November 09, 2010

ಉತ್ತಮ ಪುಸ್ತಕಗಳನ್ನು ಕೊಟ್ಟರೆ ಓದುಗರು ಒಪ್ಪಿಕೊಳ್ಳುತ್ತಾರೆ

ಡಿ ವಿ ಕೆ ಮೂರ್ತಿ
"ಸರ್ಕಾರ ನಂಬಿಕೊಂಡು ಪ್ರಕಾಶನ ಸಂಸ್ಥೆ ನಡೆಸಬಾರದು. ನಾನು ಕಳೆದ ಐದು ದಶಕಗಳಿಂದ ಇದೇ ಮಾದರಿಯಲ್ಲಿ ಸಂಸ್ಥೆಯನ್ನು ನಡೆಸಿಕೊಂಡು ಬಂದಿದ್ದೇನೆ. ಸಾಮಾಜಿಕ ಬದ್ಧತೆ ಹಾಗೂ ಉತ್ತಮ ಗುಣಮಟ್ಟದ ಸಾಹಿತ್ಯವನ್ನು ಜನರಿಗೆ ಒದಗಿಸುವುದು ನನ್ನ ಗುರಿ. ಇದನ್ನು ಜನ ಕೂಡ ಸ್ವೀಕರಿಸಿದ್ದಾರೆ. ಹೀಗಾಗಿ ನಾನು ಯಾವತ್ತೂ ಸರ್ಕಾರದ ಸಗಟು ಖರೀದಿಗೆ ಪುಸ್ತಕಗಳನ್ನು ಕಳುಹಿಸಿದವನಲ್ಲ.
ಪ್ರಕಾಶಕರು ವಾಸ್ತವಿಕತೆ, ಮಹತ್ವ ಅರಿತು ಪುಸ್ತಕಗಳನ್ನು ಪ್ರಕಟಿಸಬೇಕು. ಉತ್ತಮ ಗುಣಮಟ್ಟದ ಸಾಹಿತ್ಯ ತೀರಾ ಅವಶ್ಯಕ. ಪ್ರಕಾಶನ ಸಂಸ್ಥೆಯನ್ನು ನಾನು ಯಾವತ್ತೂ ವ್ಯವಹಾರಿಕವಾಗಿ ನೋಡಿದವನಲ್ಲ. ಲಾಭ ಗಳಿಸಲೇಬೇಕು ಎಂದರೆ ಬೇರೆ ಯಾವುದಾದರೂ ವ್ಯಾಪಾರ ಮಾಡಬಹುದು. ಸಾಮಾಜಿಕ ಬದ್ಧತೆಯಿಂದಲೇ ನಾನು ಅನುಪಮ ನಿರಂಜನ ಅವರ ‘ದಾಂಪತ್ಯ ದೀಪಿಕೆ’, ‘ತಾಯಿ-ಮಗು’ ಮೊದಲಾದ ಪುಸ್ತಕಗಳನ್ನು ಪ್ರಕಟಿಸಿದೆ. ವೈಚಾರಿಕ ದೃಷ್ಟಿಕೋನಕ್ಕಾಗಿ ಎ. ಎನ್. ಮೂರ್ತಿರಾವ್ ಅವರ ‘ದೇವರು’ ಕೃತಿ ಪ್ರಕಟಿಸಿದೆ. ‘ದೇವರು’ ಕೃತಿ ಈಗ 10ನೇ ಮುದ್ರಣ ಕಾಣುತ್ತಿದೆ. ತ್ರಿವೇಣಿ, ವಾಣಿ, ನಿರಂಜನ, ಅನಕೃ, ತರಾಸು ಮೊದಲಾದವರ ಪುಸ್ತಕಗಳನ್ನು ಪ್ರಕಟಿಸಿದ್ದು, ಜನಮನ್ನಣೆ ಪಡೆದಿವೆ. ಉತ್ತಮ ಪುಸ್ತಕಗಳನ್ನು ಕೊಟ್ಟರೆ ಓದುಗರು ಒಪ್ಪಿಕೊಳ್ಳುತ್ತಾರೆ.
ಸರ್ಕಾರ ಪುಸ್ತಕಗಳ ಸಗಟು ಖರೀದಿಯಲ್ಲಿ ಆ ವರ್ಷ ಪ್ರಕಟಿಸಿದ್ದು, ಈ ವರ್ಷ ಪ್ರಕಟಿಸಿದ್ದು ಎಂದು ನೋಡಬಾರದು. ಗುಣಮಟ್ಟದ ಕಡೆಗೆ ಗಮನ ನೀಡಬೇಕು. ಪುಸ್ತಕ ಖರೀದಿಯಲ್ಲಿ ಭ್ರಷ್ಟಾಚಾರ ನಡೆಸಬಾರದು. ಭ್ರಷ್ಟಾಚಾರ ಇದ್ದಲ್ಲಿ ಕಳಪೆ ಪುಸ್ತಕಗಳೆಲ್ಲಾ ಬರುತ್ತವೆ. ಕನ್ನಡ ಪುಸ್ತಕ ಪ್ರಾಧಿಕಾರ, ಸರ್ಕಾರ ಅಥವಾ ಕನ್ನಡ ಸಾಹಿತ್ಯ ಪರಿಷತ್ ಯಾರೇ ಆಗಿರಲಿ ಗುಣಮಟ್ಟದ ಸಾಹಿತ್ಯಕ್ಕೆ ಮನ್ನಣೆ ನೀಡಬೇಕು. ಜನರಿಗೆ ಬೇಕಾದ ಪುಸ್ತಕಗಳನ್ನು ನೀಡಿದರೆ ಭವಿಷ್ಯ ಇದ್ದೆ ಇರುತ್ತದೆ."

ಪುಸ್ತಕ ಬ್ರಹ್ಮ
ದೆಹಲಿ ಕನ್ನಡಿಗ ಏರ್ಪಡಿಸಿದ್ದ ೧೦ನೆಯ ಸಮ್ಮೇಳನದಲ್ಲಿ ’ಶ್ರೇಷ್ಥ ಪ್ರಕಾಶಕ’ ಸನ್ಮಾನ.
ಆಧಾರ:
೧. ಡಿ ವಿ ಕೆ ಮೂರ್ತಿ-ಪುಸ್ತಕ ಲೋಕದ ಅನನ್ಯರು ಮಾಲಿಕೆ,ಅಭಿನವ ಪ್ರಕಾಶನ, ಬೆಂಗಳೂರು
೨. ೦೫-೦೨-೨೦೦೨ರಂದು ಕನ್ನಡಪ್ರಭ ಪತ್ರಿಕೆಗೆ ನೀಡಿದ ಸಂದರ್ಶನ

No comments: