ಅಣ್ಣನ ನೆನಪು
ಪುಸ್ತಕ:ಅಣ್ಣನ ನೆನಪು
ಲೇಖಕ: ಪೂರ್ಣಚಂದ್ರ ತೇಜಸ್ವಿ
ಭಾಷೆ:ಕನ್ನಡ
ಅನುವಾದದ ವಿವರ:ಬೇರೆ ಭಾಷೆಗೆ ಅನುವಾದವಾಗಿಲ್ಲ
ಪ್ರಕಾಶಕರು:ಪುಸ್ತಕ ಪ್ರಕಾಶನ, ಮೈಸೂರು
ಮೊದಲನೆಯ ಮುದ್ರಣ:೧೯೯೬
ಎರಡನೆಯ ಮುದ್ರಣ:೧೯೯೭
ಅಣ್ಣನ ನೆನಪು ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಅರೆ ಆತ್ಮ ಕಥನದ ಧಾಟಿಯ ಪುಸ್ತಕ.ಮೊದಲು ಸಾಹಿತಿ ಪತ್ರಕರ್ತ ಪಿ. ಲಂಕೇಶ್ ನಡೆಸುತ್ತಿದ್ದ ’ಲಂಕೇಶ್ ಪತ್ರಿಕೆ’ಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿ ಮುಂದೆ ಪುಸ್ತಕ ರೂಪದಲ್ಲಿ ಮುದ್ರಣವಾಯಿತು.
"ಅಣ್ಣನ ನೆನಪು ಕೃತಿ ಒಂದರ್ಥದಲ್ಲಿ ತೇಜಸ್ವಿಯವರು ಹುಟ್ಟಿದಲ್ಲಿನಿಂದ ಇಲ್ಲಿಯವರೆಗಿನ ಕುವೆಂಪುರವರ ಕಥೆ ಅಥವಾ ಅವರ ಜೀವನ ಚರಿತ್ರೆಯ ಹಲವು ಮಹತ್ವಪೂರ್ಣ ಅಧ್ಯಾಯಗಳು.ಹಾಗೆಯೆ ಇದನ್ನು ತೇಜಸ್ವಿಯವರ ಆತ್ಮಕಥೆಯ ಹಲವು ಅಧ್ಯಾಯಗಳೆಂದು ಪರಿಗಣಿಸಬಹುದು.ಕುವೆಂಪುರವರು ಕನ್ನಡ ಸಂಸ್ಕೃತಿ ಚರಿತ್ರೆಯಲ್ಲಿ ವಹಿಸಿರುವ ಮಹತ್ವಪೂರ್ಣ ಪಾತ್ರದಿಂದಾಗಿ ಇದು ಕನ್ನಡನಾಡಿನ ಸಂಸ್ಕೃತಿ ಚರಿತ್ರೆಯ ಬಹು ಮುಖ್ಯ ಅಧ್ಯಾಯಗಳು ಆಗಿವೆ.ಆದರೆ ಇದೆಲ್ಲವನ್ನು ಮರೆತು ನಾವು ಓದಿದರೆ ಇದೊಂದು ಅತಿ ಸುಂದರವಾದ ಕಾದಂಬರಿಯಂಥ ಕಲಾಕೃತಿ.ಇದರಲ್ಲಿ ಚಿತ್ರಿತವಾಗಿರುವ ಕುವೆಂಪುರವರ ವ್ಯಕ್ತಿತ್ವ,ಕನ್ನಡ ಸಾಹಿತ್ಯದಲ್ಲಿನ ಅನನ್ಯ ಮತ್ತು ಅಸಾಧಾರಣ ದಾಖಲೆ." ಈ ಮಾತುಗಳನ್ನು ಪ್ರಕಾಶಕರು ಹೇಳಿದ್ದಾರೆ.
ತೇಜಸ್ವಿಯರ ಮುನ್ನುಡಿ ಕೂಡ ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲುವಂತಿದೆ.
"ನನ್ನ ಚಿಕ್ಕಂದಿನಿಂದಲೂ ನಾನು ಓದು ಮುಗಿಸುವವವರೆಗಿನ ನಮ್ಮ ತಂದೆಯ ನೆನಪುಗಳನ್ನು ನನ್ನ ದಿನಚರಿಯ ಮಾದರಿಯಲ್ಲಿ ಬರೆದಿದ್ದೇನೆ.ಅಣ್ಣನ ವೈವಿಧ್ಯಮಯ ವ್ಯಕ್ತಿತ್ವದಿಂದಾಗಿ ಈ ನೆನಪಿನ ಸರಣಿಯಲ್ಲಿ ರಾಜಕೀಯ ಮೀಮಾಂಸೆ, ತತ್ವಚಿಂತನೆ,ಕರ್ನಾಟಕ ಸಂಸ್ಕೃತಿ ಅವಲೋಕನ,ಸಾಹಿತ್ಯ ಮೀಮಾಂಸೆ,ಸಾಮಾಜಿಕ ಜಿಜ್ಞಾಸೆ,ಮುಂತಾದವೆಲ್ಲ ಮಿಳಿತಗೊಂಡಿವೆ.ಆದರೂ ನೆನಪುಗಳು ಸಂಕೀರ್ಣವಾಗದಂತೆ,ಜಟಿಲವಾಗದಂತೆ, ಸರಳವಾಗಿ,ಜೀವನದ ಸಹಜ ಲಯದಲ್ಲಿ ರೂಪಿಸಲು ಯತ್ನಿಸಿದ್ದೇನೆ ಇದನ್ನು ಬರೆಯುತ್ತ ಕುವೆಂಪುರವರೊಡನಿದ್ದ ಅನೇಕರು ತಮಗೆ ಗೊತ್ತಿದ್ದುದನ್ನೆಲ್ಲ ಕಾಗದ ಬರೆದು ನನಗೆ ಸ್ಪಷ್ಟಪಡಿಸಿದ್ದಾರೆ ಕೆಲವರು ಬಿದ್ದು ಬಿದ್ದು ನಕ್ಕು ಸ್ಫೂರ್ತಿ ನೀಡಿದ್ದಾರೆ.ಆ ಹಿರಿಕಿರಿಯರೆಲ್ಲರಿಗೂ ನನ್ನ ನಮಸ್ಕಾರಪೂರ್ವಕ ಕೃತಜ್ಞತೆಗಳು.ಇದನ್ನು ಬರೆಯುತ್ತಲೇ ಧಾರಾವಾಹಿಯಾಗಿ ಪ್ರಕಟಿಸಿದ ಗೆಳೆಯ ಲಂಕೇಶರಿಗೆ ನಾನು ಕೃತಜ್ಞ.ನನ್ನ ಬಳಿಯಿದ್ದ ಫೋಟೋಗಳ ಜೊತೆಗೆ ಅನೇಕರು ತಮ್ಮ ಬಳಿ ಇದ್ದ ಫೋಟೋಗಳನ್ನು ಒದಗಿಸಿ ತುಂಬಾ ಸಹಾಯ ಮಾಡಿದ್ದಾರೆ.ಅವೆಲ್ಲಾ ಕಲಬೆರಕೆಯಾಗಿ ಯಾರದ್ದು ಯಾವುದು ಎಂದು ತಿಳಿಯಲಾಗದೆ ಎಲ್ಲರಿಗೂ ಒಟ್ಟಾಗಿ ಕೃತಜ್ಞತೆ ಅರ್ಪಿಸಬೇಕಾಗಿದೆ.ಶ್ರೀ.ಜಿ.ಪಿ.ಬಸವರಾಜು,ಶ್ರೀ ನರೇಂದ್ರ ರೈದೇರ್ಲ,ಶ್ರೀ ಚೌಡಪ್ಪರೆಡ್ಡಿ,ಶ್ರೀ ಕೃಪಾಕರ ,ಶ್ರೀ ಸೇನಾನಿ,ಇವರೆಲ್ಲರಿಗೂ ನನ್ನ ಕೃತಜ್ಞತೆಗಳು. ಇದನ್ನು ಬರೆಯುತ್ತ ಪ್ರತಿ ಕಂತನ್ನೂ ಓದಿ, ತನ್ನ ಆರೋಗ್ಯವನ್ನೂ ನಿರ್ಲಕ್ಷಿಸಿ ನನ್ನೊಡನೆ ಮಾತಾಡಿ, ಬರೆಯಲು ಹುರಿದುಂಬಿಸಿದ ತಂಗಿ ಇಂದುಕಲಾಗೂ, ತಾರಿಣಿಗೂ ನನ್ನ ಕೃತಜ್ಞತೆಗಳು.ಎಲ್ಲಕ್ಕಿಂತ ಇದನ್ನು ಅಭೂತಪೂರ್ವವಾಗಿ ಮೆಚ್ಚಿದ ಕನ್ನಡಿಗರಿಗೆ ನನ್ನ ಕೃತಜ್ಞತೆಗಳು."ಇದು ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಮುನ್ನುಡಿಯ ಮಾತುಗಳು.
No comments:
Post a Comment