April 20, 2014

ಅಕಡೆಮಿಗಳು ಹೇಗಿರಬೇಕು?

ವಿವಿಧ ಅಕಡೆಮಿಗಳಿಗೆ ಅಧ್ಯಕ್ಷ ಮತ್ತು ಸದಸ್ಯರ ನೇಮಕಾತಿ ಹೋದ ವಾರ ಆಗಿದೆ.ಇದು ಎಂದೋ ಆಗ ಬೇಕಾದ ಕೆಲಸ, ತುಂಬ ತಡವಾಗಿ ಆಗಿದೆ.ಇದರಲ್ಲಿ ಕೆಲವರು ಅರ್ಹತೆ ಇದ್ದವರು, ಕೆಲವರು ಇದಕ್ಕೆಂದೆ ಅರ್ಹತೆ ಕಲ್ಪಿಸಿಕೊಂಡವರು ಬಂದಿದ್ದಾರೆ.ಅಕಡೆಮಿಗಳು ಸುಮಾರು ಎರದು ವರ್ಷದ ನಂತರ ಮತ್ತೆ ಕೆಲಸ ಶರು ಮಾಡಲು ಹೊರಟಿರುವುದು ಶುಭ ಸೂಚನೆ.ಹೊಸ ರೀತಿಯಲ್ಲಿ ಕೆಲಸ ಮಾಡಲು ಇದೊಂದು ಅವಕಾಶ.ಕಾಲ ಬದಲಾಗಿದೆ, ಜನಗಳ ಆಶೋತ್ತರಗಳು ಬದಳಗಿವೆ.ಒಂದು ಅ ಕಾಡೆಮಿ ಎಂದರೇನು?ಅದು ಮಾಡಲೇಬೇಕಾದ ಕೆಲಸಗಳು ಏನು?ಪುನರಾವರ್ತನೆ ಆಗದಂತೆ ಹೇಗೆ ಕೆಲಸ ಮಾಡಬಹುದು ಎಂಬ ಬಗ್ಗೆ ಮೊದಲಿಗೆ ಎಲ್ಲ ಅಕಡೆಮಿಗಳ ಅಧ್ಯಕ್ಷರ ಮತ್ತು ರಿಜಿಸ್ಟ್ರಾರಗಳ ಸಭೆ ಕರೆದು ಒಂದು ಸಮಗ್ರ ಚಿತ್ರಣ ಪಡೆಯಬೇಕು.ಕುವೆಂಪು ಭಾಷಾ ಪ್ರಾಧಿಕಾರ,ಕರ್ನಾಟಕ ಸಾಹಿತ್ಯ ಅಕಾಡೆಮಿ,ಕರ್ನಾಟಕ ಜಾನಪದ ಅಕಾಡೆಮಿ,ಕನ್ನಡ ಸಂಸ್ಕತಿ ಇಲಾಖೆ ಇವಗಳು ಪರಸ್ಪರ ಒಟ್ಟಿಗೆ ಕುಳಿತು ಕೆಲಸ ದ ಯೋಜನೆ ಮಾಡಿದರೆ ಲಾಭವಿದೆ.//ವಚನ, ದಾಸ ಸಾಹಿತ್ಯದ ಸಮಗ್ರ ಸಂಪುಟಗಳಂತೆ ಸಮಗ್ರ ಕನ್ನಡ ತತ್ವಪದ ಸಾಹಿತ್ಯದ ಸರಣಿ ತರಬೇಕಿದೆ. ಸಮಗ್ರ ಸಾಹಿತ್ಯ ಸಾಹಿತ್ಯ ಸಂಪುಟಗಳಲ್ಲಿ ಒಂದು ಪ್ರಮುಖ ಸಮಸ್ಯೆಯಿದೆ.ಈಗ ದಿ.ಹಾಮಾನಾ ಸಂಪಾದಿಸಿದ್ದ ಡಿವಿಜಿ ಸಂಪುಟ ಸಮಗ್ರವಲ್ಲ,ಅದರಲ್ಲಿ ಡಿವಿಜಿಯವರು ದಿವಾನ ಮಿರ್ಜಾ ಇಸ್ಮಾಯಿಲ, ಸರ ಎಂ.ವಿಶ್ವೇಶ್ವರಯ್ಯ, ತಿ.ತಾ.ಶರ್ಮ, ರಾಜಾಜಿ ಮೊದಲಾದವರಿಗೆ ಬರೆದ ನೂರಾರು ಪತ್ರಗಳು ಸೇರಿಲ್ಲ.ಇನ್ನು ಈಗಾಗಲೆ ವಹಿಸಿಕೊಟ್ಟಿರುವ ಟಿ.ಎಸ.ವೆಂಕಣ್ಣಯ್ಯ ಮತ್ತು ಎ.ಆರ.ಕೃಷ್ಣಶಾಸ್ತ್ರಿ ಸಂಪುಟಗಳು ಹೊರಗೆ ಬಂದಿಲ್ಲ.ಸಮಗ್ರಗಳ ಪರಿಕಲ್ಪನೆಯಲ್ಲಿ ಸಮಸ್ಯೆಯಿದೆ.ಉದಾಹರಣೆಗೆ ರೆವರೆಂಡ ಕಿಟ್ಟಲ, ಬಿ.ಎಲ.ರೈಸ,ಆರ.ನರಸಿಂಹಾಚಾರ,ಆ.ನೇ.ಉಪಾಧ್ಯೆ, ಡಿವಿಜಿ ಯವರ ಸಾವಿರಾರು ಪುಟಗಳ ಬರಹ ಇಂಗ್ಲಿಷಿನಲ್ಲಿದೆ.ಅದನ್ನು ಯಾರು ಪ್ರಕಟಿಸಬೇಕು?ಕನ್ನಡದ ಪ್ರಸಿದ್ಧ ಪತ್ರಕರ್ತ ತಿ.ತಾ.ಶರ್ಮಾ ಅವರ ’ವಿಶ್ವಕರ್ಣಾಟಕ’ದ ಸಂಪಾದಕೀಯ,ಲೇಖನಗಳಲ್ಲದೆ ಬೇರೆಡೆ ಚದುರಿ ಹೋಗಿರುವ ಅಸಂಖ್ಯಾತ ಬರಹಗಳು ಒಂದು ಕಡೆ ಸಮಗ್ರವಾಗಿ ಸಿಗುತ್ತಿಲ್ಲ.ಇದೇ ಸಾಲಿಗೆ ಬೇಂದ್ರೆಯವರನ್ನು ಪ್ರಭಾವಿಸಿದ ಶಾಂತಕವಿ,ಸರಸ್ವತಿಬಾಯಿ ರಾಜವಾಡೆ,ಎನ.ಅಂತರಂಗಾಚಾರ ಬರಹಗಳು ಸೇರುತ್ತವೆ.ಬಾಬಾಸಾಹೇಬ ಅಂಬೇಡ್ಕರ ಚಿಂತನೆ ಕನ್ನಡಕ್ಕೆ ಬಂದಿದೆ, ಆದರೆ ಮೊದಲ ಮುದ್ರಣದಲ್ಲಿತುಂಬ ತಪ್ಪುಗಳು ಮಾತ್ರವಲ್ಲ,ಕಾನೂನಿಗೆ ಸಂಬಂಧಿಸಿದ ಮೂಲದ ಕಠಿಣ ಭಾಗಗಳು ಬಿಟ್ಟು ಹೋಗಿದ್ದವು,ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಹೊಸ ಮುದ್ರಣದಲ್ಲಿ ಈ ಲೋಪಗಳು ಆದಷ್ಟು ಸರಿಯಾಗಿವೆ. ರಾಂಮನೋಹರ ಲೋಹಿಯ ಸಮಗ್ರದ ಕೆಲಸ, ದೀನದಯಾಳ ಸಮಗ್ರದ ಕೆಲಸ ಪೂರ್ಣವಾಗಿಲ್ಲ. ಅದೇ ರೀತಿ ಮಹಾತ್ಮ ಫುಲೆ ಸಮಗ್ರ ಕನ್ನಡಕ್ಕೆ ಬರಬೇಕಿದೆ.ಒಂದೊಂದು ಅಕಾಡೆಮಿ ಮೂಲ ಮಾಹಿತಿ ಸಂಗ್ರಹಣೆಗೆ ಪರಿಣತರ, ಪರಿಶ್ರಮ ಪಡಬಲ್ಲವರ ತಂಡ ಕಟ್ಟಿ ಕೊಂಡು ಕಾಲ ಮಿತಿಯೊಳಗೆ ಈ ಕೆಲಸ ಮಾಡಿ ಮುಗಿಸ ಬೇಕು.ಪಟ್ಟ ಶ್ರಮ ಸಾರ್ಥಕವಾಗ ಬೇಕಾದರೆ ಸಿಡಿ ರೂಪದಲ್ಲಿ ಸಂಗ್ರಹಿಸಿ ತನ್ನ ಅಕಾಡೆಮಿ //ಅಂತರ್ಜಾಲ ತಾಣದಲ್ಲಿ ಹಾಕಬೇಕು.ಇಲ್ಲಿ ಪ್ರಾಜೆಕ್ಟ ಗುಟನಬರ್ಗ(project Guttenberg) ಮಾದರಿ ಅನುಸರಿಸಬಹುದು.ಆಗ ಒಂದು ಸಲ ಮಾಡಿದ ಕೆಲಸ ಶಾಶ್ವತವಾಗಿ ಉಳಿಯುತ್ತದೆ, ಮುಂದಿನ ಪೀಳಿಗೆಯ ಪಾಲಿಗೆ ದೊಡ್ಡ ಸಂಪತ್ತಾಗುತ್ತದೆ. ಅಕಾಡೆಮಿಗಳು ತಮ್ಮ ಹಿಂದಿನ ಎಲ್ಲ ಪ್ರಕಟಣೆಗಳನ್ನು ಮೊದಲು ಅಂತರ್ಜಾಲ ತಾಣದಲ್ಲಿ ಪಿಡಿಎಫ(pdf) ಡಿಜೆವಿಯು(djvu) ಮತ್ತು ಇನ್ನಿತರ ರೂಪಗಳಲ್ಲಿ ಕಡ್ಡಾಯವಾಗಿ ಹಾಕಬೇಕು.ಆಯಾ ಸಮಿತಿಯ ಕಾಲದಲ್ಲಿ ನಡೆದ ಕೆಲಸಗಳ ಸಂಕ್ಷಿಪ್ತ ವರದಿಗಳನ್ನು, ಪುಸ್ತಕಗಳನ್ನು ಕೆಲಸ ಮಾಡಿದವರ ಹೆಸರಿನ ಸಮೇತ ಹಾಕಬೇಕು.ಇದು ಹಿಂದೆ ಕೆಲಸ ಮಾಡಿದವರನ್ನು ಗೌರವಿಸುವ ಕ್ರಮವೂ ಹೌದು. ಈಗ ಎಲ್ಲಾ ವಿಷಯಗಳಲ್ಲೂ ಸರಳವಾದ ಆದರೆ ಅಧಿಕೃತ ವಿವರ, ವಿಶ್ಲೇಷಣೆಯಿರುವ 100–200 ಪುಟಗಳ ಪುಸ್ತಕಗಳ ಅಗತ್ಯವಿದೆ.ಹಿಂದೆ ಬರಗೂರು ಅವರ ಕಾಲದಲ್ಲಿ ಸಾಹಿತ್ಯ ಅಕಾಡೆಮಿ ಇಂತಹ ಕೃತಿಗಳನ್ನು ಪ್ರಕಟಿಸಲಾಗಿತ್ತು. ಇಂಗ್ಲಿಷಿನಲ್ಲಿ ಇರುವ ನಮ್ಮ ಸಂದರ್ಭಕ್ಕೆ, ಸಮಾಜಕ್ಕೆ ಅತ್ಯಗತ್ಯವಾದ ವಿವಿಧ ಆಕರ ಪುಸ್ತಕಗಳು ನಮಗೆ ಬೇಕು.ಸಾಹಿತ್ಯದ ಅತಿ ಹಳೆಯ ರೂಪಗಳಾದ ಮಹಾಕಾವ್ಯ, ನಾಟಕ,ಈಚಿನ ರೂಪವಾದ ಕಾದಂಬರಿ ಕುರಿತು ಜಗತ್ತಿನ ವಿವಿಧೆಡೆಗಳಲ್ಲಿ ಬಂದಿರುವ ಹೊಸ ನೋಟಗಳು ತುರ್ತಾಗಿ ಕನ್ನಡಕ್ಕೆ ಬೇಕು.ಅದೇ ರೀತಿ ನಮ್ಮ ಪ್ರಮುಖ ಲೇಖಕರ ಬಗ್ಗೆ ಬೇರೆ ಭಾರತೀಯ ಭಾಷೆಗಳಲ್ಲಿ ವ್ಯಕ್ತವಾಗುತ್ತಿರುವ ಹೊಸ ಮಾತುಗಳು ಅಕಾಡೆಮಿಗಳ ಮೂಲಕ ಜನರಿಗೆ ತಲುಪಬೇಕು.ಈಗಜಾನಪದ ವಿಶ್ವವಿದ್ಯಾಲಯಲ್ಲಿರುವ ಅನೇಕರು ಜಾನಪದ ಅಕಾಡೆಮಿಯಲ್ಲಿ ಕೆಲಸ ಮಾಡಿರುವವರೆ,ಹಾಗಾಗಿ ಪರಸ್ಪರ ಮಾತನಾಡಿಕೊಂಡು ಜಾನಪದಕ್ಕೆ ಸಂಬಂಧ ಪಟ್ಟ ಅತ್ಯುತ್ತಮ ಕೆಲಸ ಮಾಡಲು ಬಹಳ ಅವಕಾಶವಿದೆ. ಕೊನೆಗೂ ಎಲ್ಲವೂ ನಡೆಯುತ್ತಿರುವುದು ಪ್ರಜೆಗಳ ತೆರಿಗೆಯಿಂದ ಅಲ್ಲವೆ? ಏನೇ ಕನ್ನಡದ ಮಾತನಾಡಿದರು
ಮೊನ್ನೆ ಮೊನ್ನೆ ಸರ್ಕಾರದ ಪರವಕೀಲರನ್ನು ಹೈಕೋರ್ಟ ತಾಯ್ನುಡಿ ಕುರಿತು ಕೇಳಿದ ಪ್ರಶ್ನೆ ಯಾರು ಇನ್ನು ಮರೆತಿಲ್ಲ.ಕನ್ನಡ ಬಿಡದೆ, ಇಂಗ್ಲಿಷನಲ್ಲಿರುವ //ಜ್ಙಾನ ನಮ್ಮ ಹೊಸ ತಲೆಮಾರನ್ನು ಸೇರಬೇಕಿದೆ.ಕವಿ ಸಿದ್ಧಲಿಂಗಯ್ಯನವರು ಒಂದು ಸಲ ಹೇಳಿದ ಸಾಲು ನನಗೆ ಇನ್ನೂ ನೆನಪಿದೆ:’ಕನ್ನಡ ನಮ್ಮ ಬೇರು ಇಂಗ್ಲಿಷ ಅನ್ನ ಸಾರು’.ವಸಾಹತೋತ್ತರ, ಆಧುನಿಕೋತ್ತರ ಸಂದರ್ಭ ಮನೆಗಳಲ್ಲಿ ಕನ್ನಡ ಕಮ್ಮಿಯಾಗುತ್ತಿರುವ ಸಮಯವೂ ಹೌದು.ಜನರ ಬದುಕಿಗೆ ಉಪಯೋಗವಾಗುವ ರೀತಿಯಲ್ಲಿ, ಗ್ರಾಮೀಣ ಭಾಗಗಳಲ್ಲಿ ಕುಸಿದಿರುವ ಆತ್ಮವಿಶ್ವಾಸ ಚಿಗುರುವಂತೆ ಮಾಡುವ ದಿಕ್ಕಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು,ರೂಪಿಸಬೇಕಿದೆ. ವಿವಿಧ ಅಕಾಡೆಮಿಗಳ ಹಿಂದಿನ ಹಣಕಾಸು ವಹಿವಾಟಿನ ವೈಖರಿ ನೋಡಿದರೆ ಅದು ಆಶಾದಾಯಕವಾಗಿಲ್ಲ.ಜನರಿಂದ ಪಡೆದ 1ರೂಗೆ 100 ಪೈಸೆಗೂ ಲೆಕ್ಕ ಕೊಡಬೇಕೆಂದು ಗೋಪಾಲಕೃಷ್ಣ ಗೋಖಲೆ ಹೇಳಿದ್ದರು.ಇದರ ಅರ್ಥ, ಅಧ್ಯಕ್ಷರು ಸದಸ್ಯರು ಮಂಜೂರಾಗಿರುವ ಹಣ ವಾಪಸಾಗಲು ಬಿಡದೆ, ಸೂಕ್ತವಾಗಿ ಬಳಸಿಕೊಳ್ಳಬೇಕು,ಇದರಲ್ಲಿ ಬೇಕಿರುವುದು ಯೋಜನೆ ಮತ್ತು ಅನುಷ್ಠಾನವೇ ಹೊರತು ಸಂಕೋಚವಲ್ಲ.ಮಹಾರಾಷ್ಟ್ರ, ಕೇರಳ, ಬಂಗಾಳ,ಒಡಿಶಾಗೆ ಸಾಂಸ್ಕೃತಿಕ ಲಕ್ಷಣವಿರುವಂತೆ ಕನ್ನಡಕ್ಕೂ ಇದೆ,ಕನ್ನಡಕ್ಕೆ ಒಂದು ಕಾಲವಿರುವಂತೆ, ಒಂದು ದೇಶವೂ ಇದೆ.ಕೆ.ವಿ.ಸುಬ್ಬಣ್ಣ ಒಂದು ಲೇಖನದಲ್ಲಿ ಹೇಳಿರುವಂತೆ ’ಭವಕರ್ನಾಟಕ’ವಿರುವಂತೆ ’ಭಾವಕರ್ನಾಟಕ’ವೂ ಇದೆ.ಕನ್ನಡದ ವ್ಯಕ್ತಿತ್ವದೊಡನೆ ಅದರ ಅಸ್ತಿತ್ವದ ಪ್ರಶ್ನೆಗಳನ್ನು ಎಲ್ಲಾ ಅಕಾಡೆಮಿಗಳು ಮೈಮೇಲೆ ಎಳೆದುಕೊಳ್ಳಬೇಕು. ಯಾವುದೆ ಅನುಮಾನವಿಲ್ಲದೆ ಸದಸ್ಯರು ತಾವು ಈ ನಾಡಿನ ಸಾಂಸ್ಕೃತಿಕ ರಾಯಭಾರಿಗಳು ಎಂಬಂತೆ ತುಂಬ ಎಚ್ಚರದಿಂದ ಅಷ್ಟೆ ಭಯಮುಕ್ತರಾಗಿ ವರ್ತಿಸಬೇಕು.ಸರ್ಕಾರ ತಾನೆ ಸಾಂಸ್ಕೃತಿಕ ನೀತಿ ರೂಪಿಸುವ ಮಾತನ್ನು ಆಡಿತ್ತು, ಅದು ಸರ್ಕಾರದ ಕೆಲಸವಲ್ಲ.ಸರ್ಕಾರ ಅನುದಾನ ಬಿಡುಗಡೆ ಮಾಡಿ,ಕೆಲಸ ಆಗುತ್ತಿದೆಯೆ ಎಂದು ಕನ್ನಡ ಸಂಸ್ಕ್ರತಿ ಇಲಾಖೆ ಮೂಲಕ ಆಗಾಗ ತಿಳಿದು ಕೊಳ್ಳುತ್ತಿರಬೇಕು.ಕೆಲವು ಅಕಾಡೆಮಿಗಳ ಮಾರಾಟ ಮಳಿಗೆಗಳಿಗೆ ಬೆಂಗಳೂರು ನಗರದೊಳಗೆ ಮಾರಾಟ ಮಳಿಗೆ ವ್ಯವಸ್ಥೆಯಿಲ್ಲ,ಇದರತ್ತ ಸರ್ಕಾರ ಕೂಡಲೆ ಗಮನ ಕೊಡಬೇಕು.ಸರ್ಕಾರ ನಿಗದಿತ ಹಣ ನೀಡಬೇಕು, ಹೊಸ ಅಧ್ಯಕ್ಷರು, ಸದಸ್ಯರು ಚಿಲ್ಲರೆ ರಾಜಕೀಯಗಳಲ್ಲಿ,ಜಾತಿಗದ್ದಲದ ಕ್ಲೇಶದಲ್ಲಿ ಸಿಲುಕಿ ಕೊಳ್ಳದೆ ಕನ್ನಡ ಮನಸ್ಸಿನ ಆತ್ಮಸಾಕ್ಷಿಗಳಂತೆ ನಡೆದು ಕೊಳ್ಳಬೇಕು.ಜಗತ್ತಿನ ಅತಿ ಪ್ರೌಢ, ಪ್ರಾಚೀನ ಮತ್ತು ಜೀವಂತ ಭಾಷೆ ಕನ್ನಡ ಎಂಬ ಅರಿವೊಂದಿದ್ದರೆ ಅದರ ಬೆಳಕು ತಾನೇ ದಾರಿ ತೋರಿಸುತ್ತದೆ.(ಸಂಗತ:ಪ್ರಜಾವಾಣಿ)

No comments: