆ ಎಳೆದುಕೊಳ್ಳಬೇಕು.
ಯಾವುದೆ ಅನುಮಾನವಿಲ್ಲದೆ ಸದಸ್ಯರು ತಾವು ಈ ನಾಡಿನ ಸಾಂಸ್ಕೃತಿಕ ರಾಯಭಾರಿಗಳು ಎಂಬಂತೆ ತುಂಬ ಎಚ್ಚರದಿಂದ ಅಷ್ಟೆ ಭಯಮುಕ್ತರಾಗಿ ವರ್ತಿಸಬೇಕು.ಸರ್ಕಾರ ತಾನೆ ಸಾಂಸ್ಕೃತಿಕ ನೀತಿ ರೂಪಿಸುವ ಮಾತನ್ನು ಆಡಿತ್ತು, ಅದು ಸರ್ಕಾರದ ಕೆಲಸವಲ್ಲ.ಸರ್ಕಾರ ಅನುದಾನ ಬಿಡುಗಡೆ ಮಾಡಿ,ಕೆಲಸ ಆಗುತ್ತಿದೆಯೆ ಎಂದು ಕನ್ನಡ ಸಂಸ್ಕ್ರತಿ ಇಲಾಖೆ ಮೂಲಕ ಆಗಾಗ ತಿಳಿದು ಕೊಳ್ಳುತ್ತಿರಬೇಕು.ಕೆಲವು ಅಕಾಡೆಮಿಗಳ ಮಾರಾಟ ಮಳಿಗೆಗಳಿಗೆ ಬೆಂಗಳೂರು ನಗರದೊಳಗೆ ಮಾರಾಟ ಮಳಿಗೆ ವ್ಯವಸ್ಥೆಯಿಲ್ಲ,ಇದರತ್ತ ಸರ್ಕಾರ ಕೂಡಲೆ ಗಮನ ಕೊಡಬೇಕು.ಸರ್ಕಾರ ನಿಗದಿತ ಹಣ ನೀಡಬೇಕು, ಹೊಸ ಅಧ್ಯಕ್ಷರು, ಸದಸ್ಯರು ಚಿಲ್ಲರೆ ರಾಜಕೀಯಗಳಲ್ಲಿ,ಜಾತಿಗದ್ದಲದ ಕ್ಲೇಶದಲ್ಲಿ ಸಿಲುಕಿ ಕೊಳ್ಳದೆ ಕನ್ನಡ ಮನಸ್ಸಿನ ಆತ್ಮಸಾಕ್ಷಿಗಳಂತೆ ನಡೆದು ಕೊಳ್ಳಬೇಕು.ಜಗತ್ತಿನ ಅತಿ ಪ್ರೌಢ, ಪ್ರಾಚೀನ ಮತ್ತು ಜೀವಂತ ಭಾಷೆ ಕನ್ನಡ ಎಂಬ ಅರಿವೊಂದಿದ್ದರೆ ಅದರ ಬೆಳಕು ತಾನೇ ದಾರಿ ತೋರಿಸುತ್ತದೆ.(ಸಂಗತ:ಪ್ರಜಾವಾಣಿ)
ಫೀಲ್ಡ್ ಮಾರ್ಷಲ್ ಮಾಣಿಕ್ ಷಾ
1971ರ ಡಿಸೆಂಬರ್ ವೇಳೆಯಲ್ಲಿ ಸೈನ್ಯದ ಮುಖ್ಯಸ್ಥ ಮಾಣಿಕ್ ಷಾ ಅವರಿಗೆ ಪ್ರಧಾನಿ ಇಂದಿರಾ ಗಾಂಧಿಯಿಂದ ಬುಲಾವ್ ಹೇಳಿ ಕಳುಹಿಸಿದರು, ಅವರು ಬಂದೊಡನೆ ಆಕೆ ಕೇಳಿದ ಮೊದಲ ಪ್ರಶ್ನೆ: ‘ಈಗ ಯುದ್ಧ ಮಾಡಲು ಸೈನ್ಯ ಸಿದ್ಧವೇ?’ ಗುಂಡಿನಂತೆ ಬಂದ ಉತ್ತರ: “I am always ready, sweetie.” ಅವರು ಇಂದಿರಾ ಅವರನ್ನು ಮೇಡಂ ಎಂದು ಕರೆಯಲು ಒಪ್ಪುತ್ತರಲಿಲ್ಲ. ಹೀಗೆ ನೇರ ನಡೆಯ ಮುಕ್ತ ಮಾತಿನ ವ್ಯಕ್ತಿ ಮಾಣಿಕ್ ಷಾ.
ಈ ಸಂಭಾಷಣೆಗೆ ಒಂದು ಕಿರು ಹಿನ್ನೆಲೆ ಇದೆ.
ಬಾಂಗ್ಲಾ ದೇಶವು ಪಾಕಿಸ್ತಾನದಿಂದ ಬೇರ್ಪಟ್ಟು ಸ್ವತಂತ್ರ ದೇಶವಾಗಬೇಕು ಎಂದು ಪೂರ್ವ ಪಾಕಿಸ್ತಾನ ಪಶ್ಚಿಮ ಪಾಕಿಸ್ತಾನದ ವಿರುದ್ಧ ಒಂಬತ್ತು ತಿಂಗಳು ಯುದ್ಧ ಮಾಡಿತು, ಇದಕ್ಕೆ ‘ಮುಕ್ತಿಯುದ್ಧ’ ಎಂಬ ಹೆಸರು ಬಂತು.
ಈ ಯುದ್ಧ 1971ರ ಮಾರ್ಚ್‌ನಲ್ಲಿ ಮುಜಬುರ್ ರೆಹಮಾನ್ ನೇತೃತ್ವದಲ್ಲಿ ಆರಂಭವಾಗಿ ಒಂಬತ್ತು ತಿಂಗಳು ನಡೆಯಿತು. ಬಂಗಾಳದ ನಾಗರಿಕರು, ವಿದ್ಯಾರ್ಥಿಗಳು, ಸೈನಿಕರು ಸೇರಿ ನಡೆಸಿದ ಈ ಹೋರಾಟವನ್ನು ಪಾಕಿಸ್ತಾನದ ಸೈನ್ಯ ದಮನ ಮಾಡಲು ಕ್ರೂರವಾಗಿ ವರ್ತಿಸಿತು. ಅಸಂಖ್ಯ ಮಹಿಳೆಯರ ಮೇಲೆ ಪಾಕಿಸ್ತಾನ ಮತ್ತು ಮತೀಯ ಕೋಮುವಾದಿಗಳು ಅತ್ಯಚಾರವೆಸಗಿದರು.
ಆಗ ಬಾಂಗ್ಲಾಪರ ನಾಗರಿಕರಿಗೆ ಭಾರತ, ಆರ್ಥಿಕ, ರಾಜತಾಂತ್ರಿಕ,ಸೈನಿಕ ಬೆಂಬಲ ನೀಡಿತು.ಭಾರತಕ್ಕೆ ಮನೆ ಮಠ ಕಳೆದುಕೊಂಡ ಲಕ್ಷಾಂತರ ನಿರಾಶ್ರಿತರು ಹರಿದು ಬಂದರು. ಈ ಸಮಯದಲ್ಲಿ ಭಾರತ ಸರ್ಕಾರಕ್ಕೆ ಪಾಕಿಸ್ತಾನದ ಮೇಲೆ ಯುದ್ಧ ಘೋಷಿಸುವುದು ಅನಿವಾರ್ಯವಾಗಿತ್ತು. ಇದು ಮಾಣಿಕ ಷಾ ಎದುರಿಗಿದ್ದ ಸವಾಲು, ವಸ್ತು ಸ್ಥಿತಿ.
ಏಪ್ರಿಲ್ 1971ರಲ್ಲಿ ಪೂರ್ವ ಪಾಕಿಸ್ತಾನದಿಂದ ಲಕ್ಷಾಂತರ ನಿರಾಶ್ರಿತರು ಗಡಿ ದಾಟಿ ಭಾರತಕ್ಕೆ ಬಂದಿದ್ದರು. ಪ್ರಧಾನಿ ಇಂದಿರಾ ಆಗಲೆ ಪಾಕಿಸ್ತಾನದ ಮೇಲೆ ಯುದ್ಧ ಹೂಡಲು ಕಾತುರರಾಗಿದ್ದರು. ಆಗ ಕ್ಯಾಬಿನೆಟ್ ಸಭೆ ನಡೆದಾಗ ಇಂದಿರಾ ಇದೇ ಮಾತನ್ನು ಮುಂದಿಟ್ಟರು. ಅದನ್ನು ಯಾವುದೇ ಮುಲಾಜಿಲ್ಲದೇ ವಿರೋಧಿಸಿದವರು ಮಾಣಿಕ್ ಷಾ.
ಮಳೆಗಾಲದಲ್ಲಿ ಯುದ್ಧ ಹೂಡಬೇಕಾಗಿರುವ ಪಶ್ಚಿಮ ಪಾಕಿಸ್ತಾನದಲ್ಲಿ ಪ್ರವಾಹ ಹೆಚ್ಚಿರುತ್ತದೆ, ಅಲ್ಲದೆ ಸೈನ್ಯದ ಎರಡು ಕಾಲಾಳು ಪಡೆಗಳು ಬೇರೆ ಕಡೆ ಕಾರ್ಯ ನಿರತವಾಗಿದ್ದವು. ಸೈನ್ಯದ 189 ಟ್ಯಾಂಕ್‌ಗಳ ಪೈಕಿ 11 ಮಾತ್ರ ಯುದ್ಧಕ್ಕೆ ಸಿದ್ಧವಿದ್ದವು. ಮಾಣಿಕ್ ಈ ವಾಸ್ತವಗಳನ್ನು ಪ್ರಧಾನಿಗೆ ವಿವರಿಸಿ, ಹಾಗೆಂದು ಯುದ್ಧ ಬೇಡವೆಂದಲ್ಲ, ಕಾದು ಅದೇ ವರ್ಷದ ಕೊನೆಗೆ ಯುದ್ಧ ಮಾಡಲು ಪ್ರಧಾನಿ ಆದೇಶ ನೀಡಿದರೆ ಭಾರತಕ್ಕೆ ಗೆಲುವು ಖಂಡಿತ ಎಂದು ಭರವಸೆ ನೀಡಿದರು.
ಇನ್ನು ಯುದ್ಧ ಶುರುವಾಗಲು ಆರೆಂಟು ತಿಂಗಳಿರುವಾಗಲೇ ಭವಿಷ್ಯದ ಫಲಿತಾಂಶ ಭಾರತದ ಪರವಿರುತ್ತದೆ ಎಂದು ನುಡಿದು, ಅಂತೆಯೇ ಅದನ್ನು ಸಾಧಿಸಿ ತೋರಿಸಿದ ವೀರ ನಾಯಕ ಮಾಣಿಕ್ ಷಾ. ಈ ಸಂದರ್ಭದಲ್ಲಿ ಮಾತಿನ ಚಕಮಕಿಯಲ್ಲಿ ಷಾ ಹೇಳಿದ ಒಂದು ಮಾತು: ‘ಸೇವೆಯಿಂದ ವಜಾ ಆಗುವುದು ಮತ್ತು ಫೀಲ್ಡ್ ಮಾರ್ಷಲ್ ಎನಿಸಿಕೊಳ್ಳುವುದರ ನಡುವೆ ಗೆರೆ ಬಲು ತೆಳು’.
ಮಾಣಿಕ್ ಷಾ ನಡೆಸಿದ ಮಿಂಚಿನ ದಾಳಿಗೆ ಢಾಕಾ ವಶವಾಗಿ, ಪಾಕಿಸ್ತಾನದ 93,000 ಸೈನಿಕರು ಯುದ್ಧ ಕೈದಿಗಳಾಗಿ ವಶವಾದರು.ಅಮೆರಿಕಾ ಮತ್ತು ವಿಶ್ವಸಂಸ್ಥೆಯ ತೀವ್ರ ಮಧ್ಯಪ್ರವೇಶದಿಂದಷ್ಟೆ ಭಾರತ ಕದನ ವಿರಾಮ ಘೋಷಿಸಿತು.
ನೂತನ ಬಾಂಗ್ಲಾ ದೇಶದ ರಾಜಧಾನಿ ಢಾಕಾಗೆ ಹೋಗಿ ಪಾಕ್ ಸೈನಿಕರ ಶರಣಾಗತಿಯನ್ನು ಸ್ವೀಕರಿಸಲು ಮಾಣಿಕ್ ಷಾಗೆ ಭಾರತದ ಸರ್ಕಾರ ಸೂಚಿಸಿತು. ಆದರೆ ಈ ಗೌರವ ಪೂರ್ವ ವಲಯದ ಸೇನಾ ಮುಖ್ಯಸ್ಥರಿಗೆ ಸಲ್ಲಬೇಕು ಎಂದು ನಿರಾಕರಿಸಿದ ಪ್ರಾಮಾಣಿಕ ಮಾಣಿಕ ಷಾ.
1971ರಲ್ಲಿ ಪಶ್ಚಿಮ ಪಾಕಿಸ್ತಾನದ ಮುಕ್ತಿ, ಭಾರತ –ಪಾಕ್ ಸಮರ ಮತ್ತು ಬಾಂಗ್ಲಾ ಉದಯ ಈ ಮೂರು ಮುಖ್ಯ ಘಟನೆಗಳ ಹಿಂದೆ ಮಾಣಿಕ್ ಷಾ ಅವರ ಪ್ರಚಂಡ ಚಾಣಕ್ಯ ತಲೆ ಕೆಲಸ ಮಾಡಿತ್ತು. ಈ ಯುದ್ಧವನ್ನು ಪ್ರಪಂಚದ ಅತಿ ಕ್ಷಿಪ್ರ ಸಮರ ಎಂದು ಪರಿಣತರು ಪರಿಗಣಿಸಿದ್ದಾರೆ. ಈ ಗೆಲುವಿನಿಂದ ಇಂದಿರಾ ಗಾಂಧಿ ವರ್ಚಸ್ಸು ಹೆಚ್ಚಿದ್ದು ಈಗ ಇತಿಹಾಸ.
ಸ್ವಾತಂತ್ರ್ಯ ಪೂರ್ವ ಭಾರತದ ಅಮೃತಸರದಲ್ಲಿ ಪಾರ್ಸಿ ಕುಟುಂಬದಲ್ಲಿ ಏಪ್ರಿಲ್ 3, 1914ರಲ್ಲಿ ಜನಿಸಿದವರು ಮಾಣಿಕ್. ಅವರ ತಂದೆ ಹೊರ್ಮುಸ್ಜಿ ಮಣಿಕ್ ಷಾ ವೃತ್ತಿಯಲ್ಲಿ ವೈದ್ಯರು. ತಾಯಿ ಹೀರಾಬಾಯಿ. ಗುಜರಾತಿನಿಂದ ಪಂಜಾಬಿಗೆ ವಲಸೆ ಬಂದ ಕುಟುಂಬ ಇದು. ಬಾಲ್ಯದಿಂದಲೂ ಯಾರಿಗೂ ಮಣಿಯದ ತನ್ನದೇ ಸರಿ ಎಂಬ ಧೋರಣೆ ಇವರಿಗಿತ್ತು. ನೈನಿತಾಲಿನ ಶೆರ್‌ವುಡ್ ಕಾಲೇಜಿನಲ್ಲಿ ಓದಿದ ಮೇಲೆ ಮೆಡಿಸಿನ್ ಓದಲೆಂದು ತನ್ನನ್ನು ಲಂಡನ್‌ಗೆ ಕಳುಹಿಸು ಎಂದು ತಂದೆಯನ್ನು ಮಾಣಿಕ್ ಕೇಳಿದರು. ತಂದೆ ಮಗ ಕೋರಿಕೆಗೆ ಒಪ್ಪಲಿಲ್ಲ. ಸರಿ ಈ ವೀರಪುತ್ರ ಮನೆಯಲ್ಲಿ ಯಾರಿಗೂ ಹೇಳದೆ ಇಂಡಿಯನ್ ಮಿಲಿಟರಿ ಆರ್ಮಿಗೆ ಸೇರಲು ಇದ್ದಂಥ ಪರೀಕ್ಷೆಗೆ ಬರೆದು ಅದರಲ್ಲಿ ಪಾಸಾದರು. ತಂದೆ ಏನಾದರೂ ಕೂಡಲೆ ಒಪ್ಪಿದ್ದರೆ ದೇಶ ಒಬ್ಬ ಫೀಲ್ಡ್ ಮಾರ್ಷಲ್‌ನನ್ನು ಕಳೆದುಕೊಳ್ಳುತ್ತಿತ್ತು!
1932ರಲ್ಲಿ ಮಾಣಿಕ್ ಷಾ ಸೈನ್ಯ ಸೇರಿದರು. ಆಗ ಎರಡನೇ ಮಹಾಯುದ್ಧಕ್ಕೆ ಇನ್ನೂ ಕಾಲದ ಕುದಿ ಬಂದಿರಲಿಲ್ಲ.
ಆಗ ಭಾರತದಲ್ಲಿದ್ದ ಸೈನ್ಯ ಬ್ರಿಟಿಷ್ ಇಂಡಿಯನ್ ಆರ್ಮಿಯಾಗಿತ್ತು. ಅದರಲ್ಲಿ ದುಡಿದು ಮುಂದೆ ಭಾರತ ಸ್ವತಂತ್ರವಾದಾಗ ದೊಡ್ಡ ಹುದ್ದೆಗಳನ್ನು ನಿಭಾಯಿಸಿದವರು ಹಲವರಿದ್ದಾರೆ. ಉದಾಹರಣೆಗೆ ಕನ್ನಡಿಗರೇ ಆದ ಜನರಲ್ ತಿಮ್ಮಯ್ಯ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ. ಈ ಪಂಕ್ತಿ ಪಾವನರ ಸಾಲಿಗೆ ಸೇರಿದವರು ಮಾಣಿಕ್ ಷಾ. ಎರಡು ವರ್ಷಗಳ ನಂತರ ವಿವಿಧ ಕಠಿಣ ಪರೀಕ್ಷೆಗಳಲ್ಲಿ ತೇರ್ಗಡೆಯಾದ ಮೇಲೆ ಮಾಣಿಕ್, ಸೆಕಂಡ್ ಲೆಫ್ಟಿನೆಂಟ್ ಎನಿಸಿಕೊಂಡರು.
ಗೆದ್ದವರು ಚರಿತ್ರೆ ಬರೆಯುವರು ಎಂಬ ಮಾತಿದೆ. ಅಂತೆಯೇ ಗೆದ್ದ ದೇಶದ ದಂಡನಾಯಕರು ಕೂಡ ಚರಿತ್ರೆಯಲ್ಲಿ ಪ್ರಮುಖ ಪಾತ್ರ ವಹಿಸುವರು.
ಬ್ರಿಟಿಷ್ ಆಡಳಿತಯುಗದಲ್ಲಿ ಅವರು ಬ್ರಿಟಿಷ್ ಬೆಟಾಲಿಯನ್ ಆದ ರಾಯಲ್ ಸ್ಕಾಟ್ಸ್ ಮತ್ತು ನಾಕನೇ ಬೆಟಾಲಿಯನ್, 12ನೇ ಫ್ರಾಂಟಿಯರ್ ಫೋರ್ಸ್ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸಿದರು.
ಎರಡನೇ ಮಹಾಯುದ್ಧದಲ್ಲಿ ಬರ್ಮಾ ಯುದ್ಧದಲ್ಲಿ ಮಾಣಿಕ್ ಷಾ ಜಪಾನಿ ಸೈನ್ಯದ ಎದುರು ಹೋರಾಡಿ ಪಾಗೋಡಾ ಬೆಟ್ಟವನ್ನು ವಶಪಡಿಸಿಕೊಂಡ ಮೇಲೆ ಅವರ ಮೇಲೆ ಜಪಾನಿ ಸೈನಿಕರು ಗುಂಡಿನ ಮಳೆ ಗರೆದರು. ಅವರ ಎದೆ,ಹೊಟ್ಟೆ, ಯಕೃತ್ತಿಗೆ ಎಲ್‌ಎಂಜಿ ಗುಂಡುಗಳು ತಾಗಿದ್ದವು. ಅವರು ಬದುಕುವುದಿಲ್ಲ, ಆದರೆ ಅವರ ಸೇವೆ ಮರೆತು ಹೋಗಬಾರದು ಎಂದು ಮೇಜರ್ ಜನರಲ್ ಡಿ.ಟಿ.ಕೋವನ್ ತಮ್ಮ ಸ್ವಂತದ ‘ಮಿಲಿಟರಿ ರಿಬ್ಬನ್’ಅನ್ನು ಮಾಣಿಕ್ ಅವರ ತೋಳಿಗೆ ಬಿಗಿದು ಗೌರವ ಸೂಚಿಸಿದ್ದರು.ಒಬ್ಬ ಯೋಧನ ಪಾಲಿಗೆ ಇದು ದೊಡ್ಡ ಗೌರವ.
ಸ್ವಾತಂತ್ರ್ಯದ ನಂತರದ ಭಾರತ –ಪಾಕ್ ಸಮರ, ನಿರಾಶ್ರಿತರಿಗೆ ಆಸರೆ ನೀಡುವುದು ಮೊದಲಾದ ಸವಾಲಿನ ಸಂದರ್ಭಗಳಲ್ಲಿ ಅವರು ಗುರುತರ ಕೆಲಸ ಮಾಡಿದರು. ನಾಗಾಲ್ಯಾಂಡ್‌ನಲ್ಲಿ ಅಕ್ರಮ ಒಳನುಸುಳುಕೋರರನ್ನು ಇವರು ಎದುರಿಸಿದ ಸಂದರ್ಭದಲ್ಲಿ ಭಾರತ ಸರ್ಕಾರ ಮಾಣಿಕ್ ಷಾ ಅವರಿಗೆ 1968ರಲ್ಲಿ ಪದ್ಮ ಭೂಷಣ ನೀಡಿ ಗೌರವಿಸಿತು. ಅವರಿಗೆ ಪದ್ಮ ವಿಭೂಷಣ ಕೂಡ ಬಯಸದೆ ಬಂತು. ಅವರು ಜೀವನದಲ್ಲಿ ಪಡೆದ ದೊಡ್ದ ಗೌರವ 1973ರಲ್ಲಿ ಫೀಲ್ಡ್ ಮಾರ್ಷಲ್ ಗೌರವ.
ಪ್ರಧಾನ ಮಹಾದಂಡನಾಯಕರೆನಿಸಿದ ಅಪರೂಪದ ಯೋಧ ಮಾಣಿಕ್ ಜೀವನ ಕೂಡ ವಿವಾದಾತೀತವಾಗಿರಲಿಲ್ಲ. ಅವರು ಭಾರತದ ಸೈನಿಕ ರಹಸ್ಯಗಳನ್ನು ಪಾಕಿಸ್ತಾನಕ್ಕೆ ಹಣಕ್ಕೆ ಮಾರಿದ್ದರು ಎಂದು ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಆಗಿದ್ದ ಅಯೂಬ್ ಖಾನ್ ಅವರ ಮಗ ಗೊಹರ್ ಅಯೂಬ್ ಆರೋಪ ಮಾಡಿದ್ದರು, ಆದರೆ ಭಾರತದ ರಕ್ಷಣಾ ಇಲಾಖೆ ಅದನ್ನು ನಿರಾಕರಿಸಿದ್ದು ಸರಿಯಾಗೇ ಇತ್ತು. ಅವರು ತಮ್ಮ ಪ್ರಾಣವನ್ನು ಮಾರಿಕೊಂಡಿದ್ದು ಧ್ಯೇಯಕ್ಕೆ ಮಾತ್ರ.
ಬೇಸರದ ಸಂಗತಿ ಎಂದರೆ ಸ್ವಾತಂತ್ರ್ಯಾ ನಂತರದ ಎಲ್ಲ ಪ್ರಮುಖ ಸಮರಗಳ ಮುಂಚೂಣಿಯಲ್ಲಿದ್ದು 94 ವರ್ಷ ಬದುಕಿ ಮೃತರಾದ ಮಾಣಿಕ್ ಅವರ ಅಂತ್ಯ ಕ್ರಿಯೆಯಲ್ಲಿ ಭಾರತದ ರಾಷ್ಟ್ರಪತಿ, ಪ್ರಧಾನಿ, ಗೃಹಮಂತ್ರಿ ಯಾರೂ ಭಾಗವಹಿಸಲಿಲ್ಲ. ಸಾಂವಿಧಾನಿಕ ಹುದ್ದೆಯಲ್ಲಿದ್ದು ಭ್ರಷ್ಟ ರೆಂಬ ಆಪಾದನೆಗೆ ಒಳಗಾದ ರಾಜಕಾರಣಿಗಳು ನಿಧನರಾದಾಗ ಕೆಳಕ್ಕಿಳಿಯುವ ರಾಷ್ಟ್ರ ಧ್ವಜ ಅಂದು ಮಾತ್ರ ಅರ್ಧ ಮಟ್ಟದಲ್ಲಿ ಹಾರಾಡಲಿಲ್ಲ. ಮೇರಾ ಭಾರತ್ ಮಹಾನ್! ಸಾಮಾನ್ಯ ಜನರ ಮನಸ್ಸಿನಲ್ಲಿ ಇಂದಿಗೂ ಅವರ ಬಗ್ಗೆ ಗೌರವವಿದೆ. ಅವರು ಜನ್ಮ ಶತಾಬ್ಧಿಯ ವೇಳೆಯಲ್ಲಾದರೂ ಫೀಲ್ಡ್ ಮಾರ್ಷಲ್‌್ ಮಾಣಿಕ್ ಷಾ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಿ ಸರ್ಕಾರ ತನ್ನನ್ನು ತಾನು ಗೌರವಿಸಿಕೊಳ್ಳಬೇಕು.
ಅರುಣ್ ಶೌರಿ
ಲೇಖಕ, ಪತ್ರಿಕೋದ್ಯಮಿ ಮತ್ತು ಕೇಂದ್ರ ಸಚಿವರಾಗಿ ಕಾರ್ಯ ಮಾಡಿದ ಅಪರೂಪದ ಸಂಸದ ಅರುಣ್ ಶೌರಿ. 1941ರಲ್ಲಿ ಪಂಜಾಬಿನ ಜಲಂಧರ್ ನಲ್ಲಿ ಜನಿಸಿದ ಇವರು ಬಾರಖಂಬ, ಸೈಂಟ್ ಸ್ಟೀಫನ್ಸ್ ಹೈಸ್ಕೂಲ್‌ಗಳಲ್ಲಿ ಅಧ್ಯಯನ ಮಾಡಿ, ಅಮೆರಿಕಾದ ಮ್ಯಾಕಸ್ವೆಲ್ ಸ್ಕೂಲ್ ಆಫ್ ಇಕನಾಮಿಕ್ಸ್‌ನಿಂದ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದರು. ಇವರ ತಂದೆ ಹರಿದೇವ್ ಶೌರಿ ಮತ್ತು ಸ್ವತಃ ಅರುಣ್ ಶೌರಿಯವರು ಲೆಕ್ಕವಿರದಷ್ಟು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು ಹಾಕಿ ಹೋರಾಟ ನಡೆಸಿದ್ದಾರೆ. ವಿಶ್ವಸಂಸ್ಥೆಯಲ್ಲಿ ಅರ್ಥಶಾಸ್ತ್ರಜ್ಙರಾಗಿ ಹಲವು ವರ್ಷ ಕೆಲಸ ಮಾಡಿದ ಇವರು ಯೋಜನಾ ಆಯೋಗದ ಸಲಹೆಗಾರರಾಗಿದ್ದರು.
ಬಿಜೆಪಿಯನ್ನು ಪ್ರತಿನಿಧಿಸಿ 1998ರಲ್ಲಿ ಶೌರಿ ರಾಜ್ಯಸಭಾ ಸದಸ್ಯರಾಗಿದ್ದರು. ತಮ್ಮ ನೇರ ಮೊನಚು ಬರಹಗಳಿಗೆ ಪ್ರಸಿದ್ಧರಾದ ಇವರು ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಡಿಸ್ ಇನ್ವೆಸ್ಟ್‌ಮೆಂಟ್ ಖಾತೆ ಸಚಿವರಾಗಿದ್ದರು.ಇಂಡಿಯನ್ ಎಕ್ಸ್‌ಪ್ರೆಸ್, ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗಳ ಸಂಪಾದಕರಾಗಿ ಉತ್ತಮ ಪತ್ರಕರ್ತರೆನಿಸಿಕೊಂಡರು. ರಾಜೀವ್ ಗಾಂಧಿಯವರು ಪ್ರಧಾನಿಯಾಗಿದ್ದ ಕಾಲದ ಬೋಫರ್ಸ್ ಹಗರಣ ಮತ್ತು ಮಹಾರಾಷ್ಟ್ರದ ಏ.ಆರ್.ಅಂತುಳೆ ಸರ್ಕಾರದ ಭ್ರಷ್ಟಾಚಾರ ಬಯಲಿಗೆಳೆದ ಕೀರ್ತಿ ಇವರದು. ವಿ.ಪಿ.ಸಿಂಗ್ ಅವರು ಪ್ರಧಾನಿಯಾಗಿದ್ದಾಗಿನ ಮಂಡಲ್ ಕಮಿಷನ್ ವರದಿಯನ್ನು ಶೌರಿ ಬಹಿರಂಗವಾಗಿ ವಿರೋಧಿಸಿದರು.
ಪದ್ಮಭೂಷಣ, ಮ್ಯಾಗ್ಸೆಸ್ಸೆ ಸನ್ಮಾನಗಳನ್ನು ಪಡೆದಿರುವ ಶೌರಿ ವೈಚಾರಿಕವಾಗಿ ಹಿಂದುತ್ವದ ಪ್ರಬಲ ಪ್ರತಿಪಾದಕರಾಗಿ ಹಲವು ಗ್ರಂಥಗಳನ್ನು ರಚಿಸಿದ್ದಾರೆ. ಇವರ ಕೆಲವು ಕೃತಿಗಳು: The Parliamentary System,Courts and their Judgements:Premises, Prerequisites, Consequences
Eminent Historians: Their Technology, Their Line, Their Fraud,Falling Over Backwards: An essay against Reservations and against Judicial populism,Worshiping False God.
ಸ್ವತಃ ಹಿಂದುತ್ವ ಪ್ರತಿಪಾದಿಸಿದರೂ ವಿವಿಧ ಧರ್ಮಗಳ ನೇರ ಅನುಸಂಧಾನ ಮಾಡಲು ಯತ್ನಿಸಿದ ಅರುಣ್ ಶೌರಿ, ಇತ್ತೀಚಿನ ವರ್ಷಗಳಲ್ಲಿ ಬೌದ್ಧ ಗುರು ದಲೈ ಲಾಮಾ ಪ್ರಭಾವಕ್ಕೆ ಒಳಗಾಗಿ, ಸಕ್ರಿಯ ರಾಜಕೀಯದಿಂದ ಹಿಂದೆ ಸರಿದಿರುತ್ತಾರೆ.
ಬುದ್ಧಿ–ಸೌಂದರ್ಯದ ಸಂಗಮ ತಾರಕೇಶ್ವರಿ ಸಿನ್ಹಾ
ಕೇವಲ 26 ವಯಸ್ಸಿನಲ್ಲಿ 1952ರ ಬಿಹಾರದ ಬರ್ಹದಿಂದ ಮೊದಲ ಲೋಕಸಭೆಗೆ ಪ್ರವೇಶ ಪಡೆದು ಹಲವರು ಮೂಗಿನ ಮೇಲೆ ಕೈ ಇಟ್ಟುಕೊಳ್ಳುವಂತೆ ಮಾಡಿದವರು. 1942ರ ಚಲೇಜಾವ್ ಚಳವಳಿಗೆ
ಬಿಹಾರದಿಂದ ಪ್ರವೇಶಿಸಿದ ಸಿನ್ಹಾ, ಮದುವೆಯಾಗಿ ಕೊಲಕತಾಗೆ ಹೋದರು. ಆದರೆ ಐಎನ್‌ಎ ಸೈನ್ಯದ ವಿಚಾರಣೆಯು ಇವರಲ್ಲಿ ಕುತೂಹಲ ಕೆರಳಿಸಿ ಮತ್ತೆ ರಾಜಕೀಯದತ್ತ ಮುಖ ಮಾಡಿದರು. ದೇಶ ವಿಭಜನೆಯ ಬಳಿಕ ಮಹಾತ್ಮ ಗಾಂಧಿ ಅವರು ನಳಂದ ಜಿಲ್ಲೆಗೆ ಬಂದಾಗ ಅವರನ್ನು ಸ್ವಾಗತಿಸಿದವರ ತಂಡದಲ್ಲಿ ಸಿನ್ಹಾ ಇದ್ದರು.
ಅಲ್ಲಿಂದ ಮುಂದೆ ಕೆಲವೇ ತಿಂಗಳಿನಲ್ಲಿ ಅರ್ಥಶಾಸ್ತ್ರದಲ್ಲಿ ಉನ್ನತ ಅಧ್ಯಯನಕ್ಕೆ ಇಂಗ್ಲೆಂಡಿಗೆ ತೆರಳಿದ ಆವರು ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್‌ನಲ್ಲಿ ಸ್ವಲ್ಪ ಸಮಯ ಅಧ್ಯಯನ ಮಾಡಿದರು.
ಅವರ ವಾದಕೌಶಲಕ್ಕೆ ಹೆಸರಾಗಿದ್ದ ಅವರು ತಮ್ಮ ಭಾಷಣಗಳಿಂದ ಸಂಸತ್ತಿನಲ್ಲಿ ಎಲ್ಲರ ಗಮನ ಸೆಳೆದರು. ಮುಂದೆ 1958ರಲ್ಲಿ ಅವರು ನೆಹರೂ ಸಂಪುಟದಲ್ಲಿ ಮೊರಾರ್ಜಿ ದೇಸಾಯಿ ಹಣಕಾಸು ಸಚಿವರಾಗಿದ್ದಾಗ ಮೊದಲ ಮಹಿಳಾ ಉಪಹಣಕಾಸು ಸಚಿವೆಯಾದರು.
1969ರಲ್ಲಿ ಕಾಂಗ್ರೆಸ್ ಇಬ್ಭಾಗವಾದಾಗ ರಾಜಕೀಯ ಜೇವನದ ಉತ್ತುಂಗದಲ್ಲಿದ್ದ ಸಿನ್ಹಾ ಮೊರಾರ್ಜಿ ಗುಂಪಿನ ಜತೆ ಹೋದರು ಮತ್ತು ಈ ನಿರ್ಧಾರ ಅವರ ರಾಜಕೀಯ ಜೀವನವನ್ನು ಮೊಟಕುಗೊಳಿಸಿತು.ಸತತ ವಾಗಿ ನಾಲ್ಕು ಸಲ 1952,1957, 1962, 1967ರಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದರು.
ಮುಂದೆ ಕೂಡ ಚುನಾವಣೆಗೆ ನಿಂತ ಆಕೆ ಮತ್ತೆ ಮತ್ತೆ ಸೋಲನ್ನು ಅನುಭವಿಸಬೇಕಾಯಿತು.ಅವರ ಮತ್ತು ಇಂದಿರಾ ಗಾಂಧಿಯವರ ಸಂಬಂಧ ಹಿತವಾಗಿರದಿರುವುದೂ ಆಕೆ ಇಂದಿರಾ ಬಣದಿಂದ ದೂರ ಸರಿಯಲು ಕಾರಣವಾಗಿತ್ತು.
ಪ್ರಸಿದ್ಧ ಹಿಂದಿ ಸಿನಿಮಾ ‘ಆಂಧಿ’ ಇಂದಿರಾ ಗಾಂಧಿ ಮತ್ತು ಭಾಗಶಃ ಸಿನ್ಹಾ ಅವರ ಬದುಕನ್ನು ಆಧರಿಸಿದ ಚಲನಚಿತ್ರ ಎಂಬುದನ್ನು ಚಿತ್ರರಂಗದ ಹಿರಿಯರು ಹೇಳಿದ್ದಾರೆ.
ಇಂದಿರಾ ಗಾಂಧಿ ಬಲಶಾಲಿಯಾಗಿದ್ದಾಗ ಮೊರಾರ್ಜಿ ಮತ್ತು ಕೆ.ಕಾಮರಾಜ್ ಬಣ ಸೇರಿದ ಇವರು ರಾಜಕೀಯದಲ್ಲಿ ಮತ್ತೆ ಮೇಲೇರಲಿಲ್ಲ.
2007ರಲ್ಲಿ ತಮ್ಮ 81ನೇ ವಯಸ್ಸಿನಲ್ಲಿ ಅವರು ತೀರಿಕೊಂಡಾಗ ಸರಿಯಾದ ಸುದ್ದಿ ಪತ್ರಿಕೆಗಳಲ್ಲಿ ಕೂಡ ಪ್ರಸಾರವಾಗಲಿಲ್ಲ.
ಜಾರ್ಜ್ ಫರ್ನಾಂಡಿಸ್
ಕರ್ನಾಟಕದ ಮಂಗಳೂರಿನಲ್ಲಿ 1930ರಲ್ಲಿ ರೋಮನ್ ಕೆಥೋಲಿಕ್ ಕುಟುಂಬದಲ್ಲಿ ಜಾರ್ಜ್ ಫರ್ನಾಂಡೀಸ್ ಜನಿಸಿದರು. ಇವರು ಕಾರ್ಮಿಕ ಸಂಘಟನೆಯ ನೇತಾರ, ಕೃಷಿಕ, ಸಾಮಾಜಿಕ ಕಾರ್ಯಕರ್ತ ಮತ್ತು ಪತ್ರಕರ್ತರಾಗಿದ್ದ ಅಪರೂಪದ ಸಂಸದ. ಅವರ ತಾಯಿ ಐದನೇ ಜಾರ್ಜ್ ಅಭಿಮಾನಿಯಾದ್ದರಿಂದ ಜಾರ್ಜ್ ಜನಿಸಿದಾಗ ಅವರಿಗೆ ಅದೇ ಹೆಸರನ್ನು ಇಟ್ಟರು. ಮಂಗಳೂರಿನಲ್ಲಿ ಮೊದಲ ಹಂತದ ಶಿಕ್ಷಣ ಮುಗಿಸಿದ ಇವರನ್ನು ಕುಟುಂಬದವರು ಬೆಂಗಳೂರಿಗೆ ಧಾರ್ಮಿಕ ಶಿಕ್ಷಣಕ್ಕೆ ಕಳುಹಿಸಿದರೂ ಜಾರ್ಜ್ ಅವರಿಗೆ ಅದರಲ್ಲಿ ಆಸಕ್ತಿ ಬರಲಿಲ್ಲ.
ಅವರು ಕಾರ್ಮಿಕ ಪರ ಹೋರಾಟಗಳಲ್ಲಿ ಭಾಗವಹಿಸಿದರು, ಡಾ.ಲೋಹಿಯಾ ಅವರ ಪ್ರಭಾವಕ್ಕೆ ಒಳಗಾಗಿ ಸಮಾಜವಾದಿಯಾದರು.
ಉದ್ಯೋಗ ಹುಡುಕಿಕೊಂಡು ಮುಂಬೈಗೆ ಬಂದ ಅವರು ಅನೇಕ ಹೋರಾಟಗಳಲ್ಲಿ ಭಾಗವಹಿಸಿದರು. ಸಂಯುಕ್ತ ಸಮಾಜವಾದಿ ಪಕ್ಷದಿಂದ ಲೋಕಸಭೆಗೆ ಸ್ಪರ್ಧಿಸಿ ಕಾಂಗ್ರೆಸ್‌ನ ಎಸ್.ಕೆ.ಪಾಟೀಲ್ ಅವರನ್ನು ಸೋಲಿಸಿ ‘ಜಯಂಟ್ ಕಿಲ್ಲರ್’ ಎಂದು ಪ್ರಸಿದ್ಧರಾದರು. ೧೯೬೯ರಲ್ಲಿ ಇವರು ಸಂಯುಕ್ತ ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾದರು.
ಜನತಾ ದಳದ ಹಿರಿಯ ಸದಸ್ಯರಾಗಿದ್ದ ಅವರು ಮುಂದೆ ಸಮತಾ ಪಕ್ಷ ಸ್ಥಾಪಿಸಿದರು. ಅಖಿಲ ಭಾರತ ರೈಲ್ವೆ ಫೆಡರೇಷನ್‌ನ ಮುಖಂಡರಾಗಿ ೧೯೭೪ರಲ್ಲಿ ಅವರು ಸಂಘಟಿಸಿದ ಮುಷ್ಕರ ತೀವ್ರತರವಾಗಿದ್ದು ಇಂದಿರಾ ಗಾಂಧಿ ಅವರ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿತು, ಈ ಹಿನ್ನೆಲೆಯಲ್ಲಿ ಇಂದಿರಾ ಅವರು ದೇಶದಲ್ಲಿ ಆಂತರಿಕ ತುರ್ತು ಪರಿಸ್ಥಿತಿ ಘೋಷಿಸಿ ಇವರನ್ನು ಬಂಧಿಸಿತು. ೧೯೭೭ರಲ್ಲಿ ನಡೆದ ಮಹಾಚುನಾವಣೆಯಲ್ಲಿ ಜಾರ್ಜ್ ಅವರು ಬಿಹಾರದ ಮುಜಫರ್‌ನಗರದಿಂದ ಸ್ಪರ್ಧಿಸಿ ೩ ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿ ಕೇಂದ್ರ ಗೃಹಮಂತ್ರಿಯಾದರು. ವಿ.ಪಿ.ಸಿಂಗ್ ಅವರ ಸರ್ಕಾರದಲ್ಲಿ ರೈಲ್ವೆ ಮಂತ್ರಿಯಾಗಿದ್ದ ಇವರು ಕೊಂಕಣ ರೈಲ್ವೆ ಯೋಜನೆಗೆ ಜೀವ ಕೊಟ್ಟರು. ಎನ್‌ಡಿಎ ಸರ್ಕಾರದ ಅವಧಿಯಲ್ಲಿ ರಕ್ಷಣಾ ಮಂತ್ರಿಯಾಗಿದ್ದರು. ಪ್ರಖರ ಭಾಷಣಗಳಿಗೆ ಹೆಸರಾಗಿರುವ ಇವರನ್ನು ಬುದ್ಧಿ ಜೀವಿ ಮತ್ತು ರಾಜಕಾರಣಿಯ ಸಂಗಮ ಎನ್ನಬಹುದು.
ಮಾದರಿ ಸಂಸದ ಡಾ.ಲೋಹಿಯಾ
ಸಮಾಜವಾದಿ ಮುಖಂಡ, ಹಿರಿಯ ಚಿಂತಕ ಡಾ.ರಾಮ ಮನೋಹರ ಲೋಹಿಯಾ ಸೈದ್ಧಾಂತಿಕ ರಾಜಕಾರಣದಲ್ಲಿ ವಿಶ್ವಾಸವಿಟ್ಟವರು. ಅವರು ಜೀವನದುದ್ದಕ್ಕೂ ಪಂ.ನೆಹರು ನೇತೃತ್ವದ ಕಾಂಗ್ರೆಸ್ ಆಡಳಿತದ ವಿರುದ್ಧ ದನಿ ಎತ್ತಿದರು. 1962 ರ ಮಹಾಚುನಾವಣೆಯಲ್ಲಿ ಡಾ. ಲೋಹಿಯಾ ಪಂ.ನೆಹರುಗೆ ಎದುರಾಳಿಯಾಗಿ ಸ್ಪರ್ಧಿಸಿದರು.ಮೊದ ಮೊದಲು ಇವರನ್ನು ಹಗುರವಾಗಿ ಪರಿಗಣಿಸಿದ ನೆಹರು, ತಾವು ಮತ ಯಾಚನೆಗೆ, ಚುನಾವಣಾ ಪ್ರಚಾರಕ್ಕೆ ಕ್ಷೇತ್ರಕ್ಕೆ ಹೋಗುವುದಿಲ್ಲ ಎಂದಿದ್ದರು. ಆದರೆ ಚುನಾವಣಾ ರಂಗು ಏರಿದಂತೆ ಲೋಹಿಯಾ ಪರ ಅಲೆ ಏಳುತ್ತಿರುವುದನ್ನು ಗುರುತಿಸಿದ ನೆಹರು ಪುಲ್ಪುರ ಕ್ಷೇತ್ರಕ್ಕೆ ಧಾವಿಸಬೇಕಾಯಿತು! ಇದು ಲೋಹಿಯಾ ಪ್ರಭಾವ. ಈ ಚುನಾವಣೆಯಲ್ಲಿ ಕೊನೆಗೂ ಗೆದ್ದಿದ್ದು ನೆಹರೂ ಅವರೆ. ಆದರೆ ಸ್ವಾರಸ್ಯವೆಂದರೆ 43 ಮತ ಎಣಿಕೆ ಕೇಂದ್ರಗಳಲ್ಲಿ ಡಾ.ಲೋಹಿಯಾ ಅವರು ನೆಹರು ಅವರಿಗಿಂತ ಮುಂದಿದ್ದರು. ತಮ್ಮ ಸೋಲನ್ನು ಕುರಿತು ಲೋಹಿಯಾ ಪ್ರತಿಕ್ರಿಯೆ ಮಜವಾಗಿದೆ : ‘ನನಗೆ ಬಂಡೆಯನ್ನು ಚೂರುಚೂರು ಮಾಡಲು ಆಗದಿದ್ದರೂ ಬಿರುಕನ್ನಂತೂ ಉಂಟುಮಾಡಿದೆ.’ ಇಲ್ಲಿ ಆ ಬಂಡೆಯೆಂದರೆ ಪಂ.ನೆಹರು.
ಇದೇ ಲೋಹಿಯಾ, 1963ರಲ್ಲಿ ನಡೆದ ಲೋಕಸಭಾ ಉಪಚುನಾವಣೆಗೆ ಫರೂಕಾಬಾದ್ ನಿಂದ ಸ್ಪರ್ಧಿಸಿ ಆಯ್ಕೆಯಾದರು.ಲೋಕಸಭೆ ಪ್ರವೇಶಿಸಿದ ಕೂಡಲೆ ತಲಾ ಆದಾಯ ಕುರಿತು ಚರ್ಚೆ ಆರಂಭಿಸಿದರು.ಇದು ‘ಮೂರು ಆಣೆ --–ಹದಿನೈದು ಆಣೆ’ ಎಂದೇ ಪ್ರಸಿದ್ಧವಾಯಿತು.ಅವರು ಲೋಕಸಭೆಯಲ್ಲಿ ಆಡುತ್ತಿದ್ದ ಮಾತುಗಳು ತುಂಬ ಜವಾಬ್ದಾರಿಯಿಂದ ಮತ್ತು ಅಷ್ಟೇ ಸ್ವಾರಸ್ಯಕರವಾಗಿರುತ್ತಿತ್ತು.1965ರಲ್ಲಿ ನಡೆದ ಭಾರತ–ಪಾಕಿಸ್ತಾನ ಯುದ್ಧದ ಸಮಯದಲ್ಲಿ ಅವರು ಹೇಳಿದ ಮಾತು ಇಂದಿಗೂ ರೋಮಾಚನ ಉಂಟುಮಾದುವಂಥದ್ದು.‘ಭಾರತೀಯರು ಪಾಕಿಸ್ತಾನದ ವಿರುದ್ಧ ಬಂಡೆಯಂತೆ ನಿಲ್ಲಬೇಕು ಮತ್ತು ಭಾರತದ ಮುಸ್ಲಿಮರನ್ನು ಕೋಮಲವಾದ ಹೂವಿನಂತೆ ಕಾಪಾಡಬೇಕು.’ಈ ಅಂಶಗಳನ್ನು ಡಾ.ಲೋಹಿಯಾ ನಿಕಟವರ್ತಿ ಉಪೇಂದ್ರನಾಥ ವರ್ಮ ನೆನಪಿಸಿಕೊಂಡಿದ್ದು ಇದು ಲೋಕಸಭೆಯ ಸೆಕ್ರೆಟರಿಯಟ್ ಪ್ರಕಟಿಸಿರುವ ‘ಲೋಹಿಯಾ ಅಂಡ್ ಪಾರ್ಲಿಮೆಂಟ್’ ಎಂಬ ಪುಸ್ತಕದಲ್ಲಿ ದಾಖಲಾಗಿದೆ.
ಗ್ರಾಮ ವಿಕಾಸದ ನಾನಾಜಿ ದೇಶಮುಖ್
ಕೃಷಿ, ಪತ್ರಿಕೋದ್ಯಮ ಮತ್ತು ಗ್ರಾಮ ವಿಕಾಸದಲ್ಲಿ ತೊಡಗಿಸಿಕೊಂಡ ಸಂಸದ ನಾನಾಜಿ ದೇಶಮುಖ್. ಚಂಡಿಕಾರಾವ್ ಅಮೃತ್‌ರಾವ್ ದೇಶಮುಖ್ ಇವರ ನಿಜವಾದ ಹೆಸರು. ಮಹರಾಷ್ಟ್ರದ ಕಡೋಲಿಯಲ್ಲಿ 1916ರಲ್ಲಿ ಜನಿಸಿದ ನಾನಾಜಿ ಅವರು ಶಿಕ್ಷಣದ ನಂತರ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡರು.
ಲೋಕಮಾನ್ಯ ತಿಲಕರ ವಿಚಾರಗಳಿಂದ ಪ್ರಭಾವಿತರಾಗಿ ನಾನಾಜಿ ಆರ್.ಎಸ್.ಎಸ್. ವೈಚಾರಿಕತೆಯತ್ತ ಆಕರ್ಷಿತರಾದರು. ಜನಸಂಘದ ಆರಂಭದ ಕಾಲದಿಂದಲೂ ಅದರ ಜೊತೆಗಿದ್ದ ಇವರು ಆ ಪಕ್ಷದ ಕಾರ್ಯದರ್ಶಿ ಮತ್ತು ಖಜಾಂಚಿಯಾಗಿದ್ದವರು. ಸಂಶೋಧನೆಯಲ್ಲಿ ಆಸಕ್ತಿ ಇದ್ದ ಇವರು ದೆಹಲಿಯಲ್ಲಿ ದೀನದಯಾಳು ಸಂಶೋಧನ ಸಂಸ್ಥೆಯನ್ನು ಕಟ್ಟಿ ಬೆಳೆಸಿದರು. ಮದುವೆಯಾಗದೆ ಉಳಿದ ನಾನಾಜಿ ‘ರಾಷ್ಟ್ರಧರ್ಮ್’ , ‘ಪಾಂಚಜನ್ಯ’ ಮತ್ತು ‘ಸ್ವದೇಶಿ’ ಪತ್ರಿಕೆಗಳು ಆರಂಭವಾದಾಗ ವಾಜಪೇಯಿ ಅದರ ಸಂಪಾದಕರಾದರು ಮತ್ತು ನಾನಾಜಿ ಮಾರ್ಗದರ್ಶಕರಾದರು. 1967ರಲ್ಲಿ ಇವರ ಪ್ರಯತ್ನದಿಂದ ಉತ್ತರಪ್ರದೇಶದಲ್ಲಿ ಮೊದಲ ಕಾಂಗ್ರೆಸ್ಸೇತರ ಸರ್ಕಾರದ ರಚನೆಗೆ ಕಾರಣರಾದರು. ಅವರಿಗೆ ಚೌಧರಿ ಚರಣ ಸಿಂಗ್ ಮತ್ತು ಡಾ.ಲೋಹಿಯಾ ಅವರ ನಿಕಟವರ್ತಿಯಾಗಿದ್ದರು. ಅವರು ಒಮ್ಮೆ ಡಾ.ಲೋಹಿಯಾ ಅವರನ್ನು ಜನಸಂಘದ ಕಾರ್ಯಕರ್ತರ ಸಮ್ಮೇಳನಕ್ಕೆ ಆಹ್ವಾನಿಸಿದರು. ಅಲ್ಲಿ ಡಾ.ಲೋಹಿಯಾ ಮತ್ತು ಜನಸಂಘದ ಹಿರಿಯ ನಾಯಕ ದೀನದಯಾಳು ಉಪಾಧ್ಯಾಯ ಅವರನ್ನು ಭೇಟಿಮಾಡಿಸಿದರು. ಇದರಿಂದ ಕಾಂಗ್ರೆಸ್ಸೇತರ ರಾಜಕೀಯ ಶಕ್ತಿಗಳ ಹೊಂದಾಣಿಕೆಗೆ ಮುನ್ನುಡಿ ಬರೆದಂತೆ ಆಯಿತು.
ವಿನೋಬಾ ಅವರ ಭೂದಾನ ಚಳವಳಿ ಮತ್ತು ಜೆಪಿಯವರು ಕರೆಕೊಟ್ಟ ಸಂಪೂರ್ಣ ಕ್ರಾಂತಿ ಹೋರಾಟಗಳಲ್ಲಿ ಸಂಪೂರ್ಣವಾಗಿ ನಾನಾಜಿ ತಮ್ಮನ್ನು ತೊಡಗಿಸಿಕೊಂಡರು.
ಇವರು ತುರ್ತು ಪರಿಸ್ಥಿತಿ ನಂತರದ 1977ರ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದ ಬಲರಾಂಪುರಂದಿಂದ ಆಯ್ಕೆಯಾದರು. ಜನತಾ ಪಕ್ಷ ಆರಂಭವಾಗುವಾಗ ನಾನಾಜಿ ಅದರ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ ಇವರಿಗೆ ಪ್ರಧಾನಿ ಮೊರಾರ್ಜಿ ದೇಸಾಯಿ ತಮ್ಮ ಸಂಪುಟ ಸೇರಲು ಆಹ್ವಾನಿಸಿದಾಗ ನಾನಾಜಿ ನಯವಾಗಿ ಅದನ್ನು ನಿರಾಕರಿಸಿದರು.
ಹಳ್ಳಿಗಳ ವಿಕಾಸದಲ್ಲಿ ನಂಬಿಕೆ ಇದ್ದ ಅವರು ಉತ್ತರಪ್ರದೇಶದ ಚಿತ್ರಕೂಟದಲ್ಲಿ ಚಿತ್ರಕೂಟ ಗ್ರಾಮೋದಯ ವಿಶ್ವವಿದ್ಯಾಲಯ ಸ್ಥಾಪಿಸಿ ಅದರ ಮೊದಲ ಕುಲಪತಿಯಾದರು. ಇದು ದೇಶದ ಮೊದಲ ಗ್ರಾಮೀಣ ವಿ.ವಿ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಶಿಕ್ಷಣ, ಆರೋಗ್ಯ, ಸ್ವಾವಲಂಬನೆ ಕ್ಷೇತ್ರಗಳಲ್ಲಿ ಕೊಡುಗೆ ನೀಡಿದ್ದು ಇವರ ವಿಶೇಷತೆ.
March 25, 2014
ಚುನಾವಣಾ ಹಿನ್ನೋಟ –1 ಸೇಠ್ ಗೋವಿಂದ್ ದಾಸ್ ಸಂಸತ್ ಸದಸ್ಯ
Subscribe to:
Posts (Atom)