April 20, 2014

ದಿಟ್ಟ, ಸುಂದರ ಮಹಿಳಾ ಸಂಸದೆ ರಾಜಮಾತಾ ಗಾಯತ್ರಿ ದೇವಿ

ಗಾಯತ್ರಿ ದೇವಿ ರಾಜಮನೆತನದಿಂದ ಬಂದು ಲೋಕಸಭೆ ವಿರೋಧ ಪಕ್ಷದ ಸದಸ್ಯೆಯಾಗಿ ಲೋಕಸಭೆ ಪ್ರವೇಶಿಸಿದ ಮಹಿಳೆ. 1919ರಲ್ಲಿ ಪಶ್ಚಿಮ ಬಂಗಾಳದ ಕೂಚ್‌್್್್ ಬಿಹಾರದ ರಾಜಮನೆತನದಲ್ಲಿ ಜನಿಸಿದ ಈ ರಾಜಕುಮಾರಿ, ಜೈಪುರ ರಾಜಮನೆತನದ ಎರಡನೇ ಮಾನ್‌ಸಿಂಗ್‌ ಅವರ ಮೂರನೇ ಪತ್ನಿ. 1947ರಲ್ಲಿ ಸ್ವಾತಂತ್ರ್ಯಬಂದ ಮೇಲೆ 562 ಮಹಾರಾಜರಲ್ಲಿ 20 ಮಂದಿ ರಾಜತಾಂತ್ರಿಕ ಸೇವೆಗೆ ಹೋದರು, 40 ಮಂದಿ ರಾಜಕೀಯಕ್ಕೆ ಬಂದರು, ಆದರೆ ರಾಜಕೀಯದಲ್ಲಿ ಜೈಪುರದ ಈ ರಾಣಿ ಮಾಡಿದ ಪರಿಣಾಮ ಬೇರೆ ರಾಜಮನೆತನದವರು ಮಾಡಲಿಲ್ಲ ಎಂದು ಅಂದಿನ ಪತ್ರಿಕೆಗಳು ಬರೆದವು. ಪ್ರಪಂಚದ ಅತ್ಯಂತ 10 ಸುಂದರ ಮಹಿಳೆಯರಲ್ಲಿ ಒಬ್ಬರು ಎಂದು ಪರಿಗಣಿತರಾಗಿದ್ದವರು ಗಾಯತ್ರಿ ದೇವಿ. ನಟ ಅಮಿತಾಭ್ ಬಚ್ಚನ್ ಪಟ್ಟಿ ಮಾಡಿರುವ ಮರೆಯಲಾಗದ ಮಹಿಳೆಯರಲ್ಲಿ ಈಕೆ ಒಬ್ಬರು. ಶ್ರೀಮಂತ–ಸುಂದರ–ಮೇಧಾವಿ–‘ಮೊದಲ ದರ್ಜೆ ರಾಜಕಾರಣಿ’ ಎಂದು ಅವರನ್ನು ಆ ಕಾಲದ ಪತ್ರಿಕೆಗಳು ವರ್ಣಿಸಿದ್ದವು. ಆಕೆ ಮತ್ತು ರಾಜ ಇಬ್ಬರೂ ರಾಜಾಜಿ ಯವರ ಸ್ವತಂತ್ರ ಪಕ್ಷ ಸೇರಿದರು. ಗಾಯತ್ರಿದೇವಿ ರಾಜಸ್ತಾನದಲ್ಲಿ ಸ್ವತಂತ್ರ ಪಕ್ಷ ಸ್ಥಾಪಿಸಿದರು. ಆಗ ರಾಜಾಜಿ ತಮ್ಮ ಪಕ್ಷದ ಪತ್ರಿಕೆಯಲ್ಲಿ ಗಾಯತ್ರಿಯವರನ್ನು ಝಾನ್ಸಿ ರಾಣಿಗೆ ಹೋಲಿಸಿದ್ದರು. ರಾಜಸ್ತಾನದ ಹೆಂಗಸರು ಪರದೆಯ ಹಿಂದೆ ಇರ ಬೇಕಿದ್ದ ಪರಿಸ್ಥಿತಿಯಲ್ಲಿ ಆಕೆ ರಾಜಸ್ತಾನದ ಜೈಪುರದಿಂದ ಸ್ವತಂತ್ರ ಪಕ್ಷದ ಟಿಕೆಟಿನಿಂದ ಲೋಕಸಭಾ ಚುನಾವಣೆ ಎದುರಿಸಿ ಕಾಂಗ್ರೆಸ್‌ ವಿರುದ್ಧ 1962,1967,1971ರಲ್ಲಿ ಸತತವಾಗಿ ವಿಜಯಿಯಾದದ್ದು ವಿಶೇಷ. ಇವರು 1962ರಲ್ಲಿ ಅವರು ಶೇ.78 ಮತಗಳನ್ನು ಪಡೆದು ಗಿನ್ನಿಸ್ ದಾಖಲೆ ಸೃಷ್ಟಿಸಿದ್ದರು. ಚಲಾಯಿಸಲಾದ 246,516 ಮತಗಳಲ್ಲಿ ಇವರಿಗೆ 192,909 ಮತಗಳು ಬಂದಿದ್ದವು! 1975ರ ತುರ್ತು ಪರಿಸ್ಥಿತಿಯಲ್ಲಿ ತೆರಿಗೆ ಪಾವತಿಸಿಲ್ಲ ಎಂಬ ಸುಳ್ಳು ಆರೋಪದ ಮೇಲೆ ಅವರು ಬಂಧನಕ್ಕೆ ಒಳಗಾಗಿ 5 ತಿಂಗಳು ತಿಹಾರ್ ಜೈಲಿನಲ್ಲಿದ್ದರು. 1999ರಲ್ಲಿ ತೃಣಮೂಲ ಕಾಂಗ್ರೆಸ್ ಅವರನ್ನು ಕೂಚ್ ಬಿಹಾರ್‌ನಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ನೀಡಿದ ಆಹ್ವಾನಕ್ಕೆ ಅವರು ಪ್ರತಿಸ್ಪಂದಿಸಲಿಲ್ಲ.
ಪೋಲೋ, ಕುದುರೆ ಸವಾರಿ ಮತ್ತು ಶಿಕಾರಿ ಪ್ರಿಯೆಯಾಗಿದ್ದ ಗಾಯತ್ರಿದೇವಿ ಜೈಪುರದಲ್ಲಿ ಬಾಲಕಿಯರ ಸಾರ್ವಜನಿಕ ಶಾಲೆ ತೆರೆದರು, ಜೈಪುರ ಸಾಂಪ್ರದಾಯಿಕ ಕುಂಭಕಲೆ(ಬ್ಲೂ ಪಾಟರಿ)ಯ ಉಳಿವಿಗೆ ಶ್ರಮಿಸಿದರು.ಅವರ ಹೆಸರಿನಲ್ಲಿ ಒಂದು ಫೇಸ್‌ ಬುಕ್‌ ಖಾತೆ ಕೂಡ ಇದೆ. ‘A Princess Remembers: The Memoirs of the Maharani of Jaipur’ ಇದು ಅವರ ಆತ್ಮಕತೆ. 90 ವರ್ಷ ಜೀವಿಸಿದ್ದ ಆಕೆ 2009ರಲ್ಲಿ ನಿಧನರಾದರು. ರಾಜವೈಭವ, ಪ್ರಜಾಪ್ರತಿನಿಧಿತ್ವ ಎರಡನ್ನೂ ಪ್ರತಿನಿಧಿಸಿದ ಇತಿಹಾಸದ ಸಂಧಿ ಕಾಲದಲ್ಲಿದ್ದ ಸಂಸದೆ –ಮಹಾರಾಣಿ ಗಾಯತ್ರಿದೇವಿ.

No comments: