April 20, 2014

ಒಂದೇ ಕುಟುಂಬದಿಂದ ಒಂಬತ್ತು ಮಂದಿ ಲೋಕಸಭೆಗೆ!

ರಾಜೀವ್ ಗಾಂಧಿ ಭಾರತದ ನಗುಮೊಗದ ರಾಜಕಾರಣಿಗಳಲ್ಲಿ ಒಬ್ಬರು. ಒಂದೇ ಕುಟುಂಬದ ಸದಸ್ಯರು ದೇಶದ ರಾಜಕೀಯದಲ್ಲಿ ಅತ್ಯಂತ ಸಕ್ರಿಯವಾಗಿ ಪಾಲ್ಗೊಂಡಿರುವುದಕ್ಕೆ ಈ ನೆಹರೂ–ಗಾಂಧಿ ಕುಟುಂಬ ಒಂದು ಉತ್ತಮ ನಿದರ್ಶನ. ಅವರ ತಾತ ನೆಹರೂ ದೇಶದ ಮೊದಲ ಪ್ರಧಾನಿ, ತಾಯಿ ಇಂದಿರಾಗಾಂಧಿ ಭಾರತದ ಮೂರನೇ ಪ್ರಧಾನಿ. ರಾಜೀವ್ ಗಾಂಧಿ ಅವರ ತಂದೆ ಪಾರ್ಸಿ ಧರ್ಮಕ್ಕೆ ಸೇರಿದ ಫಿರೋಜ್ ಷಾ ಗಂಧಿ ಅವರು ಪತ್ರಕರ್ತರು ಮತ್ತು ಮೊದಲನೇ ಲೋಕಸಭೆಗೆ ಉತ್ತರಪ್ರದೇಶದ ರಾಯ್ ಬರೇಲಿಯಿಂದ 1952–57ರ ಅವಧಿಗೆ ಆಯ್ಕೆಯಾಗಿದ್ದರು. 1980ರಲ್ಲಿ ತಮ್ಮ ಸಂಜಯ ಗಾಂಧಿ ವಿಮಾನ ಅಪಘಾತದಲ್ಲಿ ಮರಣಹೊಂದಿದ ಮೇಲೆ ಇಂದಿರಾಗಾಂಧಿ ಅವರ ಆಗ್ರಹದ ಮೇರೆಗೆ ರಾಜೀವ್ ರಾಜಕೀಯ ಪ್ರವೇಶಿಸಿದರು. ಸಂಜಯ ಗಾಂಧಿ ಅವರ ಪತ್ನಿ ಶ್ರೀಮತಿ ಮನೇಕಾ ಗಾಂಧಿ ಅವರು ಈ ಪರಿವಾರಕ್ಕೆ ಸೇರಿದ ಕಾಂಗ್ರೆಸೇತರ ಲೋಕಸಭಾ ಸದಸ್ಯೆ. ಅವರು 9,11,12,13,14,15 ನೇ ಲೋಕಸಭೆಗೆ ಆಯ್ಕೆಯಾಗಿದ್ದರು. ಅವರ ಪುತ್ರ ವರುಣ್ ಗಾಂಧಿ ಅವರು 15ನೇ ಲೋಕಸಭೆಗೆ ಉತ್ತರಪ್ರದೇಶದ ಪಿಲಿಭೇತ್ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಇಂದಿರಾಗಾಂಧಿ ಅವರು 1984ರ ಅಕ್ಟೋಬರ್ 31ರಂದು ಅವರ ಅಂಗರಕ್ಷಕರಿಂದ ಹತ್ಯೆ ನಂತರದ ಮಹಾಚುನಾವಣೆಯಲ್ಲಿ ಗೆದ್ದು ರಾಜಕೀಯಕ್ಕೆ ಬಂದ ರಾಜೀವ್ ಅವರು ಪ್ರಧಾನಿಯಾದರು. ಒಂದೇ ಕುಟುಂಬದಿಂದ ಆಯ್ಕೆಯಾದ ಮೂರನೇ ಪ್ರಧಾನಿ ಇವರು. ಲೋಕಸಭಾ ಸದಸ್ಯರೂ ಆಗಿದ್ದ ಇವರ ತಂದೆ, ತಾಯಿ, ಅಜ್ಜ, ತಮ್ಮ ಇವರ ಅಂತಿಮಸಂಸ್ಕಾರ ರಾಜೀವ್ ಅವರೇ ಮಾಡಬೇಕಾಗಿ ಬಂದಿತ್ತು. 7,8,9,10ನೇ ಲೋಕಸಭೆಗೆ ಆಯ್ಕೆಯಾದ ರಾಜೀವ್ ಅವರು ಮತ್ತೆ ಮತ್ತೆ ಉತ್ತರಪ್ರದೇಶದ ಅಮೇಠಿಯಿಂದ ಆಯ್ಕೆಯಾದರು. ದೇಶದ ಪ್ರಧಾನಿಯಾಗುವುದರೊಡನೆ ಕೆಲವು ಕಾಲ ರಕ್ಷಣಾ ಸಚಿವರಾಗಿ,ಪರಿಸರ ಮತ್ತು ಅರಣ್ಯ ಖಾತೆ ಸಚಿವರಾಗಿಯೂ ಸೇವೆ ಸಲ್ಲಿಸಿದರು.ಒಂಬತ್ತನೇ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. ಕರ್ನಾಟಕದಲ್ಲಿ ಕಾಂಗ್ರೆಸ್ ನ ವೀರೇಂದ್ರ ಪಾಟೀಲರನ್ನು ಅನಿರೀಕ್ಷಿತವಾಗಿ ಮುಖ್ಯಮಂತ್ರಿ ಪದವಿಯಿಂದ ಇಳಿಸಿದ ಪ್ರಕರಣ ಆ ಕಾಲದಲ್ಲಿ ದೊಡ್ಡ ಚರ್ಚೆಯ ವಿಷಯವಾಗಿತ್ತು. ಅವರ ಹತ್ಯೆಗೆ ಮೊದಲು ನಡೆದ ಮಹಾಚುನಾವಣೆಯಲ್ಲಿ ರಾಜೀವ್ ಕರ್ನಾಟಕದಲ್ಲಿ ಚುನಾವಣಾ ಪ್ರವಾಸ ಮಾಡುವಾಗ ಕೇರಳದ ಗಡಿ ಪ್ರದೇಶವಾದ ತಲಪಡಿಗೆ ಬಂದರು, ಅವರನ್ನು ಆಸ್ಕರ್ ಫರ್ನಾಂಡಿಸ್ ಸ್ವಾಗತಿಸಿದ ಮೇಲೆ ರಾಜೀವ್ ಕಾರಿನಲ್ಲಿ ಕುಳಿತರು. ಆಗ ಆಸ್ಕರ್ ಹೇಳಿದರು : ‘Sir,mind your head’(ಸರ್, ದಯವಿಟ್ಟು ನಿಮ್ಮ ತಲೆ ಹುಷಾರು). ’I will have to mind my head’(ಹೌದು, ನನ್ನ ತಲೆ ಕಾಪಾಡಿಕೊಳ್ಳಬೇಕು). ಆದರೆ ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಅವರು ಎಲ್.ಟಿ.ಟಿ.ಇ. ಭಯೋತ್ಪಾದಕರ ಭಯೋತ್ಪಾದನೆಗೆ ಮೇ 21, 1991ರಂದು ಬಲಿಯಾದರು. ಮುಂದೆ ಇವರ ಪತ್ನಿ ಶ್ರೀಮತಿ ಸೋನಿಯಾ ಗಾಂಧಿ ಅವರು 13,14,15ನೇ ಲೋಕಸಭೆಗೆ ಆಯ್ಕೆಯಾದರು ಮತ್ತು 1998ರಿಂದ ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷೆಯಾಗಿದ್ದಾರೆ. ಅವರ ಮಗ ರಾಹುಲ್ ಗಾಂಧಿ 14,15ನೇ ಲೋಕಸಭೆಗೆ ಅಮೇಠಿಯಿಂದ ಆಯ್ಕೆಯಾಗಿದ್ದರು. ಹೀಗೆ ಒಂದೇ ಕುಟುಂಬದ ಒಂಬತ್ತು ಮಂದಿ ಲೋಕಸಭೆಗೆ ಪ್ರವೇಶೀಸಿದ್ದು ವಿಶೇಷ ವಿದ್ಯಮಾನ.

No comments: